More

    ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿನ ಪತಾಕೆ ; ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟ ಜೆಡಿಎಸ್

    ಕೋಲಾರ : ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಚಿದಾನಂದ ಎಂ.ಗೌಡ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಎಮ್ಮೆಲ್ಸಿ ವೈ.ಎ. ನಾರಾಯಣಸ್ವಾಮಿ ಯಶಸ್ವಿಯಾದರೆ, ಸ್ವ-ಕ್ಷೇತ್ರದವರೇ ಆದ ಜೆಡಿಎಸ್ ಅಭ್ಯರ್ಥಿ ತೂಪಲ್ಲಿ ಆರ್. ಚೌಡರೆಡ್ಡಿ ಪರಾಭವಗೊಂಡಿದ್ದು ಪಕ್ಷದಲ್ಲಿ ನಿರಾಸೆ ಮೂಡಿಸಿದೆ.

    ಪರಿಷತ್ ಚುನಾವಣೆಯಲ್ಲಿ ಚಿದಾನಂದ ಗೌಡ ಬಿಜೆಪಿ ಅಭ್ಯರ್ಥಿ ಆಗಿದ್ದರೂ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಮಟ್ಟಿಗೆ ಬಿಜೆಪಿ ಎಮ್ಮೆಲ್ಸಿ ವೈ.ಎ. ನಾರಾಯಣಸ್ವಾಮಿ ಮತ್ತು ಸ್ವಕ್ಷೇತ್ರದವರಾದ ಜೆಡಿಎಸ್ ಅಭ್ಯರ್ಥಿ ಆರ್. ಚೌಡರೆಡ್ಡಿ ನಡುವೆ ಹಣಾಹಣಿ ಎಂದೇ ಬಿಂಬಿತವಾಗಿತ್ತು.

    ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಿಂತಲೂ ತಾವೇ ಅಭ್ಯರ್ಥಿಯೆಂಬಂತೆ ಎರಡೂ ಜಿಲ್ಲೆಗಳಲ್ಲಿ ಮತದಾರರನ್ನು ಎಡತಾಕಿದ್ದ ವೈ.ಎ.ಎನ್. ಜಾತಿ ಲೆಕ್ಕಾಚಾರದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಕರೆಸಿಕೊಂಡು ಪ್ರಚಾರ ಸಭೆ ನಡೆಸಿದ್ದರು. ಕೋಲಾರದಲ್ಲಿ ಸಚಿವ ಡಾ. ಸುಧಾಕರ್ ಮೂಲಕವೂ ಮತ ಬೇಟೆಯಾಡಿದ್ದರು.

    ಶಿರಾದ ಚಿದಾನಂದ ಎಂ. ಗೌಡ ಅವರನ್ನು ಬಿಜೆಪಿಗೆ ಕರೆತಂದವರು ಇದೇ ವೈಎಎನ್. ಹೀಗಾಗಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಬಸವರಾಜು, ಲೇಪಾಕ್ಷಿ ಇತರ ಆಕಾಂಕ್ಷಿಗಳು ವೈಎಎನ್ ವಿರುದ್ಧ ಬುಸುಗುಟ್ಟಿದ್ದರು. ಇದೆಲ್ಲವನ್ನೂ ಮೆಟ್ಟಿ ನಿಂತ ವೈಎಎನ್ ತಂತ್ರಗಾರಿಕೆಯಿಂದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ತಮ್ಮದೇ ತಾಲೂಕಿನ ಜೆಡಿಎಸ್ ಅಭ್ಯರ್ಥಿ ಆರ್. ಚೌಡರೆಡ್ಡಿಗೂ ಸೋಲುಣಿಸಿದ್ದಾರೆ.

    ಜೆಡಿಎಸ್‌ಗೆ ನಿರಾಸೆ: ಪರಿಷತ್‌ಗೆ ಹಿಂದೆ ಪ್ರತಿನಿಧಿಸಿದ್ದ ಆರ್.ಚೌಡರೆಡ್ಡಿ ಜಿಲ್ಲೆಗೆ ಚಿರಪರಿಚಿತರಾಗಿದ್ದರಿಂದ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಪದವೀಧರ ಮತದಾರರ ಸಂಪರ್ಕ ಹೊಂದಿದ್ದರು. ಆದರೆ ಚುನಾವಣಾ ಕಾರ್ಯತಂತ್ರ ರೂಪಿಸುವಲ್ಲಿ ಸಫಲವಾಗಲಿಲ್ಲ.

    ಪಕ್ಷದಿಂದ ವರಿಷ್ಠರ‌್ಯಾರೂ ಜಿಲ್ಲೆಯಲ್ಲಿ ಪ್ರಚಾರಕ್ಕೆ ಬರಲಿಲ್ಲ. ಕನಿಷ್ಠ ಪಕ್ಷ ಶ್ರೀನಿವಾಸಪುರದ ಮಾಜಿ ಶಾಸಕರೂ ಆಗಿರುವ ಜಿಲ್ಲಾಧ್ಯಕ್ಷ ಜಿ.ಕೆ. ವೆಂಕಟಶಿವಾರೆಡ್ಡಿ , ಶಾಸಕ ಕೆ. ಶ್ರೀನಿವಾಸಗೌಡರಿಂದಲೂ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅವರ ಪ್ರಯತ್ನ ಕೈಗೂಡದೆ ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ.

    ಆಗ್ನೇಯ ಪದವೀಧರ ಕ್ಷೇತ್ರದ ಇತಿಹಾಸದಲ್ಲಿ ಬಿಜೆಪಿ 7 ಬಾರಿ ಗೆದ್ದು ಒಂದು ಸಲ ಕಳೆದುಕೊಂಡಿತ್ತು. ಕಾಂಗ್ರೆಸ್ ಎಂದೂ ಗೆದ್ದಿರಲಿಲ್ಲ. ಜೆಡಿಎಸ್‌ನಲ್ಲಿ ಎಮ್ಮೆಲ್ಸಿ ಆಗಿದ್ದ ರಮೇಶ್‌ಬಾಬು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರಿಂದ ಹಿಂದೆ ಚೌಡರೆಡ್ಡಿ ಜತೆಗಿದ್ದವರಲ್ಲಿ ಕೆಲವರು ಕೈಪರ ಕೆಲಸ ಮಾಡಿದ್ದು ಒಂದೆಡೆಯಾದರೆ ಜೆಡಿಎಸ್‌ನ ಮತ ಬುಟ್ಟಿಗೆ ರಮೇಶ್‌ಬಾಬು ಕೈ ಹಾಕಿದ್ದರಿಂದ ಚೌಡರೆಡ್ಡಿಗೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಮತ ಗಳಿಕೆ ತೀವ್ರ ಕುಸಿದಿದ್ದು ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

    ವಿಜಯೋತ್ಸವ : ಬೆಂಗಳೂರಿನ ಕಲಾ ಕಾಲೇಜು ಮುಂಭಾಗ ನಡೆದ ವಿಜಯೋತ್ಸವದಲ್ಲಿ ಎಮ್ಮೆಲ್ಸಿ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ ಸೇರಿ ಶಿಕ್ಷಕ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಶಿಕ್ಷಕರು, ನೌಕರರು, ಪದವೀಧರರ ಸಮಸ್ಯೆಗಳ ಪರಿಹಾರ ಬಿಜೆಪಿ ಸರ್ಕಾರದಿಂದ ಮಾತ್ರವೇ ಸಾಧ್ಯ ಎಂಬ ಸತ್ಯವೇ ಈ ಜಯಕ್ಕೆ ಕಾರಣ. ಪ್ರತಿಪಕ್ಷಗಳ ಟೀಕೆ, ಆರೋಪಗಳಿಗೆ ಸೊಪ್ಪು ಹಾಕದ ಮತದಾರರು ಅಭಿವೃದ್ಧಿಗೆ ಬೆಂಬಲ ನೀಡಿದ್ದಾರೆ. ಚಿದಾನಂದ ಗೌಡರ ಆಯ್ಕೆ ಮೂಲಕ ಪರಿಷತ್‌ನಲ್ಲಿ ಶಿಕ್ಷಕರು, ಪದವೀಧರರ ಧ್ವನಿ ಮತ್ತಷ್ಟು ಬಲಗೊಳ್ಳಲಿದೆ, ಶಿಕ್ಷಕರ, ನೌಕರರ ಬಹುದಿನಗಳ ಸಮಸ್ಯೆಗಳಿಗೆ ಕೊನೆ ಹಾಡಲು ಶಕ್ತಿ ಬಂದಿದೆ.
    ವೈ.ಎ. ನಾರಾಯಣಸ್ವಾಮಿ, ಎಮ್ಮೆಲ್ಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts