More

    ಬಜೆಟ್ ಅಧಿವೇಶನದಲ್ಲಿ ಸರ್ಕಾರಿ ನೌಕರರ ಧ್ವನಿಯಾಗುವೆ: ಆಯನೂರು ಅಭಯ

    ಶಿವಮೊಗ್ಗ: ಜನಪರ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಸರ್ಕಾರಿ ನೌಕರರ ಬೇಡಿಕೆಗಳನ್ನು ಯಾವುದೇ ಸರ್ಕಾರವಿದ್ದರೂ ಈಡೇರಿಸಲು ಆದ್ಯತೆ ನೀಡಲೇಬೇಕು. ಈ ಸಂಬಂಧ ನಾನು ಮೇಲ್ಮನೆಯಲ್ಲಿದ್ದರೂ ಮುಂಬರುವ ಬಜೆಟ್ ಅಧಿವೇಶನದಲ್ಲಿ ಸರ್ಕಾರಿ ನೌಕರರ ಧ್ವನಿಯಾಗುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಹೇಳಿದರು.
    ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಸರ್ವ ಸದಸ್ಯರ 54ನೇ ವಾರ್ಷಿಕ ಮಹಾಸಭೆ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರ ಆಶೋತ್ತರಗಳನ್ನು ಈಡೇರಿಸಬೇಕಾಗಿರುವುದು ನಾಗರಿಕ ಸರ್ಕಾರದ ಕರ್ತವ್ಯವೂ ಆಗಿದೆ ಎಂದರು.
    ಸರ್ಕಾರಿ ಅಥವಾ ಖಾಸಗಿ ವಲಯ ಯಾವುದೇ ಇದ್ದರೂ ನೌಕರರು, ಕಾರ್ಮಿಕರು, ಬೀದಿ ಪಾಲಾದವರ ಬಗ್ಗೆ ಎಲ್ಲ ಕಾನೂನುಗಳೂ ವಿಧಾನಸಭೆಯಲ್ಲೇ ರೂಪಿತವಾಗುತ್ತವೆ. ಆದರೆ ಪ್ರಸ್ತುತ ಸರ್ಕಾರಿ ನೌಕರರ ಪರ ಧ್ವನಿ ಎತ್ತುವವರು ಕಳೆಮನೆಯಲ್ಲಿ ಯಾರೋಬ್ಬರೂ ಇಲ್ಲದಂತಾಗಿದೆ. ನಾವೆಲ್ಲ ಮೇಲ್ಮನೆಯಲ್ಲಿದ್ದೇವೆ. ಆದರೂ ಅಲ್ಲಿಯೇ ನೌಕರರ ಪರ ಧ್ವನಿ ಎತ್ತಿ ಶಾಸನ ರೂಪಿಸುವಂತೆ ಒತ್ತಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.
    ಸರ್ಕಾರಿ ನೌಕರರ ಹಳೆ ಪಿಂಚಣಿ ಯೋಜನೆ ಜಾರಿಯಾಗಬೇಕೆಂಬ ಬೇಡಿಕೆ ನ್ಯಾಯಯುತವಾಗಿದೆ. ನೌಕರಿಯಲ್ಲಿದ್ದಾಗ ಕೈಯಲ್ಲಿ ಹಣ ಇರುತ್ತದೆ. ಆದರೆ ನಿವೃತ್ತಿ ಬಳಿಕ ಮುಪ್ಪಿನ ಕಾಲಕ್ಕೆ ಮತ್ತೊಬ್ಬರ ಬಳಿ ಹಣಕ್ಕೆ ಕೈಯೊಡ್ಡುವ ಪರಿಸ್ಥಿತಿ ಬರುತ್ತದೆ. ಜತೆಗೆ ಮಕ್ಕಳು, ಮೊಮ್ಮಕ್ಕಳಿಗೆ ಸೀರೆ ಸೇರಿದಂತೆ ಸಣ್ಣ ಪುಟ್ಟ ವಸ್ತುಗಳನ್ನು ಕೊಡಿಸಲು ಕೂಡ ಯಾರದ್ದೋ ಕಡೆಗೆ ನೋಡುವ ಸ್ಥಿತಿ ಬರಬಹುದು. ಹಾಗಾಗಿ ಇಂತಹ ಸಂಕಷ್ಟಗಳಿಂದ ದೂರ ಆಗಬೇಕಾದರೆ ಒಪಿಎಸ್ ಮರು ಜಾರಿಗೆ ಬರಲೇಬೇಕಿದೆ. ಈ ಬಗ್ಗೆ ಬಜೆಟ್ ಅಧಿವೇಶನದಲ್ಲೂ ಮತ್ತೆ ಗಮನ ಸೆಳೆಯುತ್ತೇನೆ ಎಂದರು.
    ನಿವತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಿ.ಎಂ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ಮ.ಸ.ನಂಜುಂಡಸ್ವಾಮಿ, ಷಣ್ಮುಖಪ್ಪ, ಆರ್.ಹನುಮಂತಪ್ಪ, ರಾಮಚಂದ್ರ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts