More

    ಕೃಷ್ಣ ಮಠದಲ್ಲಿ ಬ್ರಹ್ಮರಥೋತ್ಸವ

    ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಜಾತ್ರೆ ಅಂಗವಾಗಿ ಮಕರ ಸಂಕ್ರಾಂತಿ ಪ್ರಯುಕ್ತ ಗುರುವಾರ ರಾತ್ರಿ ಬ್ರಹ್ಮರಥೋತ್ಸವ ನಡೆಯಿತು.
    ಬೆಳಗ್ಗೆ ಪರ್ಯಾಯ ಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ ನೇತೃತ್ವದಲ್ಲಿ ಬ್ರಹ್ಮರಥಕ್ಕೆ ಶಿಖರ ಇರಿಸಲಾಯಿತು. ಸಾಯಂಕಾಲ ಶ್ರೀಕೃಷ್ಣ, ಮುಖ್ಯಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ವೈಭವದ ತೆಪ್ಪೋತ್ಸವ ನಡೆದು ಬಳಿಕ ರಥಬೀದಿಯಲ್ಲಿ ಬ್ರಹ್ಮರಥದಲ್ಲಿ ಕೃಷ್ಣನ ಉತ್ಸವಮೂರ್ತಿ ಪ್ರತಿಷ್ಠಾಪಿಸಲಾಯಿತು. ಸಣ್ಣರಥದಲ್ಲಿ ಮುಖ್ಯಪ್ರಾಣ ದೇವರು, ಗರುಡ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರ ಮೂರ್ತಿಗಳನ್ನಿಟ್ಟು ವಿವಿಧ ಮಠಾಧೀಶರ ಸಹಿತ ಭಕ್ತರು ತೇರನ್ನು ಎಳೆದರು.

    ಸುವರ್ಣ ಛತ್ರ ಸಮರ್ಪಣೆ: ಕೃಷ್ಣ ದೇವರಿಗೆ ಪ್ರಾತಃಕಾಲದಲ್ಲಿ ಪರ್ಯಾಯ ಶ್ರೀಗಳು ಶಾರ್ವರಿ ನಾಮ ಸಂವತ್ಸರದ ಕೊನೆಯ ಧನುರ್ಮಾಸ ಪೂಜೆ ನೆರವೇರಿಸಿದರು. 50 ಲಕ್ಷ ರೂ. ವೆಚ್ಚದಲ್ಲಿ 2.5 ಕೆ.ಜಿ ಚಿನ್ನದಿಂದ ನಿರ್ಮಿಸಿದ ಸುವರ್ಣ ಛತ್ರವನ್ನು ಮಕರ ಸಂಕ್ರಮಣದ ಪರ್ವಕಾಲದಲ್ಲಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹಾಗೂ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಇತರ ಮಠಾಧೀಶರೊಡಗೂಡಿ ಕೃಷ್ಣ ದೇವರಿಗೆ ಅರ್ಪಿಸಿದರು.
    ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

    ಇಂದು ಚೂರ್ಣೋತ್ಸವ: ಹಗಲು ರಥೋತ್ಸವದೊಂದಿಗೆ (ಚೂರ್ಣೋತ್ಸವ) ಸಪ್ತೋತ್ಸವಕ್ಕೆ ಶುಕ್ರವಾರ ತೆರೆ ಬೀಳಲಿದೆ. ಬೆಳಗ್ಗೆ 9.30ಕ್ಕೆ ಮಹಾಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿರಿಸಿ ಪರ್ಯಾಯ ಶ್ರೀಪಾದರ ಸಹಿತ ಅಷ್ಟಮಠದ ಯತಿಗಳು ಮಂಗಳಾರತಿ ಬೆಳಗಲಿದ್ದಾರೆ. ಬಳಿಕ ಬ್ರಹ್ಮರಥೋತ್ಸವ ನಡೆಯಲಿದೆ. ಬಳಿಕ ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಅಷ್ಟ ಮಠದ ಸ್ವಾಮೀಜಿಯವರಿಗೆ ಪರ್ಯಾಯ ಮಠದಿಂದ ಗೌರವ ಸಮರ್ಪಣೆ, ಮಧ್ವ ಸರೋವರದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಅವಭೃತೋತ್ಸವ ನಡೆಯಲಿದೆ. ಭಾಗೀರಥಿ ಜಯಂತಿವರೆಗೆ ಕೃಷ್ಣ ಮಠದಲ್ಲಿ ಬ್ರಹ್ಮರಥೋತ್ಸವ ಸೇವೆಗಳು ಜರುಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts