More

    ಭದ್ರಾವತಿ: 1.28 ಕೋಟಿ ರೂ. ಉಳಿತಾಯ ಬಜೆಟ್

    ಭದ್ರಾವತಿ: ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ 2024-25 ನೇ ಸಾಲಿನ ಆಯವ್ಯಯ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ 1.28 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದರು.

    ಕಳೆದ ಸಾಲಿನ ವಾಸ್ತವ ಆದಾಯ ಮತ್ತು ವೆಚ್ಚವನ್ನು ಗಮನದಲ್ಲಿರಿಸಿಕೊಂಡು ಈ ಬಾರಿಯ ಆಯವ್ಯಯ ತಯಾರಿಸಲಾಗಿದೆ. ತೆರಿಗೆ ಸಂಗ್ರಹ ಸೇರಿದಂತೆ ವಿವಿಧ ಮೂಲಕಗಳಿಂದ ಆದಾಯ ಸೇರಿದಂತೆ ಒಟ್ಟು ಜಮಾ 11,207.21 ಲಕ್ಷ ರೂ. ನಿರೀಕ್ಷಿಸಲಾಗಿದ್ದು, 11,205.93 ರೂ. ಖರ್ಚಾಗಬಹುದೆಂದು ಅಂದಾಜಿಸಲಾಗಿದೆ. ಇದರೊಂದಿಗೆ 1.28 ಕೋಟಿ ರೂ. ಉಳಿತಾಯವಾಗಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
    ನಗರಸಭೆಯ ಕಚೇರಿ ಆಡಳಿತವನ್ನು ಪಾರದರ್ಶಕವಾಗಿಸಲು ಹಾಗೂ ತ್ವರಿತ ಸೇವೆ ಒದಗಿಸಲು ಇ-ಆಫೀಸ್ ತಂತ್ರಾಂಶದ ಮೂಲಕ ನಾಗರೀಕಸ್ನೇಹಿ ಆಡಳಿತ ನಡೆಸಲಾಗುತ್ತಿದೆ. ಸರ್ವರಿಗೂ ಸೂರು ಪರಿಕಲ್ಪನೆಯಡಿಯಲ್ಲಿ ವಸತಿರಹಿತ ನಿರಾಶ್ರಿತರಿಗೆ ಆಶ್ರಯ ತಂಗುದಾಣ ಪ್ರಾರಂಭಿಸಿದ್ದು, ಗುಣಮಟ್ಟದ ಜೀವನ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದರು.
    ಸ್ತ್ರೀ ಸಶಕ್ತಿಕರಣಗೊಳಿಸುವ ಉದ್ದೇಶದಿಂದ ರಚಿಸಲಾದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಮರ್ಥ್ಯ ಅಭಿವೃದ್ಧಿಗೆ ತರಬೇತಿ ನೀಡಲಾಗುತ್ತಿದೆ. ಸರ್ಕಾರದಿಂದ ಪ್ರೋತ್ಸಾಹಧನ ನೀಡಿ ಸಬಲೀಕರಣಗೊಳಿಸಲಾಗುತ್ತಿದೆ. ನಗರದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಉತ್ತೇಜಿಸಲು ನಗರಸಭೆಯಿಂದ ಕ್ರೀಡಾ ಪ್ರೋತ್ಸಾಹಧನ ನೀಡಲಾಗುತ್ತಿದೆ. ಕಚೇರಿ ದಾಖಲೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ದಾಖಲಾತಿ ಕೊಠಡಿ ವಿಸ್ತರಿಸಿ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
    2022-23ನೇ ಸಾಲಿನಲ್ಲಿ ಬಿ.ಎಚ್.ರಸ್ತೆಯಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಉಪಯೋಗವಾಗುತ್ತಿದೆ. ಪೌರಕಾರ್ಮಿಕರಿಗೆ ಜಿ ಪ್ಲಸ್ ಮಾದರಿಯ ಗುಂಪು ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಹಂಚಿಕೆ ಕಾರ್ಯ ಪ್ರಗತಿಯಲ್ಲಿದೆ. ತರೀಕೆರೆ ರಸ್ತೆ, ಓವರ್‌ಸಿಸ್ ಬ್ಯಾಂಕ್ ಕನ್ಸರ್‌ವೆನ್ಸಿ ರಸ್ತೆ ಹಾಗೂ ಬಿಇಒ ಕಚೇರಿ ರಸ್ತೆಯಲ್ಲಿ 137 ಲಕ್ಷ ರೂ. ವೆಚ್ಚದ ಸೈಕಲ್‌ಪಾತ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 315 ಲಕ್ಷ ರೂ. ಅನುದಾನದಲ್ಲಿ ಬಿ.ಎಚ್.ರಸ್ತೆ ಪದ್ಮ ನಿಲಯದಿಂದ ಸ್ವಸ್ತಿಕ್ ಹಾರ್ಡ್‌ವೇರ್‌ವರೆಗೂ ಫುಟ್‌ಪಾತ್ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಅಂಬೇಡ್ಕರ್ ವೃತ್ತದಲ್ಲಿ 12 ಅಡಿ ಕಂಚಿನ ಪ್ರತಿಮೆ ನಿರ್ಮಿಸುವ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ನಗರದಲ್ಲಿ ಫುಡ್‌ಕೋರ್ಟ್ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
    ಕೆರೆ ಹಾಗೂ ಉದ್ಯಾನ ಅಭಿವೃದ್ದಿಗಾಗಿ 4 ಕೋಟಿ ರೂ., ಕೆಎಂಆರ್‌ಪಿ ಯೋಜನೆಯಡಿ ಒಳಚರಂಡಿ ಕಾಮಗಾರಿಗಾಗಿ 190 ಕೋಟಿ ರೂ. ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರಸಭೆ ವ್ಯಾಪ್ತಿಯ ಮುಖ್ಯವೃತ್ತಗಳಾದ ಬೊಮ್ಮನಕಟ್ಟೆ ವೃತ್ತ, ರಂಗಪ್ಪ ವೃತ್ತ, ಶಿವಾಜಿ ವೃತ್ತ, ಹೊಳೆಹೊನ್ನೂರು ರಸ್ತೆಯ ವೃತ್ತ, ಗಾಂಧಿ ಸರ್ಕಲ್, ಮಾಧವಾಚಾರ್ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ವೃತ್ತ, ಜಯಶ್ರೀ ವೃತ್ತಗಳನ್ನು ಅಭಿವೃದ್ಧಿಪಡಿಸಲಾಗುವುದು. ಭದ್ರಾ ನದಿಯ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
    ಉಪಾಧ್ಯಕ್ಷೆ ಸರ್ವಮಂಗಳಾ ಬೈರಪ್ಪ, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ನಗರಸಭೆ ಸದಸ್ಯರು ಇದ್ದರು.

    2164 ಲಕ್ಷ ರೂ. ಮೀಸಲು
    ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆ-4 ಅಡಿಯಲ್ಲಿ 3,400 ಲಕ್ಷ ರೂ. ಅನುದಾನಕ್ಕೆ ಕ್ರಿಯಾಯೋಜನೆ ಮಂಜೂರಾಗಿದೆ. ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ 163.88 ಲಕ್ಷ ರೂ., ಪರಿಶಿಷ್ಟ ಜಾತಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ 466.48 ಲಕ್ಷ ರೂ., ಪರಿಶಿಷ್ಟ ಪಂಗಡದವರಿಗಾಗಿ 189 ಲಕ್ಷ ರೂ., ಬಡ ವರ್ಗದವರ ಕಲ್ಯಾಣ ಕಾರ್ಯಕ್ರಮಗಳಿಗೆ 246.50 ಲಕ್ಷ ರೂ., ದಿವ್ಯಾಂಗ ಕಲ್ಯಾಣ ಕಾರ್ಯಕ್ರಮಗಳಿಗೆ 170 ಲಕ್ಷ ರೂ., ರಸ್ತೆ ಚರಂಡಿ ಅಭಿವೃದ್ಧಿ ಕಾರ್ಯಗಳಿಗೆ 2148 ಲಕ್ಷ ರೂ., ನಗರದ ಪ್ರಮುಖ ರಸ್ತೆಗಳಿಗೆ ಡೆಕೋರೇಟಿವ್ ಕಾನಿಕಲ್ ಎಲೆಕ್ಟ್ರಿಕಲ್ ಪೋಲ್, ಬೀದಿದೀಪ ಅಳವಡಿಕೆಗೆ 447.90 ಲಕ್ಷ ರೂ. ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗೆ 2164.10 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದು ಲತಾ ಚಂದ್ರಶೇಖರ್ ವಿವರಿಸಿದರು.
    ಕೇಸ್ ಹಾಕ್ತೀವಿ!
    ನಗರಸಭೆ ಸದಸ್ಯರಾದ ಬಿ.ಟಿ.ನಾಗರಾಜ್, ಆನೇಕೊಪ್ಪ ಬಸವರಾಜ್, ಚೆನ್ನಪ್ಪ ಅವರು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಮೀಸಲಿರಿಸಿದ ಅನುದಾನಗಳನ್ನು ಇತರ ಯೋಜನೆಗಳಿಗೆ ಬಳಸಬಾರದು. ಪರಿಶಿಷ್ಟರ ಹಣ ದುರ್ಬಳಕೆಯಾದಲ್ಲಿ ಆಯುಕ್ತರು ಹಾಗೂ ಅಧ್ಯಕ್ಷರು ಸೇರಿದಂತೆ ಎಲ್ಲರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜನ್ನಾಪುರದ ನಂದಿನಿ ಬೇಕರಿ ಸರ್ಕಲ್ ನಗರಸಭೆ ಜಾಗವಾಗಿದ್ದು, ಈಗಿರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಗರಸಭೆ ಸದಸ್ಯ ಬಿ.ಕೆ.ಮೋಹನ್, ಚನ್ನಗಿರಿ ರಸ್ತೆಗೆ ಡಾ. ರಾಜ್‌ಕುಮಾರ್ ಹೆಸರಿಡಬೇಕೆಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts