More

    ಭಾವಸಾರ ಕ್ಷತ್ರೀಯ ನಿಗಮ ಮಂಡಳಿ ಸ್ಥಾಪನೆಗೆ ಕ್ರಮ; ರುದ್ರಪ್ಪ ಲಮಾಣಿ ಹೇಳಿಕೆ

    ಹಾವೇರಿ: ಭಾವಸಾರ ಕ್ಷತ್ರಿಯ ರಾಜಕೀಯ ರಂಗ ಬಿಟ್ಟು ಉಳಿದೆಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಈ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪಿಸಲು ಮುಖ್ಯಮಂತ್ರಿಯವರಿಗೆ ಒತ್ತಡ ಹಾಕುತ್ತೇನೆ ಎಂದು ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಹೇಳಿದರು.
    ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಭಾನುವಾರ ನಗರದ ಜಿಲ್ಲಾ ಗುರುಭವನದಲ್ಲಿ ಆಯೋಜಿಸಿದ್ದ ಭಾವಸಾರ ಉತ್ಸವ-2023 ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
    ನಿರಂತರ ಪರಿಶ್ರಮ ಹಾಗೂ ಸತತ ಅಧ್ಯಯನದಿಂದ ಮಾತ್ರ ವಿದ್ಯಾರ್ಥಿಗಳ ಯಶಸ್ಸು ಸಾಧ್ಯ. ಜೀವನದಲ್ಲಿ ಮಕ್ಕಳು ಉನ್ನತ ಗುರಿಯನ್ನು ಇಟ್ಟುಕೊಂಡು ಓದುವ ಹವ್ಯಾಸ ಹಾಗೂ ಛಲವನ್ನು ಬೆಳೆಸಿಕೊಳ್ಳಬೇಕು. ಭಾವಸಾರ ಸಮಾಜದ ಆರಾಧ್ಯದೇವತೆ ತುಳಜಾಭವಾನಿಯನ್ನು ಪ್ರಾರ್ಥಿಸುವ ಮೂಲಕ ವಿದ್ಯಾರ್ಥಿಗಳು ಓದುವ ಛಲ ರೂಢಿಸಿಕೊಳ್ಳಬೇಕು ಎಂದರು.
    ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಈ ಸಮಾಜ ಬೆಳೆದಿದೆ. ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದಡಿ ಆಡಳಿತ ನಡೆಸುತ್ತಿದ್ದು, ಸಮಾಜದ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತದೆ. ಭಾವಸಾರ ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಿ ಸರ್ಕಾರದೊಂದಿಗೆ ಶ್ರಮಿಸುತ್ತೇನೆ ಎಂದರು.
    ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಭಾವಸಾರ ಸಮಾಜ ಎಲ್ಲ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಸೌಹಾರ್ಧತೆ ಹೊಂದಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಈ ಸಮಾಜ ಮುಂಚೂಣಿಯಲ್ಲಿದ್ದು, ರಾಜಕೀಯವಾಗಿ ಮುಂದೆ ಬರಬೇಕಿದೆ. ಒಬ್ಬ ಸುಶಿಕ್ಷಿತ ಸಾವಿರ ಶಿಕ್ಷಕರಿಗೆ ಸಮಾನ. ಸಮಾಜದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಸಾಕಷ್ಟಿದ್ದು, ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಲಿ ಎಂದರು.
    ಹಿರೇಕೆರೂರ ಶಾಸಕ ಯು.ಬಿ. ಬಣಕಾರ, ಭಾವಸಾರ ಕ್ಷತ್ರಿಯ ಮಹಾಸಭಾ ರಾಜ್ಯಾಧ್ಯಕ್ಷ ಶ್ರೀನಿವಾಸ ಪಿಸ್ಸೆ, ಜಿಲ್ಲಾಧ್ಯಕ್ಷ ಪ್ರಕಾಶ ಮಾಳದಕರ, ಹೈ ಪಾವರ್ ಕಮೀಟಿಯ ರಮೇಶ ತಾಪ್ಸೆ ಮಾತನಾಡಿದರು. 2023ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ 390ನೇ ರ‌್ಯಾಂಕ್ ಪಡೆದ ಪೂಜಾ ಬೇದ್ರೆ, 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಹಾಗೂ ತಾಲೂಕ ಮಟ್ಟದ ಪ್ರತಿಭಾ ಪುರಸ್ಕಾರ ನೀಡಲಾಯಿತು.
    ಯುವ ಪರಿಷತ್ ರಾಜ್ಯಾಧ್ಯಕ್ಷ ಅನಂತಕುಮಾರ ಕೆ.ಜಿ., ಪ್ರಮುಖರಾದ ಭಾನುದಾಸ ಸರ್ವದೆ, ವಲಯ ಅಧ್ಯಕ್ಷ ಅರುಣಕುಮಾರ ಕುಂಠೆ, ಯುವ ಪರಿಷತ್ ರಾಜ್ಯ ಉಪಾಧ್ಯಕ್ಷ ಪ್ರಮೋದ ನವಲೆ, ಅಂಬಾಜಿ ತಾಂಬಳೆ, ಎಂ.ಎಂ. ಮೈದೂರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts