More

    ಮೂಲ ಬಿಜೆಪಿಗರ ನಿರ್ಲಕ್ಷ್ಯಕ್ಕೆ ಸಿಎಂ ಬೇಸರ: ಸಚಿವರ ಮೇಲಾಟ, ಬಿಜೆಪಿ ಹೈಕಮಾಂಡ್ ಅಸಮಾಧಾನ

    ಮೃತ್ಯುಂಜಯ ಕಪಗಲ್ ಬೆಂಗಳೂರು

    ಜನರ ಜೀವ-ಜೀವನ, ಆರ್ಥಿಕ ವ್ಯವಸ್ಥೆಗೆ ಕರೊನಾ ಪಿಡುಗು ಕೊಡಲಿ ಪೆಟ್ಟು ನೀಡಿದೆ. ಇಂಥ ವಿಷಮ ಸನ್ನಿವೇಶದಲ್ಲೂ ಕೆಲ ಸಚಿವರ ಮೇಲಾಟ, ಮತ್ತೆ ಹಲವರ ನಿರ್ಲಿಪ್ತತೆ ಮಾಹಿತಿ ಪಡೆದ ಬಿಜೆಪಿ ಹೈಕಮಾಂಡ್ ಅಸಮಾಧಾನಗೊಂಡಿದೆ.

    ಕರೊನಾ ಕಟ್ಟಿ ಹಾಕುವಲ್ಲಿ ಸಚಿವರ ಪ್ರಾರಂಭಿಕ ಉತ್ಸಾಹ, ಸ್ಪೂರ್ತಿಯು ಅಧಿಕಾರಿಗಳನ್ನು ಹುರಿದುಂಬಿಸಿತ್ತು. ಲಭ್ಯ ತಂತ್ರಜ್ಞಾನ ಬಳಕೆ, ಸಚಿವರು, ಅಧಿಕಾರಿಗಳ ಉಮೇದಿಗೆ ತಕ್ಕಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಮುಕ್ತ ಅವಕಾಶ ನೀಡಿದ್ದರು. ರಾಜ್ಯ ಸರ್ಕಾರದ ಒಟ್ಟಾರೆ ಕಾರ್ಯತಂತ್ರವು ಕೇಂದ್ರದ ಪ್ರಶಂಸೆಗೂ ಪಾತ್ರವಾಗಿತ್ತು. ಈ ಶಹಬ್ಬಾಸ್ ಗಿರಿ ಮತ್ತಷ್ಟು ಮುನ್ನುಗ್ಗುವುದಕ್ಕೆ ಕಾರಣವಾಗುವ ಬದಲು ಬೇರೆಯೇ ತಿರುವು ಪಡೆಯಿತು. ಹೊಣೆ ಜಾಗದಲ್ಲಿ ಅಧಿಕಾರ ಬಂದು ಕೂತಿತು. ನಿಯಂತ್ರಣದ ಶ್ರೇಯಸ್ಸು ದಕ್ಕಿಸಿಕೊಳ್ಳಲು ಕೆಲವರು ಹೆಣಗಾಡುತ್ತಿದ್ದು, ಸಚಿವರ ನಡುವೆ ಸಮನ್ವಯದ ಕೊರತೆಯು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಲದೆ ಸರ್ಕಾರದ ಮಟ್ಟದಲ್ಲಿ ಕೈಗೊಂಡ ನಿರ್ಣಯಗಳು ತ್ವರಿತವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಸವಲತ್ತುಗಳು ಸಮರ್ಪಕವಾಗಿ ಸೋಂಕಿತರು, ಶಂಕಿತರು, ಲಕ್ಷಣರಹಿತರಿಗೆ ಸಕಾಲಕ್ಕೆ ತಲುಪದೆ ಅಲ್ಪಮಟ್ಟಿಗೆ ಎಡವಟ್ಟಾಗಿದೆ ಎಂಬ ಸಮಗ್ರ ಮಾಹಿತಿ ಹೈಕಮಾಂಡ್​ಗೆ ತಲುಪಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ನಿರ್ಲಿಪ್ತ ನಿಲುವು: ಕರೊನಾ ವಿಚಾರದಲ್ಲಿ ಎಲ್ಲ ಸಚಿವರನ್ನು ಸಿಎಂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದರೂ ಕೆಲವರದು ನಿರ್ಲಿಪ್ತ ನಿಲುವು. ಪಕ್ಷಕ್ಕೆ ಬಂದ ಹೊಸಬರು ತಮಗೆ ವಹಿಸಿದ ಜವಾಬ್ದಾರಿ ನಿರ್ವಹಿಸುವಲ್ಲಿ ಕ್ರಿಯಾಶೀಲವಾಗಿದ್ದು, ಮೂಲ ಬಿಜೆಪಿಯವರ ಪೈಕಿ ಬೆರಳೆಣಿಕೆಯಷ್ಟು ಸಚಿವರು ಮಾತ್ರ ಆಸಕ್ತಿಯಿಂದ ತೊಡಗಿಕೊಂಡಿದ್ದಾರೆ. ಹಿರಿಯರು ಎನಿಸಿಕೊಂಡ ಒಂದಿಬ್ಬರು ತಾವಾಯಿತು, ತಮ್ಮ ಖಾತೆ ನಿರ್ವಹಣೆಯಾಯಿತು ಎಂಬಂತಿರುವುದನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ಯಡಿಯೂರಪ್ಪ ತಮ್ಮ ಮಿತಿಯಲ್ಲಿ ಸಮಗ್ರವಾಗಿ ತೊಡಗಿಸಿಕೊಂಡಿರುವ ಕಾರಣ ಕೇಂದ್ರ ಅಧ್ಯಯನ ತಂಡದ ವರದಿ ಕೈಸೇರಿದ ಬಳಿಕ ಈ ಹಿರಿಯರಿಗೆ ಬಿಸಿ ಮುಟ್ಟಿಸುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ಗ್ರಾಪಂ ಚುನಾವಣೆ ಅಕ್ಟೋಬರ್​ನಲ್ಲಿ?

    ಮೇಲ್ನೋಟದಲ್ಲೇ ಕೇಂದ್ರ ತಂಡಕ್ಕೆ ವೇದ್ಯ: ಸೋಂಕು ಉಲ್ಬಣಿಸಿರುವ ಹಂತದಲ್ಲಿ ಎಲ್ಲೋ ಏರುಪೇರಾಗಿರುವುದನ್ನು ಕೇಂದ್ರ ಅಧ್ಯಯನ ತಂಡ ಸಲಹೆ ರೂಪದಲ್ಲಿ ಎಚ್ಚರಿಕೆ ನೀಡಿದೆ. ಖುದ್ದು ಅಧ್ಯಯನ ಕಾಲಕ್ಕೆ ನಿಯಂತ್ರಿತ ವಲಯ (ಕಂಟೇನ್ಮೆಂಟ್ ಜೋನ್)ದ ವಸ್ತುಸ್ಥಿತಿ, ಚಿಕಿತ್ಸಾ ಸೌಲಭ್ಯಗಳ ಕ್ಷೇತ್ರ ಮಾಹಿತಿಯನ್ನು ಪಡೆದಿದ್ದು, ಎಲ್ಲ ಹಂತದಲ್ಲೂ ಮತ್ತಷ್ಟು ಬಿಗಿಯಾಗಬೇಕಾಗಿದೆ ಎಂದು ಮೇಲ್ನೋಟಕ್ಕೆ ಕಂಡುಕೊಂಡಿದೆ. ತಾಳತಪ್ಪಿದ ಸಚಿವರ ಮಧ್ಯೆ ಸಮನ್ವಯತೆ ಮೂಡಿಸುವುದಕ್ಕಾಗಿ ಯಡಿಯೂರಪ್ಪ ಸಾಕಷ್ಟು ಬೆವರಿಳಿಸಿದ್ದಾರೆ. ವಿಭಿನ್ನ ಉಸ್ತುವಾರಿ ಒಪ್ಪಿಸಿದರೂ ಒಳಗೊಳ್ಳುವಿಕೆ ಪೂರ್ಣಪ್ರಮಾಣದಲ್ಲಿ ಇಲ್ಲವೆಂಬುದು ತಿಳಿದು, ತಾವೇ ಫೀಲ್ಡ್ಗೆ ಇಳಿಯಬೇಕಾದೀತು ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

    ಪ್ರಕರಣಗಳ ಸಂಖ್ಯೆ ಹೆಚ್ಚಳದ ಜತೆಗೆ ಕೇಂದ್ರ ಸರ್ಕಾರಕ್ಕೆ ಅಧ್ಯಯನ ತಂಡ ಸಲ್ಲಿಸಲಿರುವ ವರದಿ ಬಗ್ಗೆ ಸೂಕ್ಷ್ಮವಾಗಿ ಗ್ರಹಿಸಿದ್ದಾರೆ. ಹೀಗಾಗಿ ಕಾವೇರಿ ನಿವಾಸದಲ್ಲಿ ಬುಧವಾರ ಬೆಳಗ್ಗೆಯೇ ತುರ್ತು ಸಭೆ ಕರೆದು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸಚಿವರ ಜತೆಗೆ ಅಧಿಕಾರಿಗಳಿಗೂ ಖಡಕ್ ಎಚ್ಚರಿಕೆ ನೀಡಿರುವುದೂ ವರಿಷ್ಠರ ಗಮನಕ್ಕೆ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ನಡಾವಳಿ ಸೋರಿಕೆಗೆ ಬೇಸರ: ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯ ನಡಾವಳಿಗಳು ಸೋರಿಕೆಯಾಗಿರುವ ವಿಷಯ ಕೆಲ ದೆಹಲಿ ನಾಯಕರ ಕಿವಿಗೂ ತಲುಪಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಗಳನ್ನು ಹಲವು ಸಚಿವರು ಬಲವಾಗಿ ಅಲ್ಲಗಳೆದು, ಸಕಾರಣ ಸಹಿತವಾಗಿ ಸಮರ್ಥಿಸಿಕೊಂಡಿರುವುದನ್ನು ಅವಲೋಕಿಸಿದ್ದಾರೆ. ವಿಧಾನಮಂಡಲ ಸಮಿತಿಯ ದಾಖಲೆ ಎಂದರೆ ಅದು ಸದನದ ಕಲಾಪದಂತೆಯೇ ಎಂಬ ಕಾರಣಕ್ಕೆ ಹೈಕಮಾಂಡ್ ಆತಂಕಕ್ಕೆ ಒಳಗಾಗಿದೆ. ಎಷ್ಟೇ ಸಮರ್ಥನೆ ಮಾಡಿಕೊಂಡರೂ ಪ್ರತಿಪಕ್ಷಗಳಿಗೆ ಅದೊಂದು ಪ್ರಮುಖ ಅಸ್ತ್ರವೇ ಆಗಿದೆ ಎಂಬುದು ಹೈಕಮಾಂಡ್​ಗೆ ಇರುವ ಆತಂಕವಾಗಿದೆ.

    ನೇಮಕದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪೊಲೀಸ್ ಇಲಾಖೆಯಿಂದ ಅನ್ಯಾಯ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts