More

    ಎಲ್ಲ ಕ್ಷೇತ್ರಗಳು ಡಿಜಿಟಲ್ಗೆ ಪರಿವರ್ತನೆ

    ಬಳ್ಳಾರಿ: ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಹುಶಿಸ್ತಿನ ಅಧ್ಯಯನ ಮತ್ತು ಸಂಶೋಧನಾ ಮಾರ್ಗಗಳಿಂದ ಪ್ರಯತ್ನಪಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಇದೇ ಮಾದರಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಹೇಳಿದರು.

    ನಗರ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಆರಂಭವಾಗಿರುವ ಎಂಸಿಎ ಮತ್ತು ಪಿಜಿ ಡಿಪ್ಲೊಮಾ ಇನ್ ಯೋಗ ವಿಭಾಗಗಳಿಗೆ ಜೀವ ವಿಜ್ಞಾನ ಕಟ್ಟಡ ಸಭಾಂಗಣದಲ್ಲಿ ಚಾಲನೆ ನೀಡಿ ಗುರುವಾರ ಮಾತನಾಡಿದರು.

    ಬದಲಾಗಿರುವ ಕಾಲಘಟ್ಟದಲ್ಲಿ ಎಲ್ಲ ಕ್ಷೇತ್ರಗಳು ತಾಂತ್ರಿಕ ಮತ್ತು ಡಿಜಿಟಲ್ ಪರಿವರ್ತನೆ ಹೊಂದುತ್ತಿವೆ. ಸದ್ಯ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜನ್ಸ್) ವಿಶ್ವದಾದ್ಯಂತ ಕ್ರಾಂತಿ ಎಬ್ಬಿಸಿದ್ದು, ಹಲವಾರು ಕ್ಷೇತ್ರಗಳಲ್ಲಿ ಮಾನವನ ಉದ್ಯೋಗಕ್ಕೆ ಕುತ್ತಾಗಿ ಪರಿಣಮಿಸಿವೆ. ಇದಕ್ಕೆ ಪರ್ಯಾಯವಾಗಿ ವಿವಿಧ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಎಂದರು.

    ವಿದ್ಯಾರ್ಥಿ ದೆಸೆಯಲ್ಲಿ ಕಲಿಕೆ ಕುರಿತು ಪ್ರೇರಣಾತ್ಮಕವಾಗಿ ಮತ್ತು ಸ್ವ-ನಿಯಂತ್ರಣ ಮೈಗೂಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು.
    ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲಯುತ ಕಲಿಕೆಗೆ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಗತಿ ಸಾಧಿಸಿ ದೇಶಕ್ಕೆ ಹೆಮ್ಮೆಯಾಗಬೇಕು ಎಂದು ಕಿವಿಮಾತು ಹೇಳಿದರು.

    ಬಳ್ಳಾರಿಯ ಸಾಧನಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಸಂಸ್ಥಾಪಕಿ ಸಿ.ರೂಪಾ ಮುರಳೀಧರ್ ಮಾತನಾಡಿ, ಯೋಗವು ಒಂದು ವಿಜ್ಞಾನವಾಗಿದ್ದು, ಭೌತಿಕ, ಮಾನಸಿಕ, ಸಾಮಾಜಿಕ ತೊಳಲಾಟಗಳಿಂದ ಹೊರಬರಲು ಸಹಕಾರಿಯಾಗಿದೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಪಿ ಅಲಗೂರ ಮಾತನಾಡಿ, ಕಲ್ಯಾಣ-ಕರ್ನಾಟಕ ಭಾಗದ ವಿಶ್ವವಿದ್ಯಾಲಯಗಳಲ್ಲಿ ಎಂಸಿಎ ಕೋರ್ಸ್ ಪ್ರಥಮವಾಗಿ ಆರಂಭಿಸಿರುವುದು ನಮ್ಮ ವಿಶ್ವವಿದ್ಯಾಲಯದಲ್ಲಿಯೇ ಎಂದು ತಿಳಿಸಿದರು.

    ಪ್ರಥಮ ಪ್ರಯತ್ನದಲ್ಲಿ 50 ವಿದ್ಯಾರ್ಥಿಗಳು ಆಗಮಿಸಿರುವುದು ಈ ಭಾಗದಲ್ಲಿ ಕೋರ್ಸ್‌ಗೆ ಇರುವ ಬೇಡಿಕೆಗೆ ಕೈಗನ್ನಡಿಯಾಗಿದೆ. ವಿಶ್ವವಿದ್ಯಾಲಯ ಹಾಗೂ ಸಾಧನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಸಹಭಾಗಿತ್ವದಲ್ಲಿ ಬಳ್ಳಾರಿ ನಗರದಲ್ಲಿ ಯೋಗ ಕ್ಯಾಂಪಸ್ ತೆರೆಯಲು ಸಿದ್ಧವಿರುವುದಾಗಿ ಮಾಹಿತಿ ನೀಡಿದರು.

    ಸಿಂಡಿಕೇಟ್ ಸದಸ್ಯ ಜಯಪ್ರಕಾಶ್ ಗೌಡ, ಕುಲಸಚಿವ ಪ್ರೊ.ಎಸ್.ಸಿ.ಪಾಟೀಲ್, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಹನುಮೇಶ್ ವೈದ್ಯ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸಾಹೇಬ್ ಅಲಿ, ಪೂರ್ಣಿಮಾ, ಡಾ.ಶಶಿಧರ್, ಸುದರ್ಶನ ಪಾಂಡುರಂಗ, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಸಂಯೋಜಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts