More

    ಕಾಂಗ್ರೆಸ್‌ನ ಧೀರಜ್ ಪ್ರಸಾದ್ ಭ್ರಷ್ಟಾಚಾರ;ರಾಹುಲ್ ಗಾಂಧಿ ರಾಜೀನಾಮೆಗೆ ಬಿಜೆಪಿ ಆಗ್ರಹ;ರಾಜ್ಯದಾದ್ಯಂತ ಬಿಜೆಪಿ ಪ್ರತಿಭಟನೆ

    ಬೆಂಗಳೂರು:
    ಕಾಂಗ್ರೆಸ್‌ನ ಭ್ರಷ್ಟಾಚಾರದ ವಿರುದ್ದ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಹುಲ್ ಗಾಂದಿ ಆಪ್ತರಾಗಿರುವ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಪ್ರಸಾದ್ ಸಾಹು ಮನೆಯಲ್ಲಿ 300 ಕೋಟಿಗೂ ಹೆಚ್ಚು ಅಕ್ರಮ ನಗದು ಲಭಿಸಿದ್ದು, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
    ಈ ಪ್ರಕರಣ ಬಗ್ಗೆ ಈ ತನಕ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
    ಮಲ್ಲಿಕಾರ್ಜುನ ಖರ್ಗೆಯವರಿಗೆ ನೈತಿಕತೆ ಇದ್ದಿದ್ದರೆ, ರಾಹುಲ್ ಗಾಂಧಿಗೆ ಸಂವಿಧಾನದ ಬಗ್ಗೆ ನಯಾಪೈಸೆ ಗೌರವ ಇದ್ದರೆ ಕೂಡಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ರಾಹುಲ್ ಗಾಂಧಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
    ಅಕಸ್ಮಾತ್ ಬಿಜೆಪಿಯವರು ಸಿಕ್ಕಿ ಬಿದ್ದಿದ್ದರೆ ಇಷ್ಟೊತ್ತಿಗೆ ಆಕಾಶವೇ ಕೆಳಗೆ ಬಿದ್ದಿದೆಯೇನೋ ಎಂಬಂತೆ ಗಲಾಟೆ ಮಾಡುತ್ತಿದ್ದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಶೇ.40 ಕಮಿಷನ್ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದು, ರಾಜೀನಾಮೆ ಕೊಡಬೇಕೆಂದು ಕಾಂಗ್ರೆಸ್ಸಿಗರು ಆಗ್ರಹ ಮಾಡಿದ್ದರು. ಈಗ ಇವರ ನಿಲುವೇನು ಎಂದು ಅವರು ಕೇಳಿದರು.
    ತೆಲಂಗಾಣದ ಚುನಾವಣೆ ವೇಳೆ ಒಂದೆಡೆ ಕಾಂಗ್ರೆಸ್‌ಗೆ ಸೇರಿದ 6 ಕೋಟಿ ಸಿಕ್ಕಿದೆ. ಐಟಿ ದಾಳಿ ವೇಳೆ ಕರ್ನಾಟಕದಲ್ಲಿ ಒಂದು ಮನೆಯಲ್ಲಿ 42 ಕೋಟಿ ಸೇರಿ ಒಟ್ಟು 102 ಕೋಟಿ ನಗದು ಪತ್ತೆಯಾಗಿತ್ತು. ಇನ್ನೂ ಕೂಡ ಕಾಂಗ್ರೆಸ್ಸಿಗರು ಪ್ರಾಮಾಣಿಕತೆ ಕುರಿತು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
    ಡಿ.6ರಂದು ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಲದ ಕಾಂಗ್ರೆಸ್ ನಾಯಕ, 2010ರಿಂದ ರಾಜ್ಯಸಭಾ ಸದಸ್ಯರಾಗಿರುವ ಧೀರಜ್ ಪ್ರಸಾದ್ ಸಾಹು ಅವರ 300 ಕೋಟಿ ಸಿಕ್ಕಿದೆ. ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಸೋತ ಅಭ್ಯರ್ಥಿಯಾಗಿದ್ದು ಸೋನಿಯಾ ಮತ್ತು ರಾಹುಲ್ಗೆ ಅತ್ಯಂತ ಆಪ್ತರಾಗಿದ್ದಾರೆ. ದೇಶದಲ್ಲಿ ಐಟಿ, ಇಡಿ, ಸಿಬಿಐ ಏಜೆನ್ಸಿಗಳ ದಾಳಿ ಆದಾಗ ಇಷ್ಟು ದೊಡ್ಡ ಮೊತ್ತದ ನಗದು ಬೇರೆಲ್ಲೂ ಸಿಕ್ಕಿರಲಿಲ್ಲ ಎಂದರು.
    ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರದ ಗಂಗೋತ್ರಿ ಎನ್ನುವಂತಾಗಿದೆ. ಇದಕ್ಕೆ ಪ್ರತಿ ರಾಜ್ಯದಲ್ಲಿ, ದೇಶದಲ್ಲಿ ನೂರಾರು- ಸಾವಿರಾರು ಉದಾಹರಣೆಗಳು ಸಿಗುತ್ತವೆ ಎಂದರು.
    ಈ ಭ್ರಷ್ಟಾಚಾರದ ಕುರಿತು ವಿಪಕ್ಷಗಳ ಮೈತ್ರಿಕೂಟದ (ಐಎನ್‌ಡಿಐ) ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಇತರ ಪಕ್ಷಗಳ ಮುಖಂಡರಾದ ಅಖಿಲೇಶ್ ಯಾದವ್ ಪ್ರಾಮಾಣಿಕತೆ ಬಗ್ಗೆ ಬಹಳ ಮಾತನಾಡುವ ನಿತೀಶ್ ಕುಮಾರ್, ಶರದ್ ಪವಾರ್ ಏನು ಹೇಳುತ್ತಾರೆ? ಎಂದು ಕೇಳಿದರು.
    ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಬೆಂಗಳೂರು ನಗರದ ಮಾಜಿ ಅಧ್ಯಕ್ಷ ಪಿ.ಎನ್.ಸದಾಶಿವ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts