More

    ಭತ್ತದ ಗದ್ದೆಗೆ ಕಾಲುವೆ ನೀರು

    ಬೆಳ್ತಂಗಡಿ: ತಾಲೂಕಿನ ಮುಂಡೂರು ಗ್ರಾಮದಲ್ಲಿ ನೂರಾರು ವರ್ಷಗಳಿಂದ ಭತ್ತದ ಕೃಷಿ ಮಾಡುತ್ತಿದ್ದ ಗದ್ದೆಗೆ ಮಳೆಗಾಲದಲ್ಲಿ ಕಾಲುವೆ ನೀರು ಉಕ್ಕುವ ಪರಿಣಾಮ, ಕೃಷಿ ಚಟುವಟಿಕೆ ನಡೆಸಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಮುಂಡೂರು ಗ್ರಾಮದ ಪಾಪಿನಾಡೆ ಮತ್ತು ಹಿಬರೋಡಿ, ಕಿನಿಂಜೆ ಭಾಗದ 80 ಎಕರೆ ಮೇಲ್ಪಟ್ಟು ಗದ್ದೆಗಳು ನೆರೆ ಹಾವಳಿಯಿಂದ ಹಲವಾರು ವರ್ಷಗಳಿಂದ ಬೇಸಾಯ ಮಾಡದೇ ಹಡಿಲು ಬೀಳುವಂತಾಗಿದೆ.

    ನೆರೆಗೆ ಕಾರಣ ಸಮೀಪದಲ್ಲೇ ಹಾದು ಹೋಗುವ ನೀರಿನ ಕಾಲುವೆ. ಮೇಲಂತಬೆಟ್ಟು ಬ್ರಹ್ಮಬೈದರ್ಕಳ ಪ್ರದೇಶದಿಂದ ಹರಿದು ಬಂದು ಮುಂಡೂರು ಪ್ರದೇಶವಾಗಿ ಕೇಳ್ಕರ ನದಿ ಸೇರುವ ಈ ತೋಡು ಮುಂಡೂರು ಬಳಿ ಗದ್ದೆ ಪ್ರದೇಶಕ್ಕೆ ಸೇರುತ್ತಿದೆ.

    ಕಾಲುವೆಗೆ ತಡೆಗೋಡೆ ನಿರ್ವಹಣೆ ಇಲ್ಲದೆ ನಿರಂತರವಾಗಿ ನೀರು ಗದ್ದೆಗೆ ಹರಿಯುತ್ತದೆ. ಗ್ರಾಮಸ್ಥರೇ ಸೇರಿ 10ಕ್ಕೂ ಅಧಿಕ ಬಾರಿ ತಡೆಗೋಡೆ ರಚಿಸಿದರೂ ಮಳೆಗಾಲದ ರಭಸಕ್ಕೆ ತಡೆಗೋಡೆ ಕುಸಿದು, ನೀರು ಕೃಷಿಭೂಮಿ ಸೇರಿ ಸಮುದ್ರದ ರೂಪ ತಾಳುತ್ತದೆ. ಕಿಣಿಂಜೆ ಅನಿಲ್, ಪಾಪಿನಡೆ ರಾಜೀವ ಸುವರ್ಣ, ಅನಂದ ಸುವರ್ಣ, ಜಗನ್ನಾಥ, ಅರುಣ್ ಪೂಜಾರಿ ಕೆಳಗಿನ ಕೊಡಕ್ಕಾಲು, ನೋಣಯ್ಯ ಪೂಜಾರಿ ಇಬರೋಡಿ, ಅಪ್ಪಿಪೂಜಾರಿ ಇಬರೋಡಿ, ಜಯಾನಂದ ಪಾಪಿನಡೆ ಸೇರಿದಂತೆ ಹಲವರ ಗದ್ದೆ, ಅಡಕೆ ತೋಟಗಳು ಜಲಾವೃತವಾಗುತ್ತವೆ. ಹಿಂದಿನಿಂದಲೂ ಏಣೆಲು ಕೃಷಿ ನಡೆಸುತ್ತಿದ್ದ ರೈತರು ಇತ್ತೀಚಿನ ವರ್ಷಗಳಲ್ಲಿ ಭತ್ತ ನಾಟಿಯನ್ನೇ ಮರೆತಿದ್ದಾರೆ. 5 ವರ್ಷಗಳಿಂದ ಈ ಕುರಿತು ಸಂಬಂಧಪಟ್ಟ ಸ್ಥಳೀಯಾಡಳಿತ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.

    ರಸ್ತೆಯೂ ದುರ್ಗಮ: ನಡಕರ ಬಲಿನಿಂದ ಕೊಡಕ್ಕಾಲುವರೆಗೆ ಸುಮಾರು 30 ಮನೆಗಳಿಗೆ ಅಗತ್ಯವಿರುವ ಸಂಪರ್ಕ ರಸ್ತೆ ದುರ್ಗಮವಾಗಿದೆ. ಹಿಂದೆ ಹಸುಗಳನ್ನು ಮೇವಿಗಾಗಿ ಕೊಂಡೊಯ್ಯುತ್ತಿದ್ದ ಹಾದಿ ಕ್ರಮೇಣ ರಸ್ತೆಯಾಗಿದೆ. ಆದರೆ ರಸ್ತೆಯಲ್ಲೇ ಗುಡ್ಡ ಪ್ರದೇಶದ ನೀರು ಹರಿದುಹೋಗುತ್ತಿದೆ. ಇಲ್ಲಿ ಮೋರಿ ಅಳವಡಿಕೆ ಸಹಿತ ಅರ್ಧ ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಿಸುವಂತೆ ಜನತೆ ಬೇಡಿಕೆ ಇಟ್ಟಿದ್ದಾರೆ. ಮಳೆಗಾಲದಲ್ಲಿ ಮಳೆನೀರು ತೊಂದರೆಗೀಡು ಮಾಡಿದರೆ, ಬೇಸಿಗೆಯಲ್ಲಿ 15ಕ್ಕೂ ಅಧಿಕ ಮನೆಗಳಿಗೆ ನೀರಿನ ಸಮಸ್ಯೆ ಎದುರಾಗುತ್ತದೆ. ಕುಡಿಯುವ ನೀರಿಗಾಗಿ ನಡಕರಬಲಿನಿಂದ ಕೊಡಕ್ಕಾಲುವರೆಗೆ ನೀರಿನ ಪೈಪ್‌ಲೈನ್ ಅಳವಡಿಕೆಯಾಗಬೇಕು ಎಂಬುದು ಸಾರ್ವಜನಿಕರ ಮನವಿ.

    ಒಂದೊಂದು ಗದ್ದೆಗಳಲ್ಲಿ 60 ಮುಡಿ ಭತ್ತ ಬೆಳೆಯುವಷ್ಟು ಅನುಕೂಲಕರವಾಗಿದ್ದರೂ ತೋಡು ಬದು ಒಡೆಯುವುದರಿಂದ ಗದ್ದೆ ಬೇಸಾಯ ಮಾಡದೆ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ತೋಡಿಗೆ ತಡೆಗೋಡೆ, ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ನಡೆಸುವ ಕುರಿತು ಶಾಸಕರಲ್ಲಿ ಮನವಿ ಮಾಡಲಾಗಿದೆ.
    – ಸಂತೋಷ್ ಕುಮಾರ್, ಮುಂಡೂರು ವಾರ್ಡ್ ಸದಸ್ಯ

    ಮುಂಡೂರು ಸಮಸ್ಯೆ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ರೈತರೇ ಆರ್ಥಿಕತೆಯ ಮೂಲವಾದ್ದರಿಂದ ಅವರ ಅಗತ್ಯ ಬೇಡಿಕೆ ಈಡೇರಿಸುವಲ್ಲಿ ಅಗತ್ಯ ಕ್ರಮ ವಹಿಸಲಾಗುವುದು.
    – ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts