More

    ಮತ್ತೆ ಬಂತು ಬೇಸಿಗೆ ಶಿಬಿರ

    • ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ
    • ಯಾವ ಕ್ಯಾಂಪ್ ಬೆಸ್ಟ್?
      ಅವಿನಾಶ್ ಜೈನಹಳ್ಳಿ ಮೈಸೂರು
      ಮಕ್ಕಳ ಪಾಲಿಗೆ ಬೇಸಿಗೆ ‘ರಜಾ’ ಪದಕ್ಕೆ ಪರ್ಯಾಯ ಅರ್ಥವೇ ‘ಮಜಾ’. ಆದರೆ, ಮಹಾಮಾರಿ ಕರೊನಾದಿಂದಾಗಿ ಕಳೆದ ಎರಡು ವರ್ಷದಿಂದ ಮಕ್ಕಳು ಈ ಪದದ ಅರ್ಧವನ್ನೇ ಕಳೆದುಕೊಂಡಿದ್ದರು.
      ಬೇಸಿಗೆ ರಜೆಯ ಸಂದರ್ಭದಲ್ಲಿ ನಡೆಸಲಾಗುವ, ಮಕ್ಕಳ ಪ್ರತಿಭೆ ಅರಳಿಸುವ ವಿಶೇಷ ಬೇಸಿಗೆ ಶಿಬಿರಗಳ ಮೇಲೆಯೂ ಕರೊನಾ ವೈರಸ್‌ನ ಕರಿಛಾಯೆ ಆವರಿಸಿತ್ತು.
      ಆದರೀಗ ಮಹಾಮಾರಿ ಕರೊನಾ ಪ್ರಭಾವ ಕಡಿಮೆಯಾಗಿದೆ. ಮತ್ತೊಂದೆಡೆ ಶೈಕ್ಷಣಿಕ ವರ್ಷ ಕೊನೆಗೊಳ್ಳುವುದರಿಂದ ಬೇಸಿಗೆ ಸಂದರ್ಭ ಮಕ್ಕಳಿಗೆ ರಜೆ ನೀಡಲಾಗುತ್ತದೆ. ಮಕ್ಕಳ ಈ ರಜಾ ಅವಧಿಯಲ್ಲಿ ಪಠ್ಯೇತರ ಚಟುವಟಿಕೆಗಳ ಮೂಲಕ ಅವರ ಪ್ರತಿಭೆ ಅರಳಿಸುವುದು ಬೇಸಿಗೆ ಶಿಬಿರಗಳ ಉದ್ದೇಶವಾಗಿದೆ. ಅದಕ್ಕಾಗಿಯೇ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹಲವು ಸಂಘ ಸಂಸ್ಥೆಗಳು ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತವೆ.
      ಈಗ ಮಕ್ಕಳಿಗೆ ರಜೆ ಬರುತ್ತಿದೆ. ಕ್ರೀಡೆ, ರಂಗಭೂಮಿ ಸೇರಿದಂತೆ ನಾನಾ ಬಗೆಯ ಬೇಸಿಗೆ ಶಿಬಿರಗಳು ನಗರದಲ್ಲಿ ಪ್ರಾರಂಭವಾಗುತ್ತಿವೆ. ಮಕ್ಕಳನ್ನು ಯಾವ ಕ್ಯಾಂಪ್‌ಗೆ ಸೇರಿಸಬೇಕೆಂದು ಚಿಂತಿಸುತ್ತಿರುವ ಪಾಲಕರಿಗೆ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಕೆಲ ಶಿಬಿರಗಳ ಮಾಹಿತಿ ನೀಡಿದೆ.

    ನಾನಾ ಕ್ರೀಡಾ ಶಿಬಿರಗಳು
    ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಈ ಬಾರಿ ಫುಟ್‌ಬಾಲ್, ಕ್ರಿಕೆಟ್, ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, ವಾಲಿಬಾಲ್, ಜಿಮ್ನಾಸ್ಟಿಕ್, ಹಾಕಿ, ಯೋಗ, ಕುಸ್ತಿ ಹಾಗೂ ಕಿಕ್‌ಬಾಕ್ಸಿಂಗ್ ತರಬೇತಿ ಆಯೋಜಿಸಿದೆ.
    ಈ ಶಿಬಿರ ಮಾರ್ಚ್ 30ರಿಂದ ಏಪ್ರಿಲ್ 30ರವರೆಗೆ ಬೆಳಗ್ಗೆ 6.30ರಿಂದ 9.30ರವರೆಗೆ ನಡೆಯಲಿದೆ. ಶಿಬಿರದ ಅರ್ಜಿಗಳನ್ನು ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗದಲ್ಲಿ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಮಾ.27 ಕಡೆಯ ದಿನವಾಗಿದೆ. ಅರ್ಜಿಯನ್ನು ಅರ್ಹ ವೈದ್ಯಕೀಯ ತಪಾಸಣಾ ದೃಢೀಕರಣ ಪತ್ರದೊಂದಿಗೆ ಸಲ್ಲಿಸಬೇಕಿದೆ. ಜಿಮ್ನಾಸ್ಟಿಕ್‌ಗೆ 8ರಿಂದ 15 ವರ್ಷದ ಮಕ್ಕಳು, ಬ್ಯಾಡ್ಮಿಂಟನ್‌ಗೆ 12ರಿಂದ 16 ವರ್ಷದ ಮಕ್ಕಳು ಹಾಗೂ ಇತರ ಕ್ರೀಡೆಗೆ 10ರಿಂದ 18 ವರ್ಷದ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗೆ ದೈಹಿಕ ಶಿಕ್ಷಣ ವಿಭಾಗದ ದೂ: 0821-2419288 ಸಂಪರ್ಕಿಸಬಹುದು.

    ಈಜು-ಮೋಜು
    ಎರಡು ವರ್ಷದ ಬಳಿಕ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಮೂರು ಅವಧಿಯಲ್ಲಿ ಈ ಬಾರಿ ಶಿಬಿರ ಆಯೋಜಿಸಲಾಗಿದ್ದು, ಒಟ್ಟು 640 ಮಕ್ಕಳಿಗೆ ಈಜು ಹೇಳಿಕೊಡಲು ತೀರ್ಮಾನಿಸಲಾಗಿದೆ.
    ಮಾರ್ಚ್ 28ರಿಂದ ಏಪ್ರಿಲ್ 17ರವರೆಗೆ ಪ್ರಾರಂಭವಾಗಲಿರುವ ಮೊದಲ ಅವಧಿಯಲ್ಲಿ ಬೆಳಗ್ಗೆ 9.30ರಿಂದ 10.30, 10.30ರಿಂದ 11.30 ಹಾಗೂ ಸಂಜೆ 5ರಿಂದ 6 ಗಂಟೆವರೆಗೆ ಪ್ರತ್ಯೇಕ ಮೂರು ಬ್ಯಾಚ್‌ನಲ್ಲಿ ಈಜು ಹೇಳಿಕೊಡಲಾಗುತ್ತದೆ. ನಂತರ ಏಪ್ರಿಲ್ 19 ರಿಂದ ಮೇ 7 ಹಾಗೂ ಮೇ 9ರಿಂದ ಮೇ 30ರ ಅವಧಿಯಲ್ಲೂ ಅದೇ ಸಮಯಕ್ಕೆ ಇತರ ಬ್ಯಾಚ್ ನಡೆಯಲಿದೆ. ಮಾಹಿತಿಗೆ ದೈಹಿಕ ಶಿಕ್ಷಣ ವಿಭಾಗದ ದೂ.ಸಂ: 0821-2419288 ಸಂಪರ್ಕಿಸಬಹುದು ಎಂದು ಈಜು ತರಬೇತುದಾರ ದೀಪಕ್ ಸುಬ್ಬರಾಜೇ ಅರಸ್ ತಿಳಿಸಿದ್ದಾರೆ.

    ರಜಾ-ಮಜಾ
    ನಟ ಮಂಡ್ಯ ರಮೇಶ್ ಅವರ ನಟನ ರಂಗ ಶಾಲೆ ವತಿಯಿಂದ ನಡೆಯುವ ‘ರಜಾ-ಮಜಾ’ ಬೇಸಿಗೆ ಶಿಬಿರವು ಏ.14ರಿಂದ ಆರಂಭವಾಗಲಿದೆ.
    ನಾಟಕ ಕಲೆಯನ್ನು ಕೇಂದ್ರವಾಗಿರಿಸಿಕೊಂಡು ಕರ್ನಾಟಕದ ಜಾನಪದ ಕಲೆಗಳ ನೃತ್ಯ, ಹಾಡುಗಾರಿಕೆ ಮತ್ತು ಆಧುನಿಕ ನಾಟಕಗಳ ಕುರಿತು ರಂಗಭೂಮಿ ಸಾಧಕರು ಮಕ್ಕಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನೀಡಲಿದ್ದಾರೆ. ಶಿಬಿರವು ಏ.14ರಿಂದ ಮೇ 8ರವರೆಗೆ ನಗರದ ಜಯನಗರದ ಶ್ರೀವಿವೇಕ ಬಾಲೋದ್ಯಾನ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆಯಲಿದೆ.
    ಏಪ್ರಿಲ್ 3ರಂದು ಬೆ.10ರಿಂದ ಮಧ್ಯಾಹ್ನ 1.30ರವರೆಗೆ ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ ಶಿಬಿರದ ಅರ್ಜಿಯನ್ನು ವಿತರಿಸಿ ಅಂದೇ ಅರ್ಜಿ ಪಡೆಯಲಾಗುತ್ತದೆ. ಮೊದಲು ಬಂದ 250 ಮಕ್ಕಳಿಗೆ ಮಾತ್ರ ಪ್ರವೇಶ ಸಿಗಲಿದೆ. 8ರಿಂದ 14 ವರ್ಷದವರೆಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು. ಮಾಹಿತಿಗೆ ಮೊ: 9480468327 ಸಂಪರ್ಕಿಸಬಹುದು.

    ರಾಮಕೃಷ್ಣ ಆಶ್ರಮ ವಸಂತ ವಿಹಾರ
    ಬೇಸಿಗೆಯಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು ಸುಮ್ಮನೆ ಕಾಲ ಕಳೆಯುವ ಬದಲು ಅವರ ವ್ಯಕ್ತಿತ್ವ ವೃದ್ಧಿಸುವ ವಿಶಿಷ್ಟ ಶಿಬಿರವಾದ ವಸಂತ ವಿಹಾರವನ್ನು ನಗರದ ರಾಮಕೃಷ್ಣ ಆಶ್ರಮದಲ್ಲಿ ಏಪ್ರಿಲ್ 15ರಿಂದ 22ರವರೆಗೆ ಆಯೋಜಿಸಲಾಗಿದೆ.
    8, 9, 10ನೇ ತರಗತಿಯಲ್ಲಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಬೆ.7.45ರಿಂದ ಮ.12 .30ವರೆಗೆ ಶಿಬಿರದಲ್ಲಿ ನಿತ್ಯ ವ್ಯಕ್ತಿತ್ವ ನಿರ್ಮಾಣ, ಯೋಗ, ಮೌಲ್ಯಾಧಾರಿತ ಕಥೆಗಳು, ಚಿತ್ರಕಲೆ, ಸೃಜನಾತ್ಮಕ ಕಲಿಕೆ. ಸಂವಹನ ಕೌಶಲ, ದಿವ್ಯತ್ರಯರ ದಿವ್ಯ ಸಂದೇಶ ಇರಲಿದೆ. ಮಾಹಿತಿಗೆ ದೂ: 0821-2417444 ಸಂಪರ್ಕಿಸಬಹುದು.

    ಪ್ರಾಣಿಗಳ ಅಧ್ಯಯನ
    ನಗರದ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಪ್ರಾಣಿಗಳ ಕುರಿತು ಮಾಹಿತಿ ನೀಡುವ ಶಿಬಿರ ಆರಂಭವಾಗಲಿದೆ. ಶಿಬಿರದಲ್ಲಿ ತಜ್ಞರ ಜತೆ ಸಂವಾದ, ಕಾಡುಪ್ರಾಣಿಗಳ ರಕ್ಷಣೆ ಸೇರಿದಂತೆ ಇತರ ವಿಷಯಗಳನ್ನು ಮಕ್ಕಳಿಗೆ ತಿಳಿಸಲಾಗುತ್ತದೆ. ಮಾಹಿತಿಗೆ ದೂ: 0821-2440752 ಸಂಪರ್ಕಿಸಬಹುದು.ಬಾಲಂಗೋಚಿ

    ಅದಮ್ಯ ರಂಗಶಾಲೆ ವತಿಯಿಂದ ಬಾಲಂಗೋಚಿ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಶಿಬಿರವು ಬೃಂದಾವನ ಬಡಾವಣೆಯ ಬೃಂದಾವನ ಪ್ರೌಢಶಾಲೆಯಲ್ಲಿ ಏಪ್ರಿಲ್ 13ರಿಂದ ಮೇ 8ರವರೆಗೆ ನಡೆಯಲಿದೆ. ಶಿಬಿರದಲ್ಲಿ ಬೆಳಗ್ಗೆ 10ರಿಂದ ಸಂ.4.30ರವರೆಗೆ ನಾಟಕ, ರಂಗಗೀತೆ, ಭಾವಗೀತೆ, ಕಂಸಾಳೆ, ದೊಣ್ಣೆವರಸೆ, ಹುಲಿ ಕುಣಿತ, ನೃತ್ಯ, ಮೈಮ್, ಕಂಗೀಲು ನೃತ್ಯ, ಪೇಪರ್ ಕ್ರಾಫ್ಟ್, ಚಿತ್ರಕಲೆ, ದೇಸಿ ಆಟಗಳು ಸೇರಿದಂತೆ ನಾನಾ ಕಲೆ ಹೇಳಿಕೊಡಲಾಗುತ್ತದೆ. ಆಸಕ್ತರು ಮೊ:7619285513 ಸಂಪರ್ಕಿಸಬಹುದು.

    ಕರಾಟೆ ಶಿಬಿರ

    ದ್ರೋಣಾಚಾರ್ಯ ಮಾರ್ಷಲ್ ಆರ್ಟ್ಸ್ ಅಕಾಡೆಮಿಯಿಂದ ಗೌರಿಶಂಕರ ನಗರದ ಗೌರಿಶಂಕರ ಶಾಲೆಯಲ್ಲಿ ಏಪ್ರಿಲ್ ಎರಡನೇ ವಾರದಲ್ಲಿ ಮಕ್ಕಳಿಗೆ ಕರಾಟೆ ಬೇಸಿಗೆ ಶಿಬಿರ ನಡೆಯಲಿದೆ. ವಯಸ್ಸು ಅಡ್ಡಿ ಇಲ್ಲದೆ ಎಲ್ಲ ವಯಸ್ಸಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು. ಶಿಬಿರವು ಬೆ.6.30ರಿಂದ 8 ಗಂಟೆವರೆಗೆ ನಡೆಯಲಿದೆ. ಕರಾಟೆಗೆ ಸಂಬಂಧಿಸಿದ ಕಲೆಗಳನ್ನು ಶಿಬಿರದಲ್ಲಿ ಹೇಳಿಕೊಡಲಾಗುತ್ತದೆ. ಮಾಹಿತಿಗೆ ಮೊ: 9480911311 ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts