ಪೊಳಲಿ, ಉಳಾಯಿಬೆಟ್ಟುವಿನಲ್ಲಿ ಸೇತುವೆ ನಿರ್ಮಾಣ : ಡಿಸಿ ಜತೆ ಡಾ.ಭರತ್ ಶೆಟ್ಟಿ, ರಾಜೇಶ್ ನಾಕ್ ಮಾತುಕತೆ

dc
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಅಡ್ಡೂರು- ಪೊಳಲಿ ಸೇತುವೆ ಮತ್ತು ಉಳಾಯಿಬೆಟ್ಟು ಕಿರು ಸೇತುವೆಯ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಹಾಗೂ ಎರಡೂ ಕಡೆ ಹೊಸ ಸೇತುವೆ ನಿರ್ಮಿಸುವ ಕುರಿತು ಮಂಗಳವಾರ ಶಾಸಕ ಡಾ.ಭರತ್ ಶೆಟ್ಟಿ ಮತ್ತು ರಾಜೇಶ್ ನೈಾಕ್ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿದರು.

ಎರಡೂ ಕಡೆ ಸೇತುವೆಯಲ್ಲಿ ಭಾರಿ ವಾಹನ ಸಂಚಾರ ಸ್ಥಗಿತದಿಂದ ಸಾರ್ವಜನಿಕ ಬಸ್ ಸಂಚಾರ ಮತ್ತು ಕಾರ್ಮಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಇತ್ತೀಚೆಗೆ ಪೊಳಲಿ ಮತ್ತು ಉಳಾಯಿಬೆಟ್ಟಿನಲ್ಲಿ ಸೇತುವೆ ತಜ್ಞರು ನಡೆಸಿದ ಪರೀಕ್ಷೆ ವೇಳೆ ಎರಡೂ ಸೇತುವೆ ಶಿಥಿಲಗೊಂಡಿದೆ. ಸೇತುವೆಗಳ ಧಾರಣಾ ಶಕ್ತಿ ಹೆಚ್ಚಿಸುವ ಹಾಗೂ ಹೊಸ ಸೇತುವೆ ನಿರ್ಮಾಣದ ಕುರಿತು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರೊಂದಿಗೆ ಮಂಗಳವಾರ ಡಿಸಿ ಕಚೇರಿಯಲ್ಲಿ ಮಾತುಕತೆ ನಡೆಸಿದರು.

ಪಿಡಬ್ಲುೃಡಿ ಇಂಜಿನಿಯರ್‌ಗಳು ಹಾಗೂ ಎರಡೂ ಕಡೆಯ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

‘ವಿಜಯವಾಣಿ’ಯೊಂದಿಗೆ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಪೊಳಲಿ ಸೇತುವೆ ಧಾರಣಾ ಶಕ್ತಿ ಹೆಚ್ಚಿಸಲು 6 ಕೋಟಿ ರೂ. ಹಾಗೂ ಹೊಸ ಸೇತುವೆ ನಿರ್ಮಾಣಕ್ಕೆ ಅಂದಾಜು 50 ಕೋಟಿ ರೂ., ಉಳಾಯಿಬೆಟ್ಟಿನಲ್ಲಿ ಹೊಸ ಕಿರು ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ. ತಗುಲಲಿದೆ. ಪೊಳಲಿಯಲ್ಲಿ ಮೊದಲಿಗೆ ಸೇತುವೆ ಧಾರಣಾ ಶಕ್ತಿ ಹೆಚ್ಚಿಸುವ ಕಾಮಗಾರಿ ನಡೆಯಲಿದೆ. ಮಾತುಕತೆ ಫಲಪ್ರದವಾದಲ್ಲಿ ಎರಡೂ ಕಡೆ ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಶೀಘ್ರವೇ ನಾನು ಮತ್ತು ರಾಜೇಶ್ ನೈಾಕ್ ಅವರು ಸರ್ಕಾರದ ಜತೆ ಮಾತುಕತೆ ನಡೆಸಿ ಕಾಮಗಾರಿಗೆ ಅಗತ್ಯವಿರುವ ಅನುದಾನ ಬಿಡುಗಡೆಗೆ ಚರ್ಚಿಸಲಿದ್ದೇವೆ. ಸೇತುವೆ ಧಾರಣಾ ಶಕ್ತಿ ಹೆಚ್ಚಿಸಿದ ಬಳಿಕ ಸಾರ್ವಜನಿಕ ಬಸ್ ಮತ್ತು ಶಾಲಾ-ಕಾಲೇಜು ಬಸ್ ಯಥಾವತ್ತಾಗಿ ಸಂಚಾರ ನಡೆಸಲು ಅವಕಾಶವಿರುತ್ತದೆ. ಆದರೆ ನಿಗದಿತ ಭಾರಕ್ಕಿಂತ ಹೆಚ್ಚಿನ ಭಾರದ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಭಾರಿ ವಾಹನ ಸಂಚಾರದ ಮೇಲೆ ನಿಗಾ ಇಡಲು ಪೊಳಲಿಯಲ್ಲಿ ಪೊಲೀಸ್ ಚೆಕ್‌ಪೋಸ್ಟ್‌ಗೆ ಹೆಚ್ಚಿನ ಅಧಿಕಾರ ನೀಡುವ ಕುರಿತು ಮಾತುಕತೆ ನಡೆಸಲಾಯಿತು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net