More

    ಉದ್ಯಮ ಹಾಗೂ ಗ್ರಾಹಕರಿಗೆ ರೇರಾದಿಂದ ಅನುಕೂಲ

    ಬೆಂಗಳೂರು: ಜೀವನದಲ್ಲಿ ಒಂದು ಮನೆಯನ್ನು ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಕನಸು. ಅದರಲ್ಲೂ ಭಾರತೀಯ ಸಮಾಜದಲ್ಲಿ, ಸ್ವಂತ ಮನೆ ಹೊಂದಿದ್ದಾರೆ ಎಂಬುದು ನೆಮ್ಮದಿಯ ಜೀವನದ ಜತೆಗೆ ಸಾಮಾಜಿಕ ಘನತೆಯನ್ನೂ ತಂದುಕೊಡುತ್ತದೆ. ಈ ನಿಟ್ಟಿ ನಲ್ಲಿ ಮನೆ ನಿರ್ವಣಕ್ಕೆ ಪ್ರತಿಯೊಬ್ಬರೂ ಪ್ರಯತ್ನ ನಡೆಸುತ್ತಿರುವಾಗ ರಿಯಲ್ ಎಸ್ಟೇಟ್ ಸಂಸ್ಥೆಗಳ ಹೆಸರಿನಲ್ಲಿ ಕೆಲವರು ಗ್ರಾಹಕರಿಗೆ ಮೋಸ ಮಾಡುತ್ತಿದ್ದದ್ದು ಸಾಕಷ್ಟಿದ್ದವು. ಗ್ರಾಹಕರ ನಂಬಿಕೆಗೆ ಕುತ್ತು ತರುವ ಜತೆಗೆ, ಬೃಹತ್ ಪ್ರಮಾಣದ ಬೆಳವಣಿಗೆ ಅವಕಾಶವಿರುವ ಕ್ಷೇತ್ರದಲ್ಲಿ ಹೂಡಿಕೆಗೆ ತಡೆಯಾಗಿತ್ತು. ಇದನ್ನು ನಿವಾರಿಸಲು ಕೇಂದ್ರ ಸರ್ಕಾರ ರೂಪಿಸಿರುವ ರೇರಾ ಸಾಕಷ್ಟು ಉಪಯುಕ್ತವಾಗಿದೆ.

    ಉದ್ಯಮಿಗಳಿಗೆ ಮಾರಕವೇ?: ರೇರಾ ಸಂಸ್ಥೆಯ ಹೆಸರು ಕೇಳಿದ ಕೂಡಲೆ ರಿಯಲ್ ಎಸ್ಟೇಟ್ ಉದ್ಯಮ ವಲಯದಲ್ಲಿ ಕೆಲವರು ನಕಾರಾತ್ಮಕ ಮಾತನ್ನಾಡುವುದನ್ನು ಕೇಳಿರಬಹುದು. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಎಂಬ ಹೆಸರಿನಲ್ಲಿ ‘ನಿಯಂತ್ರಣ’ ಇರುವುದರಿಂದ ಈ ಗೊಂದಲ ಇದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಅಭಿಪ್ರಾಯ. ತಮ್ಮನ್ನು ನಿಯಂತ್ರಿಸುವ ಸಲುವಾಗಿ ಈ ಕಾಯ್ದೆ ಹಾಗೂ ರೇರಾ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ ಎಂಬ ಭಾವನೆ ಅನೇಕರಲ್ಲಿದೆ. ಆದರೆ ನಿಜಕ್ಕೂ ರೇರಾ ಪ್ರಾಧಿಕಾರದಿಂದ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಲಭವೇ ಆಗುತ್ತಿದೆ ಎನ್ನುತ್ತಾರೆ. ರಿಯಲ್ ಎಸ್ಟೇಟ್ ಒಂದು ಗೌರವಯುತ ಉದ್ಯಮ ಎಂಬಂತಾಗಿಸುವುದು ರೇರಾದ ಪ್ರಮುಖ ಉದ್ದೇಶ. ರಿಯಲ್ ಎಸ್ಟೇಟ್ ಹೆಸರಿನಲ್ಲಿ ಅನೇಕ ವಂಚನೆಗಳು ನಡೆಯುತ್ತಿದ್ದವು ಎಂಬುದು ಸಾಮಾನ್ಯರಿಗೂ ತಿಳಿದಿರುವ ವಿಚಾರ. ಇಂದು ಜಿಲ್ಲೆಯಿಂದ ಸುಪ್ರೀಂಕೋರ್ಟ್​ವರೆಗೆ ಎಲ್ಲ ಸಿವಿಲ್ ನ್ಯಾಯಾಲಯದಲ್ಲೂ ಹತ್ತಾರು ವರ್ಷದಿಂದ ಭೂ ವ್ಯಾಜ್ಯಗಳು ನಡೆಯುತ್ತಿವೆ. ಭೂಮಿ ಖರೀದಿಸುವಾಗ ಸಂಸ್ಥೆಗಳು ಮಾಹಿತಿ ಮುಚ್ಚಿಟ್ಟ ಪರಿಣಾಮ ಕ್ಷೇತ್ರದ ಮೇಲೆ ಜನರ ನಂಬಿಕೆ ಕುಸಿಯುತ್ತಿತ್ತು.

    ಕೈಗಾರಿಕೆ, ಹೈನುಗಾರಿಕೆ, ಐಟಿ ಉದ್ಯಮದಲ್ಲಿ ಹೂಡಿಕೆಗೆ ಹೂಡಿಕೆ ದಾರರು ಮುಂದೆ ಬರುತ್ತಾರೆ. ಬ್ಯಾಂಕ್​ಗಳೂ ಸುಲಭವಾಗಿ, ಆಸ್ತಿ ಅಡಮಾನವಿಲ್ಲದೆ ಕೇವಲ ಯೋಜನೆ ಮೇಲೆಯೇ, ಕಡಿಮೆ ಬಡ್ಡಿ ದರ ದಲ್ಲಿ ಸಾಲ ನೀಡುತ್ತವೆ. ಆದರೆ, ರಿಯಲ್​ಎಸ್ಟೇಟ್ ಉದ್ಯಮ ಎಂದ ಕೂಡಲೇ ಆಸ್ತಿ ಅಡಮಾನ ಕಡ್ಡಾಯ ಎನ್ನ ಲಾಗುತ್ತದೆ. ಏಕೆಂದರೆ, ಈ ಕ್ಷೇತ್ರದ ಮೇಲೆ ನಂಬಿಕೆಯ ಕೊರತೆ. ಕೆಲವು ಸಂಸ್ಥೆಗಳ ತಪ್ಪಿಗೆ ಉತ್ತಮ ರಿಯಾಲ್ಟಿ ಕಂಪನಿಗಳ ಗೌರವಕ್ಕೂ ಧಕ್ಕೆ ಯಾಗಿದೆ. ಈ ನಂಬಿಕೆಯನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ರೇರಾ ಸಂಸ್ಥೆ ಉಪಯುಕ್ತವಾಗಿದೆ.

    ಕಾರ್ಯದರ್ಶಿಗೆ ಅಧಿಕಾರ

    ಕರ್ನಾಟಕ ರೇರಾ ಸಂಸ್ಥೆಯಲ್ಲಿ ಉದ್ಯಮಿಗಳ ವಿರುದ್ಧ ದಾಖಲಾಗುವ ದೂರುಗಳ ವಿಚಾರಣೆ ವಿಳಂಬವಾಗಿ ಗ್ರಾಹಕರಿಗೆ ಹಾಗೂ ಉದ್ಯಮಿಗಳಿಗೂ ತೊಂದರೆ ಆಗುತ್ತಿತ್ತು. ನೋಂದಾಯಿತ ಹಾಗೂ ನೋಂದಾಯಿಸಿಲ್ಲದ ಯೋಜನೆಗಳ 2,232 ಪ್ರಕರಣಗಳು ಬಾಕಿ ಉಳಿದಿವೆ. ಇವುಗಳ ವಿಚಾರಣೆ ನಡೆಸಿ ತೀರ್ಪು ನೀಡುವ ಅಧಿಕಾರ ರೇರಾ ಅಧ್ಯಕ್ಷರಿಗಷ್ಟೇ ಇದ್ದದ್ದರಿಂದ ಹೆಚ್ಚು ಪ್ರಕರಣಗಳು ಬಾಕಿ ಉಳಿದಿದ್ದವು. ಇದೀಗ ತ್ವರಿತಗತಿಯಲ್ಲಿ ಪ್ರಕರಣ ಇತ್ಯರ್ಥಪಡಿಸುವ ಸಲುವಾಗಿ ಹೊಸ ನಿಯಮ ಜಾರಿ ಮಾಡಲಾಗಿದೆ. ನೋಂದಣಿಯಾಗಿಲ್ಲದ ಯೋಜನೆಗಳ ಕುರಿತ ದೂರುಗಳನ್ನು ವಿಚಾರಣೆ ನಡೆಸುವ ಅಧಿಕಾರವನ್ನು ರೇರಾ ಕಾರ್ಯದರ್ಶಿಗೆ ನೀಡಲಾಗಿದೆ.

    ಧ್ಯೇಯೋದ್ದೇಶಗಳು

    1. ಖರೀದಿದಾರರಲ್ಲಿ ಉತ್ತರದಾಯಿತ್ವ ಖಾತ್ರಿಪಡಿಸಿಕೊಳ್ಳುವುದು ಹಾಗೂ ಅವರ ಹಿತ ಕಾಯುವುದು

    2. ಪಾರದರ್ಶಕತೆ ಮೂಡಿಸುವುದು, ನೈತಿಕ ಉದ್ಯಮ ಖಾತ್ರಿಪಡಿಸುವುದು, ವಂಚನೆ ಹಾಗೂ ವಿಳಂಬವನ್ನು ತಡೆಯುವುದು

    3. ವೃತ್ತಿಪರತೆಯನ್ನು ಮೂಡಿಸುವುದು ಹಾಗೂ ಅಖಿಲ ಭಾರತ ಮಟ್ಟದಲ್ಲಿ ಸಮಾನತೆ ಮೂಡಿಸುವುದು

    4. ಪ್ರವರ್ತಕರು ಹಾಗೂ ಖರೀದಿದಾರರ ನಡುವಿನ ವ್ಯವಹಾರದಲ್ಲಿ ಸುಧಾರಣೆ ತರುವುದು

    5. ಪ್ರವರ್ತಕರು ಹಾಗೂ ಖರೀದಿದಾರರಿಬ್ಬರಿಗೂ ಕೆಲವು ಹೊಣೆಗಾರಿಕೆಗಳನ್ನು ವಿಧಿಸುವುದು

    6. ಒಪ್ಪಂದಗಳನ್ನು ಜಾರಿಗೊಳಿಸುವ ಸಲುವಾಗಿ ಮೇಲ್ವಿಚಾರಣೆ ವ್ಯವಸ್ಥೆ ರೂಪಿಸುವುದು

    ಸಂಪೂರ್ಣ ಪಾರದರ್ಶಕತೆ

    ರೇರಾ ಸಂಸ್ಥೆಯಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳು ನೋಂದಣಿಯಾಗುವ ಮೂಲಕ ಗ್ರಾಹಕರಲ್ಲಿ ವಿಶ್ವಾಸ ಹೆಚ್ಚುತ್ತಿದೆ. ನೋಂದಣಿ ಆದ ಎಲ್ಲ ಯೋಜನೆಗಳನ್ನೂ ರೇರಾ ತನ್ನ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡುತ್ತದೆ. ಅಲ್ಲಿಗೆ ಭೇಟಿ ನೀಡುವ ಮೂಲಕ ಯೋಜನೆಯ ಎಲ್ಲ ದಾಖಲೆಗಳನ್ನೂ ಡೌನ್​ಲೋಡ್ ಮಾಡಿಕೊಂಡು ಕಾನೂನಾತ್ಮಕ ಪರಿಶೀಲನೆ ಮಾಡಿಕೊಳ್ಳಬಹುದು. ಯೋಜನೆಯ ಅವಧಿ ಮುಗಿದಿದ್ದರೂ, ಬಲವಾದ ಕಾರಣವಿಲ್ಲದೆ ವಿಳಂಬ ಮಾಡುವ ಉದ್ಯಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿದೆ. ಉದ್ಯಮದ ಮೇಲೆ ಗ್ರಾಹಕರಿಗೆ ನಂಬಿಕೆ ಬಂದರೆ ಉತ್ತಮ ಸಂಸ್ಥೆಗಳಿಗೆ ಹೂಡಿಕೆ ಆಕರ್ಷಣೆಯಾಗುತ್ತದೆ. ದೇಶ ಹಾಗೂ ವಿದೇಶಗಳ ಬೃಹತ್ ಹೂಡಿಕೆದಾರರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಾರೆ. ಅಖಿಲ ಭಾರತ ಮಟ್ಟದಲ್ಲಿ ಸಮಾನವಾದ ನೀತಿಯನ್ನು ಹೊಂದುವುದರಿಂದ, ರಿಯಲ್ ಎಸ್ಟೇಟ್ ಕಂಪನಿಗಳೂ ಇತರೆ ರಾಜ್ಯಗಳಲ್ಲಿ ಉದ್ಯಮ ವಿಸ್ತರಣೆಗೆ ಮುಂದಾಗಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts