More

    ಕೋವಿಡ್ ಆಸ್ಪತ್ರೆಗಳಲ್ಲಿ ಕ್ಯಾಮರಾ ಕಣ್ಣು

    ಆನಂದ ಅಂಗಡಿ ಹುಬ್ಬಳ್ಳಿ
    ಕೋವಿಡ್ ವಾರ್ಡ್​ಗಳಲ್ಲಿ ರೋಗಿಗಳ ಆರೈಕೆಯ ಮೇಲೆ ಕಣ್ಗಾವಲು ಇಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಸಿ ಕ್ಯಾಮರಾಗಳ ಮೊರೆ ಹೋಗಿದೆ.
    ಸೋಂಕಿತರನ್ನು ದಾಖಲಿಸಿರುವ ವಾರ್ಡ್​ಗಳಲ್ಲಿ ಚಿಕಿತ್ಸೆ ಒದಗಿಸಲು ವೈದ್ಯರು ಹಾಗೂ ಇತರ ಸಿಬ್ಬಂದಿ ಸರಿಯಾಗಿ ಬರುವುದಿಲ್ಲ, ಕಾಲಕಾಲಕ್ಕೆ ರೋಗಿಗಳ ತಪಾಸಣೆ ಮಾಡುವುದಿಲ್ಲ. ಕೆಲವೆಡೆ ಸೋಂಕಿತರನ್ನು ಹೊಡೆಯಲಾಗುತ್ತಿದ್ದು, ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಸೋಂಕಿತರ ಸಂಬಂಧಿಕರಿಂದ ಕೇಳಿಬರುತ್ತಿವೆ.
    ಇದಲ್ಲದೆ, ವಾರ್ಡ್​ಗಳಲ್ಲಿ ಗ್ರುಪ್ ಡಿ ನೌಕರರು ಅನಗತ್ಯವಾಗಿ ಓಡಾಡುತ್ತಿರುವ ಬಗ್ಗೆಯೂ ಆರೋಪಗಳು ಇವೆ. ಸೋಂಕಿತರಿಗೆ ಆಸ್ಪತ್ರೆಯಿಂದಲೇ ಊಟ ಮತ್ತು ಉಪಾಹಾರ ನೀಡಲಾಗುತ್ತಿದ್ದರೂ ಕೆಲ ಸೋಂಕಿತರ ಸಂಬಂಧಿಕರು ಮನೆಯಿಂದ ಊಟ ತಂದು, ಗ್ರುಪ್ ಡಿ ನೌಕರರ ಮುಖಾಂತರ ಸೋಂಕಿತರಿಗೆ ತಲುಪಿಸುತ್ತಿದ್ದರೆನ್ನಲಾಗಿದೆ. ಸೋಂಕಿತರಿರುವ ವಾರ್ಡ್​ಗಳಲ್ಲಿ ಊಟ ತೆಗೆದುಕೊಂಡು ಹೋಗಿ, ನಂತರ ಊಟದ ಸಾಮಗ್ರಿಯನ್ನು ಮರಳಿ ಅವರ ಸಂಬಂಧಿಕರಿಗೆ ನೀಡುವುದರಿಂದಲೂ ಸೋಂಕು ಹರಡಲು ಕಾರಣವಾಗಿದೆ. ಇದನ್ನು ತಡೆಯುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಸೋಂಕಿತರಿರುವ ವಾರ್ಡ್​ಗಳಲ್ಲಿ ಸಮರ್ಪಕ ವೈದ್ಯಕೀಯ ಸೇವೆ ತಲುಪಿಸುವ ಜತೆಗೆ ಗ್ರುಪ್ ಡಿ ನೌಕರರ ಓಡಾಟ ತಡೆಯುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಸಿ ಕ್ಯಾಮರಾಗಳ ಮೊರೆ ಹೋಗಿದೆ.
    ರಾಜ್ಯದ ಎಲ್ಲ ಕೋವಿಡ್ ಆಸ್ಪತ್ರೆಗಳ ವಾರ್ಡ್ ಹಾಗೂ ಐಸಿಯುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ
    ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ಅವರು ಕಳೆದ ಮೇ 7ರಂದು ಆದೇಶ ಹೊರಡಿಸಿದ್ದಾರೆ. ವಾರ್ಡ್ ಹಾಗೂ ಐಸಿಯುಗಳಲ್ಲಿ ಸಿಸಿ ಕ್ಯಾಮರಾ ಹಾಗೂ ಮಾನಿಟರ್ ಅಳವಡಿಸಿಕೊಳ್ಳಲು ತಗಲುವ ವೆಚ್ಚವನ್ನು ಆರೋಗ್ಯ ರಕ್ಷಾ ಸಮಿತಿ ಅನುದಾನದಿಂದ ಅಥವಾ ಆಸ್ಪತ್ರೆಯಲ್ಲಿ ಲಭ್ಯವಿರುವ ಇತರ ಅನುದಾನದಿಂದ ಭರಿಸಿಕೊಳ್ಳಲು ಸೂಚಿಸಲಾಗಿದೆ. ಸಿಸಿ ಕ್ಯಾಮರಾ ಹಾಗೂ ಮಾನಿಟರ್ ಅಳವಡಿಸಿಕೊಳ್ಳುವಂತೆ ಕೋವಿಡ್ ಆಸ್ಪತ್ರೆಗಳ ನಿರ್ದೇಶಕರು, ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾ ಶಸ್ತ್ರಚಿಕಿತ್ಸಕರು, ಆಡಳಿತ ವೈದ್ಯಾಧಿಕಾರಿಗಳಿಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ಸೂಚಿಸಿದ್ದಾರೆ. ಕೋವಿಡ್ ಆಸ್ಪತ್ರೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲೆಗಳ ನೋಡಲ್ ಅಧಿಕಾರಿಗಳು ಪರಿಶೀಲಿಸಿ, ವರದಿ ಸಲ್ಲಿಸುವಂತೆ ಆಯುಕ್ತರು ನಿರ್ದೇಶನ ನೀಡಿದ್ದಾರೆ.

    ಕರೊನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಲಭಿಸಲಿ ಹಾಗೂ ಸರಿಯಾದ ರೀತಿಯಲ್ಲಿ ನಿರ್ವಹಣೆ ಆಗಲಿ ಎನ್ನುವ ಉದ್ದೇಶದಿಂದ ರಾಜ್ಯದ ಎಲ್ಲ ಕೋವಿಡ್ ಆಸ್ಪತ್ರೆಗಳ ವಾರ್ಡ್ ಮತ್ತು ಐಸಿಯುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಗಿದೆ.
    | ಡಾ. ಕೆ.ವಿ. ತ್ರಿಲೋಕಚಂದ್ರ
    ಆಯುಕ್ತರು, ಕರ್ನಾಟಕ ಆರೋಗ್ಯ ಮತ್ತು
    ಕುಟುಂಬ ಕಲ್ಯಾಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts