ಮಂಗಳೂರು ಲಾಲ್‌ಭಾಗ್‌ನಲ್ಲಿ ಮನ ಸೆಳೆವ ಚಿಟ್ಟೆ ಪಾರ್ಕ್

5

ಹರೀಶ್ ಮೋಟುಕಾನ, ಮಂಗಳೂರು
ನಾಲ್ಕು ವರ್ಷಗಳ ಹಿಂದೆ ಕಸದ ಕೊಂಪೆಯಾಗಿ, ಮದ್ಯ, ಗಾಂಜಾ ವ್ಯಸನಿಗಳ ಅಡ್ಡೆಯಾಗಿದ್ದ ಮಂಗಳಾ ಸ್ಟೇಡಿಯಂ ಹಿಂಭಾಗದ ಮೂರು ಎಕರೆ ಜಾಗ ಸ್ಥಳ, ಇದೀಗ ಇಬ್ಬರು ಪರಿಸರ ಪ್ರೇಮಿಗಳ ಶ್ರಮದ ಪರಿಣಾಮ ಬಣ್ಣ ಬಣ್ಣದ ಹೂವುಗಳಿಂದ ಕೂಡಿದ ಉದ್ಯಾನವಾಗಿ, ಚಿಟ್ಟೆಗಳ ವಾಸಸ್ಥಾನವಾಗಿದೆ.

ಹಿಂದೆ ಪ್ಲಾಸ್ಟಿಕ್, ಬಾಟಲ್‌ಗಳಿಂದ ತುಂಬಿದ್ದ ಈ ಜಾಗಕ್ಕೆ ಬರಲು ಜನರು ಹಿಂದೇಟು ಹಾಕುತ್ತಿದ್ದರು. ಆ ಜಾಗದಲ್ಲಿ ಈಗ 6 ಸಾವಿರದಷ್ಟು ಹೂವು-ಹಣ್ಣಿನ ಗಿಡ, ಔಷಧ ಗಿಡಗಳು ನಳನಳಿಸುತ್ತಿವೆ. ಹಿಂಡು ಹಿಂಡಾಗಿ ಬರುವ ಚಿಟ್ಟೆಗಳು, ಹಕ್ಕಿಗಳು ನೋಡುಗರ ಮನ ಸೆಳೆಯುತ್ತಿವೆ.

ಈ ಬದಲಾವಣೆಗೆ ಕಾರಣರಾದವರು ರವಿರಾಜ್ ಶೆಟ್ಟಿ ಹಾಗೂ ಎಂ.ಡಿ.ಶ್ರೀಕುಮಾರ್. ಪ್ರತಿ ದಿನ ಬೆಳಗ್ಗೆ 2 ಗಂಟೆ ಈ ಉದ್ಯಾನವನದಲ್ಲಿ ಅವರು ಸ್ವಯಂಪ್ರೇರಿತರಾಗಿ ಕೆಲಸ ಮಾಡುತ್ತಾರೆ. ತರಗೆಲೆ ತೆಗೆದು ಸ್ವಚ್ಛ ಮಾಡುತ್ತಾರೆ. ಊರಿನಿಂದ, ಮನೆಗಳಿಂದ ಗಿಡಗಳನ್ನು ತಂದು ನೆಡುತ್ತಾರೆ. ಇಲ್ಲಿ ನೂರಕ್ಕೂ ಅಧಿಕ ವೈವಿಧ್ಯಮಯ ದಾಸವಾಳದ ಗಿಡಗಳಿವೆ. ಸ್ವಂತ ಖರ್ಚಿನಿಂದ ಗೊಬ್ಬರ ತರುತ್ತಾರೆ. ಈ ಗಿಡಗಳು ಸುಂದರವಾಗಿ ಬೆಳೆದಿವೆ. ಈ ಉದ್ಯಾನವನ್ನು ಅಭಿವೃದ್ಧಿ ಪಡಿಸಿದ ಬಗ್ಗೆ ಅವರು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಸದ್ದಿಲ್ಲದೆ ತಮ್ಮ ಪರಿಸರ ಕಾಳಜಿವನ್ನು ಮುಂದುವರಿಸುತ್ತಿದ್ದಾರೆ.

ಇದರಿಂದ ಏನು ಪ್ರಯೋಜನ?: ಈ ಉದ್ಯಾನವನಕ್ಕೆ ಹಿರಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಾಕಿಂಗ್‌ಗಾಗಿ ಬರುತ್ತಾರೆ. ಹೂವು, ಚಿಟ್ಟೆಗಳನ್ನು ನೋಡುತ್ತ ಸಂತೋಷಪಡುತ್ತಾರೆ. ಮಕ್ಕಳು ಆಡುತ್ತಾರೆ. ಇಲ್ಲಿ ಉದ್ಯಾನವನವಾದ ಬಳಿಕ ವಿವಿಧ ಜಾತಿಯ ಹಕ್ಕಿಗಳು ಬರುತ್ತಿವೆ. ಅವುಗಳಿಗಾಗಿ ಗೂಡುಗಳನ್ನು ಮಾಡಿ ಆಹಾರ, ನೀರಿನ ವ್ಯವಸ್ಥೆ ಮಾಡಲಾಗಿದೆ. ಕೆಲವೊಮ್ಮೆ ನವಿಲುಗಳ ನರ್ತನವೂ ಕಾಣಸಿಗುತ್ತದೆ.

ನೀರಿನದ್ದೇ ಸಮಸ್ಯೆ: ಹೂವು, ಹಣ್ಣಿನ ಗಿಡಗಳಿಗೆ ಬೇಸಿಗೆಯಲ್ಲಿ ನೀರುಣಿಸಬೇಗುತ್ತದೆ. ಪಾಲಿಕೆ ಹಾಗೂ ಮಂಗಳಾ ಸ್ಟೇಡಿಯಂ ಅಧಿಕಾರಿಗಳಿಗೆ ಹಲವು ಬಾರಿ ನೀರು ಒದಗಿಸುವಂತೆ ಹಲವು ಬಾರಿ ಮಾಡಿದ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ನಾವು ಪರಿಸರದ ಮೇಲಿನ ಪ್ರೀತಿಯಿಂದ ಈ ಕೆಲಸ ಮಾಡಿದ್ದೇವೆ. ಬೇಸಿಗೆಯಲ್ಲಿ ನೀರು ಪೂರೈಸಿ ಸಹಕಾರ ನೀಡಿದರೆ ಇನ್ನಷ್ಟು ಅಭಿವೃದ್ಧಿ ಸಾಧ್ಯ ಎಂಬುದು ಈ ಪರಿಸರ ಪ್ರೇಮಿಸಗಳ ಮಾತು.

ನಾಲ್ಕು ವರ್ಷಗಳ ಹಿಂದೆ ತ್ಯಾಜ್ಯ ರಾಶಿಯ ಕಾರಣಕ್ಕೆ ಯಾರು ಕೂಡ ಅಲ್ಲಿಗೆ ಹೋಗುತ್ತಿರಲಿಲ್ಲ. ಮೊದಲು ಸ್ಥಳ ಶುಚಿಗೊಳಿಸಲು ಮುಂದಾದಾಗ ಹಲವರು ಕೊಂಕು ಮಾತುಗಳಿಂದ ಮನ ನೋಯಿಸಿದ್ದರು. ಆದರೆ ನಾವು ಪ್ರತಿಕ್ರಿಯಿಸಲಿಲ್ಲ. ಪ್ರತಿ ದಿನ ಪರಿಸರದ ಕಾಳಜಿ ವಹಿಸಿ, ಆಸಕ್ತಿಯಿಂದ ಶ್ರಮಿಸಿದ್ದರ ಪರಿಣಾಮ ಸುಂದರ ಪಾರ್ಕ್ ರೂಪುಗೊಂಡಿದೆ.
-ರವಿರಾಜ್ ಶೆಟ್ಟಿ, ಎಂ.ಡಿ.ಶ್ರೀಕುಮಾರ್, ಪರಿಸರ ಪ್ರೇಮಿಗಳು, ಮಂಗಳೂರು