More

    ಕಾಂಗ್ರೆಸ್, ಜೆಡಿಎಸ್‌ನಿಂದ ಕುಟುಂಬ ರಾಜಕಾರಣ: ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜು ಟೀಕೆ

    ಮಂಡ್ಯ: ಕ್ಷೇತ್ರದ ಅಭಿವೃದ್ಧಿ ಹಾಗೂ ಜನರಿಗೆ ಅನುಕೂಲವಾಗುವಂತಹ ಯೋಜನೆ ಕಡೆಗೆ ಗಮನಹರಿಸದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕುಟುಂಬ ರಾಜಕಾರಣದಲ್ಲಿ ತೊಡಗಿಸಿಕೊಂಡಿವೆ ಎಂದು ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜು ಟೀಕಿಸಿದರು.
    ತಾಲೂಕಿನ ಎಸ್.ಐ ಕೋಡಿಹಳ್ಳಿಯಲ್ಲಿ ಆಯೋಜಿಸಿದ್ದ ಕೆರಗೋಡು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ ರೈತರ ಹಿತಕ್ಕಾಗಿ ಅವರ ಖಾತೆಗೆ ಹಣ ಹಾಕುತ್ತಿದೆ. ವಿದ್ಯಾಸಿರಿ, ಯಶಸ್ವಿನಿ ಸೇರಿದಂತೆ ಹತ್ತಾರು ಜನಪರ ಯೋಜನೆಗಳಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂದರು.
    ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ 7 ಬಿಜೆಪಿ ಶಾಸಕರನ್ನು ಗೆಲ್ಲಿಸುವ ಮೂಲಕ ಹೊಸ ಐತಿಹ್ಯ ನಿರ್ಮಾಣಕ್ಕೆ ಕಾರ್ಯಕರ್ತರು ಸಂಕಲ್ಪ ಮಾಡಬೇಕು. ಡಬಲ್ ಇಂಜಿನ್ ಸರ್ಕಾರದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಅವರು 1,200 ಕೋಟಿ ರೂ ಅನುದಾನ ತಂದು ಕೆ.ಆರ್.ಪೇಟೆ ಕ್ಷೇತ್ರವನ್ನು ಅಭಿವೃದ್ದಿ ಮಾಡಿಸುತ್ತಿದ್ದಾರೆ. ಆದರೆ ಉಳಿದ ಕ್ಷೇತ್ರಗಳು ಅಭಿವೃದ್ದಿಯಾಗದೇ ಉಳಿದಿವೆ ಎಂದು ಆರೋಪಿಸಿದರು.
    ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅಶೋಕ್ ಜಯರಾಂ ಮಾತನಾಡಿ, ಅಸಾಧ್ಯವನ್ನು ಸಾಧನೆಯನ್ನಾಗಿ ಮಾಡುವುದೇ ರಾಜಕಾರಣ. ಅಂತಹ ಅಸಾಧ್ಯಗಳನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮಾಡಿ ತೋರಿಸಿದ್ದಾರೆ. ಇಂದು ಭಾರತ ಅಭಿವೃದ್ದಿಯತ್ತ ಸಾಗಿದೆ. ಇಲ್ಲಿಯವರೆಗೆ ಆಡಳಿತ ನಡೆಸಿದ ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಮೂಲ ಸೌಲಭ್ಯಗಳಿಗಾಗಿ ಮನವಿ ಮಾಡಿದರೆ ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆಗೊಳ್ಳುವುದು ಶತಸಿದ್ದ. ಅದೇ ರೀತಿ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಂಕಲ್ಪಮಾಡಿ. ಈ ಮೂಲಕ ಅಭಿವೃದ್ದಿಯ ಕ್ಷೇತ್ರವನ್ನಾಗಿಸಲು ಮುಂದಾಗಿ ಎಂದು ಮನವಿ ಮಾಡಿದರು.
    ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಮಾತನಾಡಿ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತವನ್ನು ಮಂಡ್ಯ ವಿಧಾನಸಭಾ ಕ್ಷೇತ್ರದ ಜನರು ನೀಡಿದ್ದರು. ಈ ಬಾರಿ ಪಕ್ಷದ ಶಾಸಕರನ್ನು ಆಯ್ಕೆ ಮಾಡುತ್ತೀರಿ ಎನ್ನುವ ನಂಬಿಕೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಪಕ್ಷಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
    ಬಿಜೆಪಿ ಮುಖಂಡರಾದ ಡಾ.ಸದಾನಂದ, ಸುಜಾತಾ, ಸೋಮಶೇಖರ್, ಫಣೀಶ್, ಚಂದ್ರಣ್ಣ, ರಾಮಾಚಾರಿ, ಅಶೋಕ್, ಶಿವಕುಮಾರ್ ಆರಾಧ್ಯ, ವರದರಾಜು, ರವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts