More

    ಸಚಿವ ಸಂಪುಟ ವಿಸ್ತರಣೆ: ಖಾತೆಗಳಿಗಾಗಿ ತೀವ್ರ ಪೈಪೋಟಿ

    ಬೆಂಗಳೂರು: ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾದ ಬೆನ್ನ ಹಿಂದೆಯೇ ಉಪಚುನಾವಣೆ ಗೆದ್ದ ಶಾಸಕರಲ್ಲಿ ಪ್ರಭಾವಿ ಖಾತೆಗಳಿಗೆ ಪೈಪೋಟಿ ಆರಂಭವಾಗಿದೆ. ರಾಜಧಾನಿ ಶಾಸಕರು ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿದ್ದರೆ, ಉಳಿದವರು ಲೋಕೋಪಯೋಗಿ, ಸಮಾಜ ಕಲ್ಯಾಣ, ಜಲಸಂಪನ್ಮೂಲ, ಇಂಧನ ಖಾತೆಗಳಿಗೆ ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ವಿಸ್ತರಣೆಗೆ ಮುನ್ನವೇ ಸಿಎಂಗೆ ದೊಡ್ಡ ತಲೆನೋವು ಆರಂಭವಾಗಿದೆ. ಬೈರತಿ ಬಸವರಾಜು ಹಾಗೂ ಎಸ್.ಟಿ.ಸೋಮಶೇಖರ್ ನಡುವೆ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಒತ್ತಾಯ ಕೇಳಿ ಬಂದಿದೆ. ಬೆಂಗಳೂರಿನ ಮೂಲ ಬಿಜೆಪಿ ಸಚಿವರು ಸಹ ಈ ಖಾತೆ ಬಗ್ಗೆ ಆಸೆ ವ್ಯಕ್ತಪಡಿಸಿದ್ದಾರೆ. ಸಿಎಂ ಬಳಿಯೇ ಈ ಖಾತೆ ಇದೆ. ರಮೇಶ್ ಜಾರಕಿಹೊಳಿ ಜಲಸಂಪನ್ಮೂಲಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದೊಂದು ಪ್ರಮುಖ ಖಾತೆಯಾಗಿದ್ದು ನ್ಯಾಯಾಲಯ ಪ್ರಕರಣಗಳು, ಅಂತಾರಾಜ್ಯ ವಿವಾದ, ಕೇಂದ್ರದ ಜತೆ ಸಂಪರ್ಕ ಇರುವುದರಿಂದ ಜವಾಬ್ದಾರಿಯಿಂದ ಖಾತೆ ನಿರ್ವಹಣೆ ಮಾಡುವವರಿಗೆ ನೀಡಬೇಕೆಂದು ಮೂಲ ಬಿಜೆಪಿಗರ ಒತ್ತಾಯವಾಗಿದೆ. ಆ ಮೂಲಕ ರಮೇಶ್ ಆಸೆಗೆ ತಣ್ಣೀರು ಎರಚುವ ಪ್ರಯತ್ನ ಮಾಡುತ್ತಿದ್ದಾರೆ. ವರಿಷ್ಠರು ಯಾರಿಗೆ ಯಾವ ಖಾತೆ ನೀಡುತ್ತಾರೆಂಬುದು ಕುತೂಹಲಕ್ಕೆ ಕಾರಣವಾಗಿದೆ.

    ನನಗೆ ಅನ್ಯಾಯ ಮಾಡಬೇಡಿ: ಬಿಜೆಪಿ ಸರ್ಕಾರ ಬರಲು ಜೋಡೆತ್ತಿನಂತೆ ಕೆಲಸ ಮಾಡಿದ್ದು ನಾನು ಹಾಗೂ ರಮೇಶ್ ಜಾರಕಿಹೊಳಿ. ನನಗೆ ಹೆಚ್ಚು ಅನ್ಯಾಯ ಮಾಡದೆ ಗುರುವಾರ ಮಂತ್ರಿ ಸ್ಥಾನ ನೀಡಬೇಕು ಎಂದು ಆರ್.ಶಂಕರ್ ಒತ್ತಾಯಿಸಿದರು. ರಾಣೇಬೆನ್ನೂರಿನಲ್ಲಿ ಟಿಕೆಟ್ ಕೊಡದೆ ಇದ್ದಾಗ ವಿಧಾನಪರಿಷತ್​ಗೆ ಆಯ್ಕೆ ಮಾಡಿ ಮಂತ್ರಿ ಮಾಡುವುದಾಗಿ ಹೇಳಿದ್ದರು. ಆದರೀಗ ಆ ಸ್ಥಾನವನ್ನು ಲಕ್ಷ್ಮಣ ಸವದಿಗೆ ಕೊಟ್ಟಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಹಳ ದಿನಗಳಿಂದ ಸಚಿವರಾಗಲು ಕಾಯುತ್ತಿದ್ದೇವೆ. ಜನ ಯಾವಾಗ ಸಚಿವರಾಗುತ್ತೀರಿ ಎಂದೇ ಕೇಳುತ್ತಿದ್ದಾರೆ. ಸಿಎಂ ಕೊಟ್ಟ ಮಾತಿನಂತೆ ನಡೆಯುತ್ತಾರೆಂಬ ವಿಶ್ವಾಸವಿದೆ. ಫೆ.6ರ ತನಕ ಕಾದು ನೋಡುತ್ತೇನೆ ಎಂದರು.

    ಮಧ್ಯ ಕರ್ನಾಟಕಕ್ಕೂ ಅವಕಾಶ ಕೊಡಿ: ಮಧ್ಯ ಕರ್ನಾಟದ ದಾವಣಗೆರೆ ಜಿಲ್ಲೆಗೂ ಆದ್ಯತೆ ಕೊಡಬೇಕು. ರೇಣುಕಾಚಾರ್ಯಗೆ ಸಚಿವ ಸ್ಥಾನ ಕೊಡಿ ಅಂತಲ್ಲ. ಗೆದ್ದವರಿಗೆ ಸಚಿವ ಸ್ಥಾನ ಕೊಡಬೇಕು ಅನ್ನೋದು ನಮ್ಮ ಮನವಿ. ಮುಖ್ಯಮಂತ್ರಿ, ವರಿಷ್ಠರು ಇದನ್ನು ಪರಿಗಣಿಸಲಿ ಎಂಬುದು ಶಾಸಕರ ಭಾವನೆ. ಬಂಡಾಯ ಅಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts