More

    ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ

    ಶಿರಸಿ: ಉಪಚುನಾವಣೆಯಲ್ಲಿ ಆಯ್ಕೆಯಾದವರು ಸಚಿವರಾಗುವಲ್ಲಿ ವಿಳಂಬವಾಗಲು ಮುಖ್ಯಮಂತ್ರಿಗಳ ತಪ್ಪಿಲ್ಲ. ಬದಲಾಗಿ ನಮ್ಮ ಸಮಯ ಸರಿಯಿಲ್ಲದೆ ತಡವಾಗುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಪ್ರತಿಕ್ರಿಯಿಸಿದರು.

    ತಾಲೂಕಿನ ಬಿಸ್ಲಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಕ್ಕಂಬಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ಈ ತಿಂಗಳ 17 ಅಥವಾ 18ರಂದು ಅಂತಿಮವಾಗಲಿದೆ. ಈ ಕುರಿತು ಯಡಿಯೂರಪ್ಪ ಅವರು ಮಾಧ್ಯಮದಲ್ಲೇ ತಿಳಿಸಿದ್ದಾರೆ. ರಾಜಕಾರಣದಲ್ಲಿ ಆಸೆಗೆ ಒಂದು ಮಿತಿಯಿರಬೇಕು. ಕಾರ್ಯಕರ್ತರಿದ್ದಾಗ ಶಾಸಕರಾಗಬೇಕು, ಶಾಸಕರಾದ ಮೇಲೆ ಮಂತ್ರಿ ಆಗಬೇಕು, ಮಂತ್ರಿ ಆದ ಮೇಲೆ ಉತ್ತಮ ಖಾತೆ ಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೇರಿಸಲು ಸಾಧ್ಯವಿಲ್ಲ. ನಮ್ಮ ಶಕ್ತಿ ಸಾಮರ್ಥ್ಯ ನೋಡಿ ಸೂಕ್ತ ಸ್ಥಾನಮಾನ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಯಲ್ಲಾಪುರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ 140 ಕೋಟಿ ರೂ. ಬಿಡುಗಡೆಗೊಳಿಸಿ ಕಾಮಗಾರಿಗೆ ಆದೇಶ ನೀಡಲಾಗಿದೆ. ಚಿಕ್ಕ ನೀರಾವರಿ ಇಲಾಖೆ ಸಂಬಂಧ ಮುಂಡಗೋಡ 43 ಕೋಟಿ ರೂ., 21 ಕೋಟಿ ರೂ. ಬನವಾಸಿ ಭಾಗಕ್ಕೆ ನೀಡಲಾಗಿದೆ ಎಂದರು.

    ಮಳೆಗಾಲದ ಸಂದರ್ಭದಲ್ಲಿ ಹಾನಿಗೀಡಾಗಿರುವ ಶಿಡ್ಲಗುಂಡಿ ಸೇತುವೆಯ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಿ, ಮುಂದಿನ ಮಳೆಗಾಲದೊಳಗೆ ಮುಗಿಯಲಿದೆ. ಇನ್ನು ಬೇಡ್ತಿ ಸೇತುವೆಯೂ ಮಳೆಗಾಲದ ಒಳಗೆ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

    ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಜಿ.ಕೆ. ಹೆಗಡೆ, ಎಸ್.ಎನ್. ಹೆಗಡೆ, ಚಂದ್ರು ದೇವಾಡಿಗ, ನರಸಿಂಹ ಹೆಗಡೆ, ಪ್ರಶಾಂತ ಗೌಡ, ಬಿ.ಎಸ್. ಗಂಗಾಧರ ಇತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts