More

    ಭರಮಣ್ಣ ನಾಯಕನ ಕೆರೆ ಏರಿ ದುರಸ್ತಿಗೆ ಗ್ರಹಣ

    ಭರಮಸಾಗರ: ಐತಿಹಾಸಿಕ ಹಿನ್ನೆಲೆಯುಳ್ಳ ಬಿಚ್ಚುಗತ್ತಿ ಭರಮಣ್ಣ ನಾಯಕನ ಕೆರೆ ಏರಿ ಬಿರುಕು ದುರಸ್ತಿ ಕಾಮಗಾರಿಗೆ ಗ್ರಹಣ ಹಿಡಿದಿದ್ದು, ವಾಹನ ಸವಾರರು ಆತಂಕದಲ್ಲೇ ಸಂಚಾರ ಮಾಡುವಂತಾಗಿದೆ.

    ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆರೆಗೆ ಏತ ನೀರಾವರಿ ಮೂಲಕ ನೀರು ತುಂಬಿಸಲಾಗಿತ್ತು. ನೀರಿನ ಒತ್ತಡದಿಂದಾಗಿ ದೊಡ್ಡಕೆರೆ ಕೋಡಿ ಸಹ ಬಿದ್ದು ಏರಿ ಬಿರುಕು ಬಿಟ್ಟಿತ್ತು. ಇದರಿಂದಾಗಿ ನೀರು ಹರಿಸುವುದನ್ನು ನಿಲ್ಲಿಸಿ ಏರಿ ಮಧ್ಯಭಾಗದಲ್ಲಿ ಸುಮಾರು 200 ಮೀಟರ್ ಉದ್ದ ಹಳೇ ಏರಿ ಮಣ್ಣನ್ನು ತೆಗೆದು ಹೊಸ ಮಣ್ಣು ಹಾಸುವ ಕೆಲಸ ಕೈಗೊಳ್ಳಲಾಗಿತ್ತು.

    ಏರಿ ಮೇಲೆ 6 ಅಡಿ ಅಗಲದ ಜಾಗದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕಿರಿದಾದ ಮಾರ್ಗದಲ್ಲಿ ಬೈಕ್‌ಗಳ ಸವಾರರು ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಸಂಚರಿಸುವ ಪ್ರತಿಯೊಬ್ಬರೂ ಈ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳನ್ನು ಶಪಿಸುತ್ತಲೇ ಸಾಗುತ್ತಿದ್ದಾರೆ.

    ಆದರೂ ಕಾಮಗಾರಿ ತ್ವರಿತವಾಗಿ ಸಾಗುತ್ತಿಲ್ಲ. ಕೂಡಲೇ ಸಂಬಂಧಿತ ಜನಪ್ರತಿನಿಧಿಗಳು, ಅಧಿಕಾರಿಗಳು ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕಿದೆ ಎಂಬುದು ಇಸಾಮುದ್ರ ಗೊಲ್ಲರಹಟ್ಟಿ ಹರೀಶ್, ಹುಲ್ಲೇಹಳ್ ಪ್ರದೀಪ್, ಸುನೀಲ್, ಚಂದ್ರಶೇಖರ್ ಅವರ ಆಗ್ರಹವಾಗಿದೆ.

    ತಾತ್ಕಾಲಿಕವಾಗಿ ರಸ್ತೆಯಲ್ಲಿ ಹಾಕಿರುವ ಜಲ್ಲಿ ಕೆಸರಿನ ಜತೆ ಕೆರೆ ಸೇರಿದೆ. ರಸ್ತೆ ಗದ್ದೆಯಂತಾಗಿ ಜಾರಿಕೆಯಾಗಿದೆ. ವಾಹನ ಸವಾರರು ಈ ದಾರಿಯಲ್ಲಿ ಸಾಗಲು ಸರ್ಕಸ್ ಮಾಡಬೇಕಾಗಿದೆ. ಈ ಬಗ್ಗೆ ಗಮನ ಹರಿಸುವವರು ಯಾರೂ ಇಲ್ಲದಂತಾಗಿದೆ ಎನ್ನುತ್ತಾರೆ ಕೋಡಿರಂಗವ್ವನಹಳ್ಳಿ ರೈತ ಮಾರುತಿ.

    ಕಾಮಗಾರಿ ಆರಂಭವಾಗಿ 220 ದಿನಗಳಾದರೂ ಮುಗಿದಿಲ್ಲ. ಈಗ ಮಳೆಗಾಲದ ನೆಪವೊಡ್ಡಿ ಕೆಲಸ ಸ್ಥಗಿತಗೊಳಿಸಲಾಗಿದೆ. ಈ ವೇಳೆಗೆ ಕೆರೆ ಏರಿ ದುರಸ್ತಿಗೊಳಿಸಿ ನೀರು ಬಿಡಬಹುದಾಗಿತ್ತು. ನೀರಾವರಿ ನಿಗಮದ ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷೃವೇ ಈ ಸ್ಥಿತಿಗೆ ಕಾರಣವಾಗಿದೆ ಎಂಬುದು ಕೋಗುಂಡೆ ಬಸವನಗೌಡ್ರು ಆರೋಪವಾಗಿದೆ.

    ಈ ಬಗ್ಗೆ ನೀರಾವರಿ ನಿಗಮದ ಅಧಿಕಾರಿಗಳನ್ನು ವಿಚಾರಿಸಬೇಕು. ಅವರು ಕೆರೆ ಏರಿ ಭದ್ರಗೊಳಿಸುವ ಕೆಲಸ ಮುಗಿಸಿದ ಮೇಲೆ ಮಾತ್ರ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಿಸಿ ಕೊಡಲಾಗುವುದು.
    ಕೃಷ್ಣಪ್ಪ, ಎಇಇ, ಭರಮಸಾಗರ.

    ಈ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ಎಚ್ಚರಿಕೆ ಫಲಕ ಇಲ್ಲ. ಭದ್ರತಾ ಸಿಬ್ಬಂದಿಯೂ ಇಲ್ಲ. ಈ ಹಿಂದೆ ಕೆರೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಾಗ ನೆಪಕ್ಕೆ ಮಾತ್ರ ಕೆಲವು ದಿನ ಪೊಲೀಸರು ಇದ್ದರು.
    ಎನ್.ಎಚ್.ಮಂಜುನಾಥ್, ಹನುಮಂತಪ್ಪ, ರೈತ, ಭರಮಸಾಗರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts