More

    ಡಿಕೆಶಿ, ಎಚ್‌ಡಿಕೆ, ಭುಟ್ಟೋ ಹೇಳಿಕೆಗೆ ಆಕ್ರೋಶ: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

    ಪಾಂಡವಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾಲ್ ಭುಟ್ಟೋ ಬಿಜೆಪಿ ನಾಯಕರ ವಿರುದ್ಧ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ತಾಲೂಕು ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
    ಪಟ್ಟಣದ ಐದು ದೀಪದ ವೃತ್ತದಲ್ಲಿ ಬಿಜೆಪಿ ಮುಖಂಡ ಡಾ.ಇಂದ್ರೇಶ್ ನೇತೃತ್ವದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಹಾಗೂ ಪಾಕಿಸ್ತಾನದ ಸಚಿವ ಬಿಲಾಲ್ ಭುಟ್ಟೋ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
    ಕಾಂಗ್ರೆಸ್ ನಾಯಕರು ಹಿಂದು ಮತ್ತು ಜನವಿರೋಧಿ ನೀತಿ ಅನುಸರಿಸುವ ಜತೆಗೆ ಸುಳ್ಳು ಹೇಳುವ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತಬ್ಯಾಂಕ್‌ಗಾಗಿ ಮುಸ್ಲಿಮರನ್ನು ಓಲೈಕೆ ಮಾಡುತ್ತಿರುವ ಪರಿಣಾಮ ದೇಶದಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಇದರಿಂದ ದೇಶದಲ್ಲಿ ಕಾಂಗ್ರೆಸ್ ನಿರ್ಣಾಮವಾಗುವ ಕಾಲ ಸನ್ನಿಹಿತವಾಗಿದೆ. ಕುಕ್ಕರ್ ಬ್ಲಾಸ್ಟ್ ಭಯೋತ್ಪಾದಕನ ಬೆಂಬಲಿಸುವ ರೀತಿಯಲ್ಲಿ ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
    ಬಿಜೆಪಿ ಮುಖಂಡ ಡಾ.ಇಂದ್ರೇಶ್ ಮಾತನಾಡಿ, ನರೇಂದ್ರ ಮೋದಿ ಭಾರತವನ್ನು ವಿಶ್ವಗುರುನ್ನಾಗಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದನ್ನು ಸಹಿಸದ ಪಾಕಿಸ್ತಾನದ ಸಚಿವ ಪ್ರಧಾನಿ ವಿರುದ್ಧ ಮಾತನಾಡಿದ್ದಾನೆ. ಭುಟ್ಟೋ ಅವರ ತಂದೆಯ ಮನಸ್ಥಿತಿಯೂ ಇದೇ ರೀತಿ ಇತ್ತು. ಕೆಪಿಸಿಸಿ ಅಧ್ಯಕ್ಷರು ಮುಸ್ಲಿಂ ಮತಬ್ಯಾಂಕ್‌ಗಾಗಿ ಭಯೋತ್ಪಾದನೆಯನ್ನು ಸಮರ್ಥಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಜನರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸಿಗೆ ಕೊನೆಯ ಮೊಳೆ ಹೊಡೆಯಲಿದ್ದಾರೆ ಎಂದರು.
    ಬಿಜೆಪಿ ಕಾರ್ಯಕರ್ತರು ದೇಶಕ್ಕಾಗಿ ಮನೆ ಬಿಟ್ಟು ಬೀದಿಯಲ್ಲಿ ಜೋಳಿಗೆ ಹಿಡಿದು ಹೋರಾಟ ಮಾಡುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರ ರೀತಿಯಲ್ಲಿ ಮನೆಯಲ್ಲಿ ಖಜಾನೆ ಇಟ್ಟುಕೊಂಡಿಲ್ಲ. ಬಿಜೆಪಿ ಕಾರ್ಯಕರ್ತರಿಗೆ ದೇಶ ಮೊದಲು, ನಂತರ ಪಕ್ಷ ಮತ್ತು ಕಾರ್ಯಕರ್ತರು. ಆದರೆ ಕುಮಾರಸ್ವಾಮಿ ಅವರಿಗೆ ಅವರ ಕುಟುಂಬ ಮತ್ತು ಮಕ್ಕಳೇ ಸರ್ವಸ್ವ ಆಗಿದ್ದಾರೆ. ಇಂತಹ ರಾಜಕಾರಣಿಗಳಿಂದ ಬಿಜೆಪಿ ನಾಯಕರು ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕಿಡಿಕಾರಿದರು.
    ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಕಿಯೋನಿಕ್ಸ್ ನಿರ್ದೇಶಕ ಎಚ್.ಎನ್.ಮಂಜುನಾಥ್, ತಾಲೂಕು ಅಧ್ಯಕ್ಷ ಎಲ್.ಅಶೋಕ್, ಕಾರ್ಯದರ್ಶಿ ನೀಲನಹಳ್ಳಿ ಧನಂಜಯ, ಜಿಲ್ಲಾ ಕಾರ್ಯದರ್ಶಿ ಕಾಂತರಾಜು, ಗೃಹಮಂಡಳಿ ನಿರ್ದೇಶಕ ಎನ್.ಭಾಸ್ಕರ್, ವದೇ ಸಮುದ್ರ ಸೋಮಶೇಖರ್, ಚಿಕ್ಕಮರಳಿ ನವೀನ್, ರಾಜೀವ್ ತಮ್ಮಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts