More

    ಭಟ್ರಹಿತ್ಲುಗೆ ಬೇಕಿದೆ ಸಂಪರ್ಕ, ಸಮಸ್ಯೆಯಿಂದಾಗಿಯೇ ಊರು ತೊರೆದ ಕುಟುಂಬಗಳು

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಗ್ರಾಮೀಣ ಪ್ರದೇಶದ ಜನ ಈಗಲೂ ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬುದಕ್ಕೆ ಭಟ್ರಹಿತ್ಲು ಗ್ರಾಮವನ್ನು ನಿದರ್ಶನವಾಗಿ ತೋರಿಸಬಹುದು. ಇಲ್ಲಿ ಸಂಪರ್ಕ ವ್ಯವಸ್ಥೆಯಿರುವ ಭೂಭಾಗ ನಾಡಾ ಗ್ರಾಮಕ್ಕೆ ಸೇರಿದರೆ, ಮನೆಗಳಿರುವ ಪ್ರದೇಶ ಸೇನಾಪುರ ಗ್ರಾಮಕ್ಕೆ ಸೇರಿದೆ. ಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಇದ್ದರೂ ಸಂಪರ್ಕ ಮರೀಚಿಕೆಯಾಗಿಯೇ ಉಳಿದಿದೆ.
    ಭಟ್ರಹಿತ್ಲು ಪರಿಸರದಲ್ಲಿ 11 ಮನೆಗಳಿದ್ದು, 60 ಜನಸಂಖ್ಯೆ ಇದೆ. ಸಂಪರ್ಕ ವ್ಯವಸ್ಥೆ ಇಲ್ಲದೆ ಎರಡು ಕುಟುಂಬಗಳು ಇಲ್ಲಿಂದ ಬೇರೆಡೆ ಹೋಗಿವೆ. ಕೃಷಿ ಇಲ್ಲಿನ ಜನರ ಮೂಲ ಕಸುಬು. ಪರಿಸರದಲ್ಲಿ ನಾಲ್ವರು ತೀವ್ರ ಅನಾರೋಗ್ಯಕ್ಕೆ ಒಳಗಾದವರಿದ್ದಾರೆ. ವಾರಕ್ಕೊಮ್ಮೆ ಅವರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕು. ಕಿಮೋಥೆರಪಿ ಆಗಬೇಕಾದವರೂ ಇಲ್ಲದ್ದು ಅವರನ್ನು ಕಂಬಳಿಯಲ್ಲಿ ಮಲಗಿಸಿ ಅಥವಾ ಕುರ್ಚಿಯಲ್ಲಿ ಕುಳ್ಳಿರಿಸಿ ಗದ್ದೆ ಕಂಟದಲ್ಲಿ ಕರೆತರಬೇಕು. ಸೌಪರ್ಣಿಕಾ ನದಿ ಬದಿ ಕಟ್ಟುವ ಸಂದರ್ಭ ರಿಂಗ್ ರಸ್ತೆ ಆಗುತ್ತದೆ ಎಂದು ಜನ ನಂಬಿದ್ದರು. ಆದರೆ ಅದಿನ್ನೂ ಈಡೇರಿಲ್ಲ ಎನ್ನುತ್ತಾರೆ ಇಲ್ಲಿನ ಜನ.

    ಸಮಸ್ಯೆ ಪರಿಹರಿಸುವವರು ಯಾರು?: ಮೊವಾಡಿ -ನಾಡಾ ಗ್ರಾಮ ಸಂಪರ್ಕ ಕಲ್ಪಿಸುವ ಸೇತುವೆ ಪಕ್ಕದಲ್ಲಿದೆ ಭಟ್ರಹಿತ್ಲು. ಸೇತುವೆ ಬದಿಯಿಂದ ಹೊಳೆ ಸಾಲಲ್ಲಿ ಹೋದರೆ 100 ಮೀ. ಅಂತರದಲ್ಲಿ ಊರು ಸಿಗುತ್ತದೆ. ಸರ್ಕಾರ ಸೇತುವೆಗೆ ಐದು ಕೋಟಿ ರೂ, ಸೌಪರ್ಣಿಕಾ ನದಿ ಬದಿ ಕಟ್ಟುವುದಕ್ಕೆ ಐದು ಕೋಟಿ ರೂ. ವೆಚ್ಚ ಮಾಡಿದೆ. ಭಟ್ರಹಿತ್ಲುವಿನಿಂದ ಸಂಪರ್ಕ ಕಲ್ಪಿಸಲು ರಸ್ತೆ ಮಾಡಲು ಮುಂದಡಿಯಿಟ್ಟರೂ ಖಾಸಗಿ ಜಾಗದ ತಕರಾರಿಂದ ಆ ಕೆಲಸ ಬಾಕಿಯಾಗಿದೆ. ಹೊಳೆ ಬದಿಯಲ್ಲಿ ಎಷ್ಟು ಸರ್ಕಾರಿ ಜಾಗವಿದೆ, ಎಷ್ಟು ಒತ್ತುವರಿಯಾಗಿದೆ ಎಂದು ಅಳತೆ ಮಾಡಿ ವಿಂಗಡಿಸಿದರೆ ಸಮಸ್ಯೆ ಪರಿಹಾರ ಆಗುತ್ತದೆ. ಆದರೆ ಅದನ್ನು ಮಾಡುವವರು ಯಾರು ಎನ್ನುತ್ತಾರೆ ಸ್ಥಳೀಯರು.

    ಭಟ್ರಹಿತ್ಲು ಸಂಪರ್ಕ ವ್ಯವಸ್ಥೆಗೆ ಸರ್ಕಾರಿ ಜಾಗವಿದ್ದರೆ, ಗ್ರಾಪಂಗೆ ನಿರ್ದೇಶನ ನೀಡಿ ಸಂಪರ್ಕ ವ್ಯವಸ್ಥೆ ಮಾಡಿಕೊಡಬಹುದು. ಖಾಸಗಿ ಜಾಗವಾದರೆ, ಮಾಲೀಕರು ಬಿಟ್ಟುಕೊಟ್ಟರೆ ವ್ಯವಸ್ಥೆ ಮಾಡಬಹುದು. ಭಟ್ರಹಿತ್ಲು ಸಂಪರ್ಕ ನೀಡುವ ಸೌಪರ್ಣಿಕಾ ನದಿ ತೀರದಲ್ಲಿ ಒತ್ತುವರಿ ಹಾಗೂ ಸರ್ಕಾರಿ ಜಾಗ ಗುರುತಿಸುವಂತೆ ತಹಸೀಲ್ದಾರ್‌ಗೆ ನಿರ್ದೇಶನ ನೀಡಲಾಗುವುದು. ಸರ್ಕಾರಿ ಜಾಗ ಹಾಗೂ ಒತ್ತುವರಿ ಮಾಡಿದ್ದು ನಿಜವಾದಲ್ಲಿ ಅದನ್ನು ವಶಕ್ಕೆ ಪಡೆದು ಸಂಪರ್ಕ ವ್ಯವಸ್ಥೆ ಮಾಡುವ ಪ್ರಯತ್ನ ಮಾಡಲಾಗುತ್ತದೆ.
    – ಕೆ.ರಾಜು, ವಿಭಾಗಾಧಿಕಾರಿ ಕುಂದಾಪುರ

    ಭಟ್ರಹಿತ್ಲು ಸಂಪರ್ಕ ವ್ಯವಸ್ಥೆ ಅತ್ಯಂತ ಜರೂರು ಆಗಿದ್ದು, ಹಲವಾರು ವರ್ಷಗಳಿಂದ ಸ್ಥಳೀಯರು ಸಂಪರ್ಕಕ್ಕಾಗಿ ಅಂಗಲಾಚಿದ್ದು, ಇದುವರಗೆ ರಸ್ತೆ ಆಗದಿರುವುದು ನೋವಿನ ಸಂಗತಿ. ಸರ್ಕಾರ ಖಾಸಗಿ ಜಾಗವಾಗಿದ್ದರೆ, ಅದನ್ನು ವಿಕ್ರಯಿಸಿ ಭಟ್ರಹಿತ್ಲುವಿಗೆ ಸಂಚಾರ ವ್ಯವಸ್ಥೆ ಮಾಡಿಕೊಡಬೇಕು. ಸಂಚಾರದ ಸಮಸ್ಯೆಯಿಂದ ಈಗಾಗಲೇ ಎರಡು ಕುಟುಂಬ ಜಾಗ ಖಾಲಿ ಮಾಡಿದ್ದು, ರಸ್ತೆ ಆಗದಿದ್ದರೆ ಮತ್ತಷ್ಟು ಕುಟುಂಬ ಗುಳಿಯೇಳಲಿವೆ.
    – ಉದಯ ಜೋಗಿ, ಸದಸ್ಯ ನಾಡ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts