More

    ಕಲಾ ಪ್ರದರ್ಶನಗಳ ಕಣ್ತುಂಬಿಕೊಂಡ ಜನ

    ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಎರಡನೇ ಮತ್ತು ಕೊನೆ ದಿನದ ‘ಬಳ್ಳಾರಿ ಉತ್ಸವ’ದಲ್ಲಿ ಭಾನುವಾರ ವಿವಿಧ ಸ್ಪರ್ಧೆಗಳು ಗಮನ ಸೆಳೆದವು. ಕುಸ್ತಿ ಪಂದ್ಯಾವಳಿ, ಶ್ವಾನ ಪ್ರದರ್ಶನ, ಆಹಾರ ಮೇಳ, ದೇಹದಾರ್ಢ್ಯ ಸ್ಪರ್ಧೆ.. ಹೀಗೆ ಅನೇಕ ಕಾರ್ಯಕ್ರಮಗಳು ಜನರ ಆಕರ್ಷಣೆಯಾದವು.

    ವಿಮ್ಸ್ ಆವರಣದಲ್ಲಿ ಗ್ರಾಮೀಣ ಕ್ರೀಡೆ-ಕುಸ್ತಿ ಪಂದ್ಯಾವಳಿಯಲ್ಲಿ ಜಗಜಟ್ಟಿಗಳ ಸೆಣಸಾಟ ಗಮನ ಸೆಳೆಯಿತು. ಕುಸ್ತಿಪಟುಗಳು ತಮಗಾಗಿ ನಿರ್ಮಾಣವಾಗಿದ್ದ ಮಣ್ಣಿನ ಅಂಗಳ ಪ್ರವೇಶಿಸುತ್ತಿದ್ದಂತೆ ಎಲ್ಲಿಲ್ಲದ ಉತ್ಸಾಹ. ಒಬ್ಬರಿಗೊಬ್ಬರು ಕೈ-ಕೈ ಕುಲುಕುತ್ತ, ತೀರ್ಪುಗಾರರ ಸೂಚನೆಗಾಗಿ ಕಾಯುತ್ತಿದ್ದರು. ಕುಸ್ತಿ ಪ್ರಾರಂಭವಾಗುತ್ತಿದ್ದಂತೆ ಗರಡಿ ಮನೆಯ ಪಟ್ಟುಗಳು ಒಂದೊಂದಾಗಿ ಹೊರಬಂದವು. ಸ್ಪರ್ಧೆಯಲ್ಲಿ ಒಬ್ಬರನ್ನು ನೆಲಕ್ಕೆ ಕೆಡವುತ್ತಿದ್ದಂತೆ ಎದುರಾಳಿ ತೋಳು ತಟ್ಟಿಕೊಂಡರೆ, ಅದೇ ರೀತಿ ಮತ್ತೊಬ್ಬರು ಭುಜ ತಟ್ಟಿಕೊಳ್ಳುತ್ತಿದ್ದರು. ಕೈ-ಕೈ ಮಿಲಾಯಿಸಿ, ಪಟ್ಟು ಹಾಕಲು ಮುಂದಾದರು. ನೆರೆದಿದ್ದ ಕುಸ್ತಿ ಪ್ರೇಮಿಗಳು ರೋಮಾಂಚನಗೊಂಡು ಶಿಳ್ಳೆ-ಕೇಕೆ ಹಾಕಿದರು.

    ಕುಸ್ತಿ ಪಂದ್ಯಾವಳಿಗೆ ವಿವಿಧ ಜಿಲ್ಲೆಗಳಿಂದ ಒಟ್ಟು 56 ಪುರುಷ ಹಾಗೂ ಮಹಿಳಾ ಕುಸ್ತಿಪಟುಗಳು ಪಾಲ್ಗೊಂಡಿದ್ದರು. 57 ಕೆಜಿ ವಿಭಾಗ ಪುರುಷ ಕುಸ್ತಿ ಪಂದ್ಯಾವಳಿಯಲ್ಲಿ ಬೆಂಗಳೂರಿನ ರಾಜ್ಯ ಪೊಲೀಸ್ ಇಲಾಖೆ ಕ್ರೀಡಾಪಟು ಪ್ರಶಾಂತ್ ಗೌಡ ಪ್ರಥಮ ಸ್ಥಾನ ಪಡೆಯುವ ಮೂಲಕ ‘ಬಳ್ಳಾರಿ ಕಿಶೋರ’ ಪ್ರಶಸ್ತಿ ತನ್ನದಾಗಿಸಿಕೊಂಡರು. 61 ಕೆಜಿ ವಿಭಾಗದಲ್ಲಿ ಹರಪನಹಳ್ಳಿಯ ಜಮೀರ್ ಹಾಗೂ 65 ಕೆಜಿ ವಿಭಾಗದಲ್ಲಿ ಧಾರವಾಡದ ಮಲ್ಲಿಕಾರ್ಜುನ ‘ಬಳ್ಳಾರಿ ಕೇಸರಿ’ ಪ್ರಶಸ್ತಿಗೆ ಭಾಜನರಾದರು. 70 ಕೆಜಿ ವಿಭಾಗದಲ್ಲಿ ಧಾರವಾಡದ ಶಿವಾನಂದ್ ಬಿಂಗಿ ಹಾಗೂ 70 ಕೆ.ಜಿ ಮೇಲ್ಪಟ್ಟ ವಿಭಾಗದಡಿ ಧಾರವಾಡ ರಿಯಾಜ್‌ಮುಲ್ಲಾ ಜಯಸಾಧಿಸುವ ಮೂಲಕ ‘ಬಳ್ಳಾರಿ ಕಂಠೀರವ’ ಪ್ರಶಸ್ತಿ ಸ್ವೀಕರಿಸಿದರು. ಮಹಿಳಾ ವಿಭಾಗದ 50 ಕೆಜಿ ವಿಭಾಗದಲ್ಲಿ ಬಸೀರಾ ವಾಕಾರ ಅವರು ‘ಬಳ್ಳಾರಿ ಕಿಶೋರಿ’ ಪ್ರಶಸ್ತಿ, 55 ಕೆಜಿ ವಿಭಾಗದಲ್ಲಿ ಗದಗಿನ ಅಂತಾರಾಷ್ಟ್ರೀಯ ಕುಸ್ತಿಪಟು, ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಪ್ರೇಮಾ ಹುಚ್ಚಣ್ಣನವರ್ ‘ಬಳ್ಳಾರಿ ಕುಮಾರಿ’ ಪ್ರಶಸ್ತಿ ಮುಡಿಗೇರಿಸಿಕೊಂಡರು. 60 ಕೆ.ಜಿ ವಿಭಾಗದಲ್ಲಿ ಕೊಪ್ಪಳದ ವೆಂಕಟಾಪುರ ಗ್ರಾಮದ ಶಹೀದಾ ಬೇಗಂ ಪ್ರಥಮ ಸ್ಥಾನ ಪಡೆದು ‘ಬಳ್ಳಾರಿ ಕೇಸರಿ’ ಪ್ರಶಸ್ತಿ ಪಡೆದರು.

    ಹೈದರ್ ನೋಡಲು ಅಚ್ಚರಿಗೊಂಡರು..! ಉತ್ಸವದ ಅಂಗವಾಗಿ ಬೆಂಗಳೂರಿನ ಉದ್ಯಮಿ ಸತೀತ್ ಅವರ ರಷ್ಯನ್ ಮೂಲದ, 110 ಕೆಜಿ ತೂಕದ ಕಕೇಶಿಯನ್ ಶಫರ್ಡ್ ತಳಿಯ ಶ್ವಾನ ‘ಹೈದರ್’ ನೋಡಲು ಜನರು ಮುಗಿಬಿದ್ದ ಪ್ರಸಂಗ ಕಂಡುಬಂದಿತು. ಮಾಲೀಕರೊಂದಿಗೆ ಹವಾನಿಯಂತ್ರಿತ ಐಷಾರಾಮಿ ಕಾರಿನಲ್ಲಿ ಬಂದ ಹೈದರ್‌ನನ್ನು ನೋಡಲು ನಗರದ ಜನರು ಜಮಾಯಿಸಿದ್ದರು. ಕಾರಿನ ಕಿಟಕಿ ಮೂಲಕ ಹೈದರ್‌ನನ್ನು ನೋಡಿ ಜನರು ಸೋಜಿಗಕ್ಕೆ ಒಳಗಾದರು. ಹೈದರ್ ತಲೆಮುಟ್ಟಿ ಸವರಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು. ಮುಧೋಳ ಹೌಂಡ್, ಗೋಲ್ಡನ್ ರೆಡ್ ರಿವರ್, ಸೈಬೇರಿಯನ್ ಹಸ್ಕಿ, ಹಲಾಸ್ಕ್ ಪೊಮೋರಿಯನ್, ಸೈಂಟ್ ವರ್ನಾಡೋ, ಗ್ರೇಟ್‌ಫೆಲ್, ಸೇನ್ ಪಾರ್ಲರ್, ಗೋಲ್ಡನ್ ರಿಟ್ರೀವರ್, ಡ್ಯಾಶ್‌ಹೌಂಡ್, ಗ್ರೇಟ್‌ಡೇನ್, ಡಾಬರ್‌ಮನ್, ಬೀಗಲ್, ಜರ್ಮನ್ ಶಫರ್ಡ್, ರ‌್ಯಾಟ್ ವಿಲ್ಲರ್, ಅಮೆರಿಕನ್ ಬುಲ್ಲಿ ಡಾಗ್, ಲ್ಯಾಬ್ರಡಾರ್ ರಿಟ್ರೀವರ್, ಪಗ್, ಇಟಾಲಿಯನ್ ಮ್ಯಾಸಕಾಟ್ ಸೇರಿ ಅನೇಕ ತಳಿಗಳ ಶ್ವಾನಗಳು ನೋಡುಗರ ಮನಸೂರೆಗೊಳಿಸಿದವು.

    ವಿಜಯಪುರದ ಶೇಖಪ್ಪ ಬಳ್ಳಾರಿ ಭೀಮ: ವಿಮ್ಸ್ ಮೈದಾನದಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಶೇಖಪ್ಪ 160 ಕೆಜಿ ಗುಂಡು ಕಲ್ಲು ಎತ್ತುವ ಮೂಲಕ ‘ಬಳ್ಳಾರಿ ಭೀಮ’ ಎನಿಸಿಕೊಂಡರು. ಮೈಸೂರು ದಸರಾ, ಹಂಪಿ ಉತ್ಸವ, ವಿಜಯಪುರದ ಸಿದ್ದೇಶ್ವರ ಜಾತ್ರೆ.. ಹೀಗೆ ಅನೇಕ ಕಡೆಗಳಲ್ಲಿ ಪಾಲ್ಗೊಂಡು ತನ್ನ ಬಲ ಪ್ರದರ್ಶನ ಮಾಡಿರುವ ಶೇಖಪ್ಪ ಅವರು ಹೂವಿನಂತೆ ಒಂದೂವರೆ ಕ್ವಿಂಟಾಲ್ ಭಾರದ ಗುಂಡುಕಲ್ಲನ್ನು ಎತ್ತುವ ಮೂಲಕ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದರು. ಆರು ಹಂತದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 89 ಕೆಜಿಯ ಗುಂಡು ಕಲ್ಲು, 100, 105, 120 ಹಾಗೂ 140 ಕೆಜಿ ತೂಕದ ಗುಂಡುಕಲ್ಲನ್ನು ಎತ್ತುವ ಸ್ಪರ್ಧೆ ಕೊನೆಯಲ್ಲಿ 160 ಕೆಜಿ ಭಾರದ ಕಲ್ಲನ್ನು ಎತ್ತುವ ಮೂಲಕ ತೋಳ್ಬಲ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಪ್ರಥಮ ಸ್ಥಾನ ಪಡೆದ ಶೇಖಪ್ಪ ಅವರಿಗೆ 10 ಸಾವಿರ ರೂ. ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ರಾಯಚೂರು ಜಿಲ್ಲೆಯ ಕೃಷ್ಣ ಕೊಲ್ಲೂರು ಅವರಿಗೆ ಐದು ಸಾವಿರ ರೂ. ಬಹುಮಾನ ನೀಡಲಾಯಿತು. ಈ ವೇಳೆ ನೆರೆದಿದ್ದ ಜನರು ಬಾಹುಬಲಿ, ಹೌದ್ದಾ..ಹುಲಿಯಾ.., ಸಮರ ಸಿಂಹ ರೆಡ್ಡಿ.. ಹೀಗೆ ಅನೇಕ ಹರ್ಷೋದ್ಗಾರಗಳ ಮೂಲಕ ಹುರಿದುಂಬಿಸುತ್ತಿದ್ದ ಪರಿ ವಿಶೇಷವಾಗಿತ್ತು.

    ದೇಹದಾರ್ಢ್ಯಕ್ಕೆ ಮನಸೋತ ಜನ: ಕೋಟೆ ಶ್ರೀ ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಂಡರು. ಸದೃಢವಾದ ಮೈಕಟ್ಟು ನೋಡಿ ಜನರು ಮನಸೋತರು. ಬಳ್ಳಾರಿ, ದಾವಣಗೆರೆ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ 50ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

    ಖಾದ್ಯ ಪ್ರಿಯರು ಫಿದಾ: ತರಹೇವಾರಿ ಖಾದ್ಯಗಳು. ಬಗೆಬಗೆಯ ತಿನಿಸುಗಳು.. ನೋಡುತ್ತಿದ್ದರೆ ಬಾಯಿಯಲ್ಲಿ ನೀರೂರುವುದು ಖಚಿತ. ಕಮ್ಮ ಭವನದಲ್ಲಿ ಆಯೋಜಿಸಲಾಗಿದ್ದ ಅಡುಗೆ ಸ್ಪರ್ಧೆಯಲ್ಲಿ ಮಹಿಳೆಯರು ಸಾಂಪ್ರದಾಯಿಕ ಅಡುಗೆ, ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳನ್ನು ತಯಾರಿಸುತ್ತಿದ್ದ ಬಗೆ ವಿಶೇಷವಾಗಿತ್ತು. ಅಕ್ಕಿಯಿಂದ ತಯಾರಿಸಿದ ಹೋಳಿಗೆ, ಸಜ್ಜೆ ಹೋಳಿಗೆ, ತರಕಾರಿಯಿಂದ ತಯಾರಿಸಿದ ಬಿಸಿಬೇಳೆ ಬಾತ್ ಹಾಗೂ ನಾನಾ ರೀತಿಯ ತಿನಿಸುಗಳು ನೋಡುಗರ ಗಮನ ಸೆಳೆದವು. ಸಿರಿಧಾನ್ಯಗಳಿಂದ ಪಾಯಸ, ನವಣೆ, ಕೊರಲೆಯ ಕಿಚಡಿ, ಸಾಮೇ ಡ್ರೈ ಫ್ರೂಟ್ಸ್, ರಾಗಿ ಬೆಲ್ಲ ಸ್ವೀಟ್ಸ್, ಸಬ್ಬಕ್ಕಿ, ಶೇಂಗಾ ಹೋಳಿಗೆ, ಆಲೂವಡೆ, ರಾಗಿ ರೊಟ್ಟಿ, ಸಜ್ಜೆ ರೊಟ್ಟಿ, ಮೊಳಕೆ ಕಾಳು ಖಾದ್ಯಗಳಿಗೆ ಆಹಾರ ಪ್ರಿಯರಿಂದ ಮೆಚ್ಚುಗೆಗೆ ವ್ಯಕ್ತವಾದವು. ಬಳ್ಳಾರಿ ವಿಶೇಷ ಅಡುಗೆಗಳಾದ ಒಗ್ಗರಣೆ-ಮಿರ್ಚಿ, ಕೋವಾ ವಿಶೇಷ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts