More

    3 ಜಿಲ್ಲೆಗಳ 180ಕ್ಕೂ ಹೆಚ್ಚು ಲೋಪ ಗುರುತಿಸಿದ ಸಿಎಜಿ

    ಕಾರವಾರ: ನಗರದ ಬೈತಖೋಲ್​ನಲ್ಲಿ ಪೆಟ್ರೋಲಿಯಂ ಸಂಗ್ರಹಾಗಾರ ನಿರ್ವಣಕ್ಕೆ ಅನುಮತಿ ನೀಡುವಲ್ಲಿ ಪರಿಸರ ನಿಯಮ ಪಾಲನೆಯಾಗಿಲ್ಲ ಎಂದು ಸಿಎಜಿ ವರದಿಯಲ್ಲಿ ಆಕ್ಷೇಪಿಸಲಾಗಿದೆ.

    ದೇಶದ ಕರಾವಳಿ ಪರಿಸರ ವ್ಯವಸ್ಥೆಗೆ ಸಂಬಂಧಿಸಿದಂತೆ ಕಂಟ್ರೋಲರ್ ಆಫ್ ಆಡಿಟರ್ ಜನರಲ್(ಸಿಎಜಿ) ತಯಾರಿಸಿದ ವರದಿಯನ್ನು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಆ. 8ರಂದು ಸಂಸತ್ತಿನಲ್ಲಿ ಮಂಡಿಸಿದೆ. ದೇಶದಲ್ಲಿ ಕರಾವಳಿ ತೀರವನ್ನು ಹೊಂದಿರುವ 9 ರಾಜ್ಯಗಳಲ್ಲಿ 2015ರಿಂದ 2020 ರವರೆಗೆ ನಡೆದ ವಿವಿಧ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಸಂದರ್ಭಕ್ಕೆ ತಕ್ಕಂತೆ ಕೆಲವು ಹಿಂದಿನ ಕಾಮಗಾರಿಗಳಲ್ಲಿನ ಲೋಪಗಳನ್ನೂ ಪ್ರಸ್ತಾಪಿಸಲಾಗಿದೆ. ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಒಟ್ಟು 180ಕ್ಕೂ ಹೆಚ್ಚು ಲೋಪಗಳನ್ನು ಈ ವರದಿಯಲ್ಲಿ ಗುರುತಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ವಿಷಯವೂ ವರದಿಯಲ್ಲಿ ಪ್ರಸ್ತಾಪವಾಗಿದೆ.

    2015ರಲ್ಲಿ ಕಾರವಾರ ಬೈತಖೋಲ್​ನಲ್ಲಿ ಪೆಟ್ರೋಲಿಯಂ ಸಂಗ್ರಹಾಗಾರ ನಿರ್ವಣಕ್ಕೆ ಖಾಸಗಿ ಕಂಪನಿಗೆ ಅನುಮತಿ ನೀಡಲಾಗಿದೆ. ಆದರೆ, ಸರಿಯಾದ ಪರಿಸರ ನಿರ್ವಹಣಾ ವರದಿ ಪಡೆದಿಲ್ಲ. ಪರಿಸರ ಅಧ್ಯಯನಕ್ಕೆ ಅಧಿಕೃತವಲ್ಲದ ಕಾರವಾರದ ಮರೈನ್ ಸೈನ್ಸ್ ರೀಸರ್ಚ್ ಇನ್ಸ್​ಟಿಟ್ಯೂಟ್​ನಿಂದ ಪರಿಸರ ಅಧ್ಯಯನ ವರದಿ ತಯಾರಿಸಿ ಸಲ್ಲಿಸಲಾಗಿದೆ. ಸೋರಿಕೆ ಉಂಟಾದಲ್ಲಿ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಬಗ್ಗೆ ವರದಿಯಲ್ಲಿ ಪ್ರಸ್ತಾಪವಿಲ್ಲ. ಮಾತ್ರವಲ್ಲ, ನಿಯಮದಂತೆ ಪ್ರತಿ ವರ್ಷದ ಟ್ಯಾಂಕರ್ ನಿರ್ವಹಣೆ, ಸುರಕ್ಷತೆಯ ವ್ಯವಸ್ಥೆಯ ಬಗ್ಗೆ ಆನ್​ಲೈನ್​ನಲ್ಲಿ ನಮೂದಿಸಬೇಕು. ಅದನ್ನೂ ಮಾಡಲಾಗಿಲ್ಲ ಎಂದು ಆಕ್ಷೇಪಿಸಲಾಗಿದೆ.

    ಸಮುದ್ರಕ್ಕೆ ಕೊಳಚೆ: ರಾಜ್ಯ ಕರಾವಳಿಯ 12 ಪ್ರಮುಖ ಶಹರಗಳ ಪೈಕಿ 11ರಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲ. ಕೊಳಚೆ ನೀರನ್ನು ನೇರವಾಗಿ ಸಮುದ್ರಕ್ಕೆ ಬಿಡಲಾಗುತ್ತಿದೆ. ಮಂಗಳೂರು ಹೊರತುಪಡಿಸಿ ಉಳಿದೆಲ್ಲೂ ಸಂಪೂರ್ಣ ಒಳಚರಂಡಿ ವ್ಯವಸ್ಥೆ ಇಲ್ಲ. ಕಾರವಾರ ಹಾಗೂ ಭಟ್ಕಳದಲ್ಲಿ ಈ ವ್ಯವಸ್ಥೆ ಅರೆಬರೆಯಾಗಿದೆ. ರಾಜ್ಯದ ಕರಾವಳಿ ನಗರಗಳಿಂದ ಪ್ರತಿ ದಿನ 7.5 ಮಿಲಿಯನ್ ಲೀಟರ್ ಕೊಳಚೆ ನೀರನ್ನು ಸಮುದ್ರಕ್ಕೆ ಬಿಡಲಾ ಗುತ್ತದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಮುರ್ಡೆಶ್ವರದಲ್ಲಿ ಕೊಳಚೆ ನೀರನ್ನು ಸಮುದ್ರಕ್ಕೆ ಬಿಡುತ್ತಿರುವ ಫೋಟೋವನ್ನೂ ಕೂಡ ಬಳಸಲಾಗಿದೆ.

    ತಡೆಗೋಡೆ: ಕುಮಟಾ ಅಘನಾಶಿನಿ ನದಿಯ ಎಡ ದಂಡೆಯಲ್ಲಿ ಸಿಆರ್​ಜಡ್ ವಲಯದಲ್ಲಿ ಯಾವುದೇ ಅನುಮತಿ ಇಲ್ಲದೇ 7.76 ಕಿಮೀ ತಡೆಗೋಡೆ ನಿರ್ವಿುಸಲಾಗಿದೆ ಎಂದು ಪ್ರಸ್ತಾಪಿಸಲಾಗಿದೆ. ಕರಾವಳಿಯ ಸಿಆರ್​ಜಡ್ ಅಕ್ರಮಗಳ ಬಗ್ಗೆ ನಿಗಾ ಇಡಲು ಹಾಗೂ ಅನುಮತಿ ನೀಡಲು ರಚಿಸಬೇಕಾಗಿದ್ದ ರಾಜ್ಯಮಟ್ಟದ ಸಮಿತಿ (ಸಿಜಡ್​ಎಂಎ) ರಚಿಸಲು ರಾಜ್ಯ ಸರ್ಕಾರ ವಿಳಂಬ ಮಾಡಿದೆ. ಅಲ್ಲದೆ, ನೌಕರರ ಕೊರತೆಯೂ ಗಂಭೀರವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಏನಿದು ಸಿಎಜಿ..?

    ಕಂಟ್ರೋಲರ್ ಆಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ ಭಾರತೀಯ ಸಂವಿಧಾನದ 148ನೇ ವಿಧಿಯಂತೆ ರಚನೆಯಾದ ಸಂಸ್ಥೆಯಾಗಿದೆ. ಕೇಂದ್ರ ಸರ್ಕಾರದ ಅನುದಾನ ಪಡೆದು ನಡೆಯುವ ಸರ್ಕಾರಿ ಕೆಲಸಗಳು ಹಾಗೂ ಅವುಗಳ ನಿಯಮ ಪಾಲನೆಯ ಕುರಿತು ಆಡಿಟ್ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ಸಾಮಾನ್ಯವಾಗಿ ಬೇರೆ ಬೇರೆ ಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರತಿ ಐದು ವರ್ಷಗಳಿಗೊಮ್ಮೆ ವರದಿ ಸಿದ್ಧಪಡಿಸಲಾಗುತ್ತದೆ. ಪರಿಸರ ನಿಯಮಾವಳಿಯ ಕುರಿತು ಇತ್ತೀಚಿನ ದಶಕದಲ್ಲಿ ಸಿದ್ಧ ಮಾಡಿದ ಮೊದಲ ವರದಿ ಇದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts