More

    ಕೆಲಸಕ್ಕೆ ಬೈ, ಸ್ಟಾರ್ಟಪ್​ಗೆ ಹಾಯ್!

    ಜಗತ್ತಿನಲ್ಲೇ ಒಂದು ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವ ಭಾರತದಂತಹ ದೇಶಕ್ಕೆ ತಿಂಗಳಿಗೆ 10 ಲಕ್ಷ ಹಾಗೂ ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿಸುವ ಅನಿವಾರ್ಯತೆ ಇದೆ. ಈ ದಿಸೆಯಲ್ಲಿ ಮೂಡಿರುವ ಆಶಾಕಿರಣವೇ ಸ್ಟಾರ್ಟ್​ಅಪ್ ಸಂಸ್ಕೃತಿ. ಯುವಜನರ ಸಾಹಸಪ್ರವೃತ್ತಿಯ ಸಂಕೇತವಾಗಿರುವ ಈ ಸಂಸ್ಕೃತಿಯನ್ನು ಕೇಂದ್ರ ಸರ್ಕಾರವೂ ಪೋಷಿಸುತ್ತಿದೆ. ಹಾಗಾದರೆ ಸ್ಟಾರ್ಟ್​ಅಪ್ ಆರಂಭಿಸುವವರಿಗೆ ಏನೇನು ಪ್ರೋತ್ಸಾಹ ಸಿಗುತ್ತಿದೆ… ಬನ್ನಿ, ನೋಡೋಣ.

    | ಪ್ರೊ. ಪಿ. ಪರಮಶಿವಯ್ಯ, ಡಾ. ಗಿರೀಶ ವೈ.ಎಂ.

    ಯಾವುದೇ ದೇಶದಲ್ಲಿ ಉದ್ಯೋಗವನ್ನು ಸೃಷ್ಟಿಸುವುದು ಕೇವಲ ದೊಡ್ಡ ಕಂಪನಿಗಳ ಅಥವಾ ಸರ್ಕಾರದ ಜವಾಬ್ದಾರಿ ಅಲ್ಲ. ಇದನ್ನು ಮನಗಂಡ ಕೇಂದ್ರ ಸರ್ಕಾರ ದೇಶದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಹಾಗೂ ಸ್ವಉದ್ಯಮಶೀಲತೆಯನ್ನು ಉತ್ತೇಜಿಸಲು ಮೇಕ್ ಇನ್ ಇಂಡಿಯಾ ಎಂಬ ಕಾರ್ಯಕ್ರಮವನ್ನು 2014ರಲ್ಲಿ ಪರಿಚಯಿಸಿತು. ಎಷ್ಟೋ ಇಂಜಿನಿಯರಿಂಗ್, ಮ್ಯಾನೇಜ್​ವೆುಂಟ್ ವಿದ್ಯಾರ್ಥಿಗಳು, ಎಲ್ಲಿಯೋ ಕೆಲಸಕ್ಕೆ ಅರ್ಜಿ ಸಲ್ಲಿಸುವುದನ್ನು ಬಿಟ್ಟು, ತಾವೇ ಸ್ವಉದ್ಯಮಕ್ಕೆ ಕೈ ಹಾಕಿ ಉಳಿದ ಪದವೀಧರರಿಗೆ, ಉದ್ಯೋಗಗಳನ್ನು ನೀಡಲು ಇದು ಅವಕಾಶ ಸೃಷ್ಟಿಸಿತು. ಈ ಸ್ಟಾರ್ಟ್​ಅಪ್ ಕಂಪನಿಗಳು ಸಮೀಕ್ಷೆಗಳನ್ನು ನಡೆಸುವುದರಲ್ಲಿ ನಿರತವಾಗಿರುತ್ತವೆ. ಪ್ರಸ್ತುತ ಗ್ರಾಹಕ ಏನನ್ನು ಬಯಸುತ್ತಿದ್ದಾನೆ? ಅವನನ್ನು ಯಾವ ಸರಕು ಅಥವಾ ಸೇವೆಯ ಮೂಲಕ ತೃಪ್ತಿಪಡಿಸಬಹುದು? ಯಾವ ವಿಭಿನ್ನ ರೀತಿಯಲ್ಲಿ ಹೊಸದಾಗಿ ಮಾರುಕಟ್ಟೆಗಳನ್ನು ಸೃಷ್ಟಿ ಮಾಡಿಕೊಳ್ಳಬಹುದು ಎಂದು ನಾನಾ ರೀತಿಯಲ್ಲಿ ಚಿಂತಿಸುತ್ತಾರೆ. ಇಂತಹ ಸ್ಟಾರ್ಟ್​ಅಪ್ ಸಂಸ್ಕೃತಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಸ್ವಉದ್ಯಮದಾರರಿಗೆ ಸಾಕಷ್ಟು ಸವಲತ್ತುಗಳನ್ನು ಮಾಡಿಕೊಟ್ಟಿದೆ.

    ಸುಲಭ ಪ್ರಕ್ರಿಯೆ: ಮೊಬೈಲ್ ಆಪ್ ಹಾಗೂ ವೆಬ್​ಸೈಟ್ ಮೂಲಕ ಉದ್ಯಮದಾರರಿಗೆ ತಮ್ಮ ಕಂಪನಿಯ ಹೆಸರನ್ನು ನೋಂದಾಯಿಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಇದು ಅತ್ಯಂತ ಸುಲಭ ವಿಧಾನ. ಸಂಬಂಧಪಟ್ಟ ದಾಖಲೆಯನ್ನು ಆನ್​ಲೈನ್ ಮೂಲಕವೇ ಅಪ್ ಲೋಡ್ ಮಾಡಬಹುದು.

    ಕಡಿಮೆ ವೆಚ್ಚ: ಸರ್ಕಾರ ಅತ್ಯಂತ ಕಡಿಮೆ ದರದಲ್ಲಿ ಪೇಟೆಂಟ್ ಹಾಗೂ ಬೌದ್ಧಿಕ ಆಸ್ತಿ ಹಕ್ಕು ಪಡೆಯಲು ಅನುವು ಮಾಡಿಕೊಟ್ಟಿದೆ. ಸ್ಟಾರ್ಟಪ್​ಗಳು ಸುಮಾರು ಶೇ. 80 ರಿಯಾಯಿತಿಯನ್ನು ಪೇಟೆಂಟ್ ವೆಚ್ಚದ ಮೇಲೆ ಪಡೆಯುತ್ತವೆ. ಸರಕಾರವೇ ಫೆಸಿಲೇಟರ್ ವೆಚ್ಚವನ್ನೂ ಭರಿಸುತ್ತದೆ.

    ಆದಾಯ ತೆರಿಗೆ ವಿನಾಯಿತಿ: ಕಂಪನಿಯ ಹೆಸರನ್ನು ನೋಂದಾಯಿಸಿದ ಮೇಲೆ ಮೊದಲ ಮೂರು ವರ್ಷಗಳವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ.

    ಹೂಡಿಕೆಯ ಹರಿವು: ಸರ್ಕಾರ ಸುಮಾರು 10,000 ಕೋಟಿ ರೂ. ನಿಧಿಯನ್ನು ಸ್ವಉದ್ಯಮದಾರರಿಗೆ ಮೀಸಲಿರಿಸಿದೆ. ವೆಂಚರ್ ಕ್ಯಾಪಿಟಲ್ ಮೂಲಕ ಆರ್ಥಿಕ ಸಹಾಯವನ್ನೂ ನೀಡುತ್ತದೆ. ಸರ್ಕಾರಿ ಟೆಂಡರ್​ಗಳಿಗೂ ಸ್ಟಾರ್ಟಪ್​ಗಳು ಅರ್ಜಿ ಸಲ್ಲಿಸಬಹುದು. ಎಲ್ಲ ಸ್ಟಾರ್ಟಪ್​ಗಳೂ ‘ಪ್ರಯರ್ ಎಕ್ಸ್​ಪೀರಿಯನ್ಸ್/ ಟನೋವರ್’ ಕೆಟಗರಿಯಿಂದ ವಿನಾಯಿತಿ ಪಡೆಯುತ್ತವೆ.

    ನಿರ್ಗಮನವೂ ಸುಲಭ: ಒಂದು ವೇಳೆ ಸ್ವಉದ್ಯಮದಾರರು, ತಮ್ಮ ಹೊಸ ವ್ಯಾಪಾರದಲ್ಲಿ ವೈಫಲ್ಯ ಅನುಭವಿಸಿದಲ್ಲಿ ವ್ಯಾಪಾರ ಪ್ರಾರಂಭವಾದ 90 ದಿನಗಳ ಒಳಗಾಗಿ ತಮ್ಮ ಕಂಪನಿಯನ್ನು ಮುಚ್ಚಲು ಅವಕಾಶವಿದೆ.

    ಭಾರತದ ಯಶಸ್ವಿ ಸ್ಟಾರ್ಟಪ್​ಗಳು: ಸ್ವಿಗ್ಗೀ ಕನ್ಸೂಮರ್ ಸರ್ವೀಸಸ್, ಫ್ಲಿಪ್​ಕಾರ್ಟ್, ಬೈಜೂಸ್ – ಎಡ್​ಟೆಕ್, ಇನ್​ವೋನಿ ಆಡ್​ಟೆಕ್, ಪೇಟಿಎಂ, ಓಲಾ-ಮೊಬಿಲಿಟಿ, ಫ್ರೆಶ್​ವರ್ಕ್ಸ್ ಎಂಟರ್​ಪ್ರೈಸ್​ಟೆಕ್, ಡೆಲಿವರಿ ಲಾಜಿಸ್ಟಿಕ್ಸ್, ಡ್ರೀಮ್ 11 ಮೀಡಿಯಾ ಅಂಡ್ ಎಂಟರ್​ಟೇನ್​ವೆುಂಟ್, ಓಯೋ ಟ್ರಾವೆಲ್​ಟೆಕ್

    ಓದಲೇಬೇಕಾದ ಪುಸ್ತಕಗಳು: ಸ್ಟಾರ್ಟಪ್ ಶುರು ಮಾಡಬೇಕೆಂದರೆ ಅದಕ್ಕೆ ಮೊದಲು ಪೂರ್ವ ಸಿದ್ಧತೆ ಅತ್ಯಗತ್ಯ. ಈ ಬಗ್ಗೆ ಎಲ್ಲ ಮಾಹಿತಿ ನೀಡುವ ಅನೇಕ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. 1. ಸ್ಟೇ ಹಂಗ್ರಿ.. ಸ್ಟೇ ಫೂಲಿಶ್; 2. ಕನೆಕ್ಟ್​ ದ ಡಾಟ್ಸ್; ಈ ಪುಸ್ತಕಗಳ ಲೇಖಕರು ರಶ್ಮಿ ಬನ್ಸಲ್. ಐಐಎಂ ಪದವೀಧರರು. ದೊಡ್ಡದೊಡ್ಡ ಕಂಪನಿಗಳು ತಮಗೆ ಆಫರ್ ಮಾಡಿದ ಉದ್ಯೋಗಗಳನ್ನು ತ್ಯಜಿಸಿ, ಹೇಗೆ ಯಶಸ್ವಿ ಉದ್ದಿಮೆದಾರರಾಗಿ ಹೊರ ಹೊಮ್ಮಿದರು ಎಂಬುದರ ಬಗ್ಗೆ ಸವಿಸ್ತಾರ ಚಿತ್ರಣವನ್ನು ಈ ಪುಸ್ತಕಗಳಲ್ಲಿ ನೀಡಲಾಗಿದೆ.

    ಸ್ಟಾರ್ಟಪ್​ ಹಬ್ ಆಗಲಿದೆ ಭಾರತ: ಇತ್ತೀಚಿನ ನ್ಯಾಸ್ಕಾಮ್ ವರದಿಯ ಪ್ರಕಾರ ಭಾರತದ ಸ್ಟಾರ್ಟಪ್​ಗಳು ಕೇವಲ ಒಂದು ವರ್ಷದಲ್ಲಿ 108% ಬೆಳವಣಿಗೆಯನ್ನು ಸಾಧಿಸಿವೆ. ಭಾರತ ಮುಂದಿನ ದಿನಗಳಲ್ಲಿ ಯಶಸ್ವಿ ಸ್ಟಾರ್ಟಪ್ ಕೇಂದ್ರವಾಗುವುದರಲ್ಲಿ ಸಂದೇಹವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts