More

    ಸಂಕ್ರಾಂತಿಗೆ 2 ದಿನ ಮುನ್ನವೇ ಖರೀದಿ ಭರಾಟೆ

    ಬೆಂಗಳೂರು: ಗ್ರಾಮೀಣ ಸೊಗಡಿನ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ದೇವಾಲಯಗಳು ಒಳಗೊಂಡಂತೆ ನಗರ ಸಜ್ಜಾಗುತ್ತಿದೆ. ಹಳ್ಳಿಗಳಲ್ಲಿ ಹೊಲದಲ್ಲಿ ಬೆಳೆದ ಬೆಳೆಯನ್ನು ಒಂದೆಡೆ ರಾಶಿ ಹಾಕಿ ಪೂಜಿಸುವುದು. ವರ್ಷವಿಡೀ ರೈತನ ಬೆನ್ನೆಲುಬಾಗಿ ದುಡಿಯುವ ಎತ್ತುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸುವುದು ಹಬ್ಬದ ವೈಶಿಷ್ಟ್ಯ. ಬೆಂಗಳೂರಿನಲ್ಲೂ ವಿಶೇಷ ಆಚರಣೆಗಳು ನಡೆಯಲಿವೆ.

    ಗವಿಗಂಗಾಧರೇಶ್ವರ ದೇವಾಲಯ ಸೇರಿ ನಗರದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಅಂದು ಸೂರ್ಯದೇವನು ದಕ್ಷಿಣಾಯಣ ಪಥ ಮುಗಿಸಿ ಉತ್ತರಾಯಣಕ್ಕೆ ಸಾಗುವ ವೇಳೆ ರಶ್ಮಿ ಗವಿಗಂಗಾಧರೇಶ್ವರ ದೇಗುಲದಲ್ಲಿನ ಶಿವನ ವಿಗ್ರಹ ಸ್ಪರ್ಶಿಸಲಿದೆ. ಈ ಸಂದರ್ಭದಲ್ಲಿ ದೇವರಿಗೆ ಕ್ಷೀರಾಭಿಷೇಕ ಹಾಗೂ ವಿಶೇಷ ಪೂಜೆ ಮಾಡಲಾಗುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಸಕಲ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಸಾಗಿದೆ.

    ನಗರದ ಮಾರುಕಟ್ಟೆಗಳಲ್ಲಿ ಎತ್ತ ನೋಡಿದರೂ ಕಬ್ಬು, ಗೆಣಸು, ಅವರೆಕಾಯಿ, ಕಡಲೆಕಾಯಿಗಳ ರಾಶಿ ಕಾಣಿಸುತ್ತಿದೆ. ಜತೆಗೆ ಹಣ್ಣು- ಹೂಗಳ ಮಾರಾಟ ಬಿರುಸಾಗಿ ಸಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಆಗುತ್ತದೆ ಎಂಬ ಕಾರಣಕ್ಕೆ ಗ್ರಾಹಕರು ತಮ್ಮ ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಹಬ್ಬಕ್ಕೂ ಎರಡು ದಿನ ಮುಂಚಿತವಾಗಿಯೇ (ಶುಕ್ರವಾರ) ಖರೀದಿಯಲ್ಲಿ ತೊಡಗಿದ್ದರು.

    ಕೃ.ರಾ. ಮಾರುಕಟ್ಟೆ, ಮಡಿವಾಳ, ಯಶವಂತಪುರ, ದಾಸರಹಳ್ಳಿ, ಗಾಂಧಿಬಜಾರ್, ಮಲ್ಲೇಶ್ವರ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲದೆ ಪ್ರತಿ ಬಡಾವಣೆಯ ರಸ್ತೆಗಳಲ್ಲಿ ವಾಹನ ಹಾಗೂ ತಳ್ಳುಗಾಡಿಗಳ ಮೂಲಕ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಮಾರಾಟ ಭರದಿಂದ ಸಾಗಿದೆ.

    ಇಳಿದ ಕಬ್ಬಿನ ಇಳುವರಿ: ಈ ಬಾರಿ ಮಳೆ ಕೊರತೆಯಿಂದಾಗಿ ಕಬ್ಬಿನ ಇಳುವರಿ ಕಡಿಮೆಯಾಗಿದ್ದು, ಕೆ.ಆರ್. ಮಾರುಕಟ್ಟೆಗೆ ಸಾಮಾನ್ಯ ದಿನಗಳಲ್ಲಿ 4-5 ಲಾರಿ ಲೋಡ್ ಕಬ್ಬು ಬಂದರೆ, ಸಂಕ್ರಾಂತಿಗೆ 10 ಲಾರಿ ಲೋಡ್‌ಗೂ ಅಧಿಕ ಕಬ್ಬು ಆಗಮಿಸುತ್ತಿತ್ತು. ಆದರೆ ರಾಜ್ಯದಲ್ಲಿ ಈ ಬಾರಿ ಕಬ್ಬಿನ ಇಳುವರಿ ಶೇ. 30 ಕುಸಿದಿದ್ದು, ಅಲ್ಪ ಪ್ರಮಾಣದಲ್ಲಿ ಕಬ್ಬು ಆಗಮಿಸಿದೆ. ಹೀಗಾಗಿ ಒಂದು ಜೋಡಿ ಕಬ್ಬಿಗೆ 80ರಿಂದ 120 ರೂ.ವರೆಗೆ ಮಾರಾಟವಾಗುತ್ತಿದೆ. ಉಳಿದಂತೆ ಕಡಲೆಕಾಯಿ ಕೆ.ಜಿ.ಗೆ 80-100 ರೂ., ಅವರೆಕಾಯಿ ಕೆ.ಜಿ.ಗೆ 50-60 ರೂ., ಸಿಹಿ ಗೆಣಸು 30-40 ರೂ.ಗೆ ಮಾರಾಟವಾಗುತ್ತಿವೆ.

    ಬಾಕ್ಸ್:
    ಕೃ.ರಾ. ಮಾರುಕಟ್ಟೆಯಲ್ಲಿನ ದರ (ಕೆ.ಜಿ.ಗೆ)
    ಮಲ್ಲಿಗೆ- 1,000 ರೂ.
    ಕನಕಾಂಬರ- 500 ರೂ.
    ಕಾಕಡ- 300 ರೂ.
    ಸುಗಂಧರಾಜ- 80 ರೂ.
    ಗುಲಾಬಿ-160 ರೂ.
    ಸೇವಂತಿಗೆ 80-120 ರೂ.
    ಚೆಂಡು 20 ರೂ.
    ಸೇವಂತಿಗೆ ಒಂದು ಮಾರಿಗೆ 50-60 ರೂ.
    ಎಳ್ಳು-ಬೆಲ್ಲ -ಇತ್ಯಾದಿ
    ಸಿದ್ಧ ಎಳ್ಳು-ಬೆಲ್ಲ ಕೆ.ಜಿ.ಗೆ 250- 300 ರೂ.
    ಸಕ್ಕರೆ ಅಚ್ಚು 250-300 ರೂ.
    ಬಿಳಿ ಕಬ್ಬು ಜೋಡಿಗೆ 80- 100 ರೂ.
    ಕರಿಕಬ್ಬು ಜೋಡಿಗೆ 100- 150 ರೂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts