More

    ಕುಸಿತ ಭೀತಿಯಲ್ಲಿ ಯಳಜಿತ ಸೇತುವೆ

    ಬೈಂದೂರು: ಯಳಜಿತ ಗ್ರಾಮದಿಂದ ಕಾಲ್ತೋಡು, ಯರುಕೋಣೆ ಸಂಪರ್ಕ ಸೇತುವೆ ಪ್ರಸ್ತುತ ಭಾರಿ ಅಪಾಯದ ಅಂಚಿನಲ್ಲಿದೆ. ಮಳೆಗಾಲ ಆರಂಭದೊಳಗೆ ದುರಸ್ತಿ ಕಾಮಗಾರಿ ಆಗದಿದ್ದರೆ ಈ ಭಾಗದ ಜನರು ತೀವ್ರ ತೊಂದರೆಗೆ ಸಿಲುಕಲಿದ್ದಾರೆ.
    ಇಲ್ಲಿ ಹಳೇ ಕಾಲುಸಂಕವಿದ್ದು, 2000ನೇ ಸಾಲಿನಲ್ಲಿ ಶಾಶ್ವತ ಸೇತುವೆ ನಿರ್ಮಾಣವಾಗಿತ್ತು. ಈ ಸೇತುವೆಯ ಈಗಿನ ಪರಿಸ್ಥಿತಿಯಲ್ಲಿ ಸೇತುವೆ ಪಿಲ್ಲರ್‌ಗಳು ಹಾಗೂ ನಾಲ್ಕು ಬದಿಯ ಶಿಲೆಕಲ್ಲಿನ ರಿವಿಟ್‌ಮೆಂಟ್ ಸಂಪೂರ್ಣ ಕುಸಿದು ಹೋಗಿರುವುದನ್ನು ಗಮನಿಸಿದರೆ ಬರುವ ಮಳೆಗಾಲದಲ್ಲಿ ಸೇತುವೆ ಕುಸಿಯುವ ಭೀತಿ ಇದೆ. ಈ ಮಾರ್ಗವಾಗಿ ಜೋಗಿಜೆಡ್ಡು, ಹೊಡುವಾಣ, ಜತ್ನಾಡಿಮಕ್ಕಿ ಮೂಲಕ ಕಾಲ್ತೋಡು, ಯರುಕೋಣೆಗೆ ತೆರಳುವ ಹಳ್ಳಿಜನರೂ ಈ ಸೇತುವೆ ಅವಲಂಬಿಸಿದ್ದಾರೆ. ವಾಹನ ಚಾಲಕರು ಸ್ವಲ್ಪ ಎಚ್ಚರಿಕೆ ತಪ್ಪಿದರೂ ಅನಾಹುತಕ್ಕೆ ದಾರಿಯಾಗಲಿದೆ.

    ಕೃಷಿಯನ್ನೇ ಅವಲಂಬಿಸಿರುವ ಈ ಪ್ರದೇಶದಲ್ಲಿ ನವೆಂಬರ್‌ನಲ್ಲಿ ಅಕಾಲಿಕವಾಗಿ ಸುರಿದ ಮಳೆ, ಸೇತುವೆಯನ್ನು ಭಾಗಶಃ ನಾಶಪಡಿಸಿತ್ತು. ಕೃಷಿಭೂಮಿ ಹಾಗೂ ತೋಟಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿಸಿ ಕೃತಕ ನೆರೆ ನಿರ್ಮಾಣ ಮಾಡಿದ ಪರಿಣಾಮ ಕೃಷಿಕರು ಹೈರಾಣಾಗಿದ್ದಲ್ಲದೆ ಜಲಾವೃತದಿಂದ ಬೆಳೆ ನಾಶವಾಗಿ ಹಲವಾರು ಕೃಷಿಕರು ನಷ್ಟ ಅನುಭವಿಸಿದ್ದರು. ಈ ಬಗ್ಗೆ ವಿಜಯವಾಣಿ ಮಾಡಿದ ವರದಿಗೆ ಸ್ಪಂದಿಸಿದ ಜಿಪಂ ಸದಸ್ಯ ಶಂಕರ ಪೂಜಾರಿ ಸೇತುವೆ ನಿರ್ಮಾಣಕ್ಕೆ ಸಣ್ಣ ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು. ಸ್ಥಳಕ್ಕೆ ಭೇಟಿ ನೀಡಿದ್ದ ಇಲಾಖಾಧಿಕಾರಿಗಳು ಸೇತುವೆಯ ಗುಣಮಟ್ಟದ ಬಗ್ಗೆ ಅಪಾಯದ ಮುನ್ಸೂಚನೆ ನೀಡಿದ್ದಷ್ಟೇ ಬಿಟ್ಟರೆ ಯಾವುದೇ ಪ್ರಯೋಜನವಾಗಿಲ್ಲ. ಹಾಗೆಯೇ ಮಾರ್ಚ್‌ನಿಂದ ದೇಶದಲ್ಲಿ ಲಾಕ್‌ಡೌನ್ ಹೇರಿದ ಕಾರಣದಿಂದ ಈ ಸೇತುವೆಯ ಕುರಿತಾದ ಚಿಂತನೆ ಸ್ಥಗಿತಗೊಂಡಿತು. ಈ ಬಗ್ಗೆ ಶೀಘ್ರಕ್ರಮಕ್ಕೆ ಮುಂದಾಗುವಂತೆ ಸ್ಥಳೀಯರು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

    ಈ ಸೇತುವೆ ಸುಮಾರು 80-90 ಮನೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ ಈ ಪ್ರದೇಶದ ವಿದ್ಯಾರ್ಥಿಗಳೂ ಯಳಜಿತ, ಗೋಳಿಹೊಳೆ, ಕೊಲ್ಲೂರು ಶಾಲೆಗಳಿಗೆ ತೆರಳಲು ಈ ಸೇತುವೆಯನ್ನೇ ಅವಲಂಬಿಸಿದ್ದಾರೆ. ಸೇತುವೆ ನಾಲ್ಕು ಬದಿಯ ಶಿಲೆಕಲ್ಲಿನ ರಿವಿಟ್‌ಮೆಂಟ್ ಕುಸಿದು ಹೋಗಿ ತಳಮಟ್ಟವೂ ಸಂಪೂರ್ಣ ಹಾನಿಯಾಗಿದೆ. ಇಲಾಖೆ ಅಧಿಕಾರಿಗಳು ಕೂಡ ಅಪಾಯದ ಮನ್ಸೂಚನೆ ನೀಡಿದ್ದಾರೆ. ಈ ಮಳೆಗಾಲದೊಳಗೆ ಇದನ್ನು ತಾತ್ಕಾಲಿಕವಾಗಿಯಾದರೂ ರಿಪೇರಿ ಮಾಡಿಸಬೇಕು. ಇಲ್ಲವಾದರೆ ಬೈಂದೂರು ತಾಲೂಕು ಕಚೇರಿ ಮುಂದೆ ಈ ಭಾಗದ ಜನರ ಪ್ರತಿಭಟನೆ ಅನಿವಾರ್ಯವಾಗಬಹುದು.
    -ಸಿದ್ದೇಶ್ ಶ್ಯಾನುಭಾಗ್, ಸ್ಥಳೀಯರು

    ಈ ಸೇತುವೆಯ ಗುಣಮಟ್ಟ ಸಂಪೂರ್ಣ ಕುಸಿದ ಪರಿಣಾಮ ಇದರ ಪಕ್ಕದಲ್ಲಿ ವೆಂಟೆಡ್ ಡ್ಯಾಂ ಕಂ ಬ್ರಿಜ್ಡ್ ನಿರ್ಮಾಣಕ್ಕೆ ಸಂಸದ ಬಿ. ವೈ.ರಾಘವೇಂದ್ರ ಮಾರ್ಗದರ್ಶನದಂತೆ ಸ್ಥಳೀಯ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮೂಲಕ ರಾಜ್ಯ ಸಣ್ಣ ನೀರಾವರಿ ಇಲಾಖೆಗೆ ಸುಮಾರು ಒಂದು ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಶೀಘ್ರದಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂಬ ವಿಶ್ವಾಸವಿದೆ. ಪ್ರಸ್ತುತ ಸನ್ನಿವೇಶದಲ್ಲಿ ಈಗಿನ ಸೇತುವೆ ತಾತ್ಕಾಲಿಕ ರಿಪೇರಿ ಮಾಡುವ ಬಗ್ಗೆ ಸ್ಥಳೀಯ ಶಾಸಕರು ನಿರ್ಧರಿಸಲಿದ್ದಾರೆ.
    – ಟಿ.ಶಂಕರ ಪೂಜಾರಿ, ನಿಕಟಪೂರ್ವ ಸದಸ್ಯ ಜಿಪಂ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts