More

    ಅಂಬೇಡ್ಕರ್ ಚಿಂತನೆಗಳಿಗೆ ಪೂರಕವಾದ ಬಹುತ್ವ ಭಾರತ ನಮ್ಮ ಅಸ್ಮಿತೆಯಾಗಬೇಕು

    ದೊಡ್ಡಬಳ್ಳಾಪುರ: ಸಾಂವಿಧಾನಿಕ ಆಶಯಗಳಿಗೆ ಧಕ್ಕೆ ತರುವ ಪ್ರಯತ್ನಗಳು ದೇಶದಲ್ಲಿ ಹೆಚ್ಚುತ್ತಿರುವುದು ಆತಂಕಕಾರಿಯಾಗಿದ್ದು, ಅಂಬೇಡ್ಕರ್ ಚಿಂತನೆಗಳಿಗೆ ಪೂರಕವಾದ ಬಹುತ್ವ ಭಾರತ ನಮ್ಮ ಅಸ್ಮಿತೆಯಾಗಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಚಂದ್ರಪ್ಪ ಹೇಳಿದರು.

    ನಗರದ ಹೊರವಲಯದ ಶ್ರೀ ದೇವರಾಜ್ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಓದು ಕಾರ್ಯಕ್ರಮದಲ್ಲಿ ಮಾತನಾಡಿದರು.

    ಶೋಷಿತ ಸಮುದಾಯದಲ್ಲಿ ಹುಟ್ಟಿ ಜಗತ್ತು ಮೆಚ್ಚುವ ಸಾಧನೆ ಮಾಡಿದ ಅಂಬೇಡ್ಕರ್ ಪ್ರಜ್ಞಾಪೂರ್ವಕವಾಗಿ ಕಟ್ಟಿಕೊಟ್ಟ ಸಾಂವಿಧಾನಿಕ ನಿಯಮಾವಳಿ ಬದಲಾಯಿಸುವ ಪ್ರಸ್ತಾಪಗಳು ಎದುರಾಗುತ್ತಿರುವುದು ಸರಿಯಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ನಡೆಯುತ್ತಿರುವ ಇತ್ತೀಚಿನ ಕೆಲ ಬೆಳವಣಿಗೆಗಳು ಅಂಬೇಡ್ಕರ್ ತತ್ವಗಳಿಗೆ ವಿರುದ್ಧವಾಗಿವೆ ಎಂದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಂಜುನಾಥ್ ಆರಾಧ್ಯ ಮಾತನಾಡಿ, ಸಂವಿಧಾನಕ್ಕೆ 70 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಸರ್ಕಾರದಿಂದ ಎಲ್ಲ ಜಿಲ್ಲೆಗಳಲ್ಲಿ ಈ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

    ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪಿ.ಚೈತ್ರಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಚಿಕ್ಕಣ್ಣ, ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಸಿ.ಲಕ್ಷ್ಮೀಶ, ಐಕ್ಯೂಎಸಿ ಸಂಯೋಜಕ ಆರ್.ಉಮೇಶ್ ಮತ್ತಿತರರಿದ್ದರು.

    ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆ: ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಕುರಿತು ಆಶುಭಾಷಣ, ಪ್ರಬಂಧ ರಚನೆ ಹಾಗೂ ಕವನ ವಾಚನ ಸ್ಪರ್ಧೆ ನಡೆಸಲಾಯಿತು. ಆಶುಭಾಷಣ ಸ್ಪರ್ಧೆಯಲ್ಲಿ ಮಾತನಾಡಿದ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಸಮಗ್ರ ಜೀವನ ಚಿತ್ರಣವನ್ನು ಪರಿಚಯ ಮಾಡಿಕೊಟ್ಟು, ಅಂಬೇಡ್ಕರ್ ಪ್ರತಿಪಾದಿಸಿದ ಮೌಲ್ಯಗಳ ಪ್ರಸ್ತುತತೆಯ ಬಗ್ಗೆ ಗಮನ ಸೆಳೆದರು. ವಿಜೇತರಿಗೆ ಬಹುಮಾನಗಳನ್ನು ಹಾಗೂ ಪಾಲ್ಗೊಂಡ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

    ದೇಶದ ಯುವಕರ ಸಾರ್ವಕಾಲಿಕ ಆದರ್ಶವಾಗಬೇಕಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಯುವಕರ ಸ್ಮತಿಪಟಲದಿಂದ ಅಳಿಸುವ ಹುನ್ನಾರ ನಡೆಯುತ್ತಿದೆ. ಸಾಂವಿಧಾನಿಕ ಮೌಲ್ಯಗಳು ಎನಿಸಿದ ಜಾತ್ಯತೀತವಾದ, ಸಮಾಜವಾದ ಹಾಗೂ ಪ್ರಜಾಪ್ರಭುತ್ವದ ಆಶಯಗಳು ಎಂದಿಗೂ ಅರ್ಥ ಕಳೆದುಕೊಳ್ಳಬಾರದು.
    ಪ್ರೊ.ಕೆ.ಆರ್.ರವಿಕಿರಣ್
    ಕಾಲೇಜಿನ ಪ್ರಾಂಶುಪಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts