

BSF: ಜಮ್ಮುವಿನ ಆರ್ಎಸ್ಪುರ ಸೆಕ್ಟರ್ನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬ ಒಳನುಗ್ಗಲು ಪ್ರಯತ್ನಿಸಿದ್ದು, ಆತನನ್ನು ಭಾರತೀಯ ಸೇನೆ ಬಂಧಿಸಿರುವುದಾಗಿ ಗಡಿ ಭದ್ರತಾ ಪಡೆ ಸೋಮವಾರ (ಸೆಪ್ಟೆಂಬರ್ 08) ತನ್ನ ಅಧೀಕೃತ ಮೂಲಗಳಲ್ಲಿ ತಿಳಿಸಿದೆ.
ಬಂಧಿತನನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಾಲ್ವಾಲ್ ತೆಹಸಿಲ್ನ ಸಿರಾಜ್ ಖಾನ್ (27) ಎಂದು ಗುರುತಿಸಲಾಗಿದೆ. ಈತ ಭಾನುವಾರ ರಾತ್ರಿ 9:10 ರ ಸುಮಾರಿಗೆ ಸುಚೇತ್ಗಢ ತೆಹಸಿಲ್ನಲ್ಲಿರುವ ಗಡಿ ದಾಟಿ ಬೇಲಿಯನ್ನು ಸಮೀಪಿಸುವುದು ಕಂಡುಬಂದಿದೆ ಎಂದು ಬಿಎಸ್ಎಫ್ ತನ್ನ ಅಧೀಕೃತ ಹೇಳಿಕೆಯಲ್ಲಿ ತಿಳಿಸಿದೆ.
ಜಾಗೃತ ಪಡೆಗಳು ಒಳನುಗ್ಗಿದ ವ್ಯಕ್ತಿಗೆ ಎಚ್ಚರಿಕೆ ನೀಡಿದರೂ ಸಹ ಅವನು ಇವರ ಮಾತಿಗೆ ಸ್ಪಂದಿಸದೇ ಒಳ ನುಗ್ಗಲು ಪ್ರಯತ್ನಿಸಿದ್ದು, ಈ ವೇಳೆ ಭದ್ರತಾ ಪಡೆಗಳು ಆತನ ಮೇಲೆ ಗುಂಡು ಹಾರಿಸಿ ಅವನನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಬಿಎಸ್ಎಫ್ ಪ್ರಕಾರ, ಒಳನುಗ್ಗಿದ ವ್ಯಕ್ತಿಯಿಂದ 20 ಮತ್ತು 10 ರೂ.ಗಳ ಎರಡು ಪಾಕಿಸ್ತಾನಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡು ಆತನನ್ನು ಪೊಲೀಸರಿಗೆ ಹಸ್ತಾಂತರಿಸಿ ವಿಚಾರಣೆ ಮುಂದುವರೆಸಿದ್ದಾರೆ.
ಇತ್ತೀಚಿನ ಹಠಾತ್ ಪ್ರವಾಹದಿಂದಾಗಿ ವಿವಿಧ ಸ್ಥಳಗಳಲ್ಲಿ ಗಡಿ ಬೇಲಿಗಳು ಮತ್ತು ಪೋಸ್ಟ್ಗಳಿಗೆ ಹಾನಿಯಾಗಿದ್ದು, ಈ ಬಳಿಕ ಜಮ್ಮು ಗಡಿಯಲ್ಲಿನ ಅಂತರರಾಷ್ಟ್ರೀಯ ಗಡಿಯಾದ್ಯಂತ ಜಾಗರೂಕತೆಯನ್ನು ನೀಡುವುದಾಗಿ ಪಡೆ ತೀವ್ರಗೊಳಿಸಿದೆ. (ಏಜೆನ್ಸೀಸ್)