More

    ಚುನಾವಣೆಗೆ ಖಾಕಿ ಕಣ್ಗಾವಲು!

    ಚುನಾವಣೆಗೆ ಖಾಕಿ ಕಣ್ಗಾವಲು
    ಪೊಲೀಸರೊಂದಿಗೆ ಸಿಎಪಿಎಫ್ ಭದ್ರತೆ 3,200 ಸಿಬ್ಬಂದಿ ನಿಯೋಜನೆ

    ಬೆಳಗಾವಿ: ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಇತ್ತ ಸುಗಮವಾಗಿ ಚುನಾವಣೆ ನಡೆಸುವುದಕ್ಕೆ ಚುನಾವಣಾ ಆಯೋಗ ಸನ್ನದ್ಧವಾಗಿದ್ದು, ಭದ್ರತೆಗೆ ಸ್ಥಳೀಯ ಪೊಲೀಸರೊಂದಿಗೆ ಕೇಂದ್ರದ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್) ನಿಯೋಜಿಸುತ್ತಿದೆ.
    ಈ ಬಾರಿ ಚುನಾವಣೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ರಾಜಕೀಯ ನಾಯಕರ ಆರೋಪ, ಪ್ರತ್ಯಾರೋಪಗಳು ಎಲ್ಲೆ ಮೀರುತ್ತಿದ್ದು, ದ್ವೇಷದ ರಾಜಕಾರಣಗಳಿಗೆ ಕಾರಣವಾಗಬಹುದು ಎಂದು ಗುಪ್ತದಳ ವರದಿ ಹೇಳಿದೆ. ಹೀಗಾಗಿ, ಚುನಾವಣಾ ಆಯೋಗ ಸುಗಮವಾಗಿ ಮತದಾನ ನಡೆಸುವುದಕ್ಕೆ ಅಗತ್ಯ ಭದ್ರತಾ ಕ್ರಮ ಕೈಗೊಂಡಿದ್ದು, ಸ್ಥಳೀಯ ಪೊಲೀಸರೊಂದಿಗೆ ಕೇಂದ್ರದ ಸಶಸ್ತ್ರ ಪೊಲೀಸ್ ಪಡೆಯನ್ನೂ ಫೀಲ್ಡಿಗಿಳಿಸಲಾಗಿದೆ.

    3,200 ಸಿಎಪಿಎಫ್ ಸಿಬ್ಬಂದಿ ನಿಯೋಜನೆ

    ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ನಡೆಯುವ ಮತದಾನದ ವೇಳೆ 3,200 ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಯನ್ನು ಭದ್ರತೆ ನಿಯೋಜಿಸಲಾಗುತ್ತಿದೆ. ಬೆಳಗಾವಿ ರಾಜ್ಯದ 2ನೇ ದೊಡ್ಡ ಜಿಲ್ಲೆಯಾಗಿದ್ದರಿಂದ ಸಿಎಪಿಎಫ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗುತ್ತಿದೆ. ಕೇಂದ್ರದಿಂದ ಒಟ್ಟು ಸಿಎಪಿಎಫ್ 32 ಕಂಪನಿಗಳು ಆಗಮಿಸುತ್ತಿವೆ. 1 ಕಂಪನಿಯಲ್ಲಿ 100 ಸಿಬ್ಬಂದಿ ಇರುತ್ತದೆ. 1 ಕಂಪನಿಯಲ್ಲಿ 25 ಸಿಬ್ಬಂದಿಯಂತೆ 4 ತುಕುಡಿಗಳಲ್ಲಿ ವಿಂಗಡಣೆ ಮಾಡಿ ಭದ್ರತೆ ಕಲ್ಪಿಸಲಾಗುತ್ತದೆ. ಒಟ್ಟಾರೆ 3,200 ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಈಗಾಗಲೇ ಕೇಂದ್ರದಿಂದ ಸಿಎಪಿಎಫ್‌ನ 8 ಕಂಪನಿಗಳು ಜಿಲ್ಲೆಗೆ ಆಗಮಿಸಿದ್ದು, ಏ. 18ರಂದು ಮತ್ತೆ ಸಿಎಪಿಎಫ್‌ನ 24 ಕಂಪನಿಗಳು ಜಿಲ್ಲೆಗೆ ಆಗಮಿಸಲಿವೆ. ಜಿಲ್ಲೆಗೆ ಈಗಾಗಲೇ ಬಂದಿಳಿದಿರುವ ಸಿಎಪಿಎಫ್ ಸಿಬ್ಬಂದಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಥಸಂಚಲನ ನಡೆಸಿದ್ದು, ಸಾರ್ವಜನಿಕರಿಗೆ ಶಾಂತಿ-ಸುವ್ಯವಸ್ಥೆ ಕಾಪಾಡುವಂತೆ ಸಂದೇಶ ರವಾನಿಸಿದ್ದಾರೆ.

    1 ವಿಧಾನಸಭಾ ಕ್ಷೇತ್ರಕ್ಕೆ 1 ಕಂಪನಿ ನಿಯೋಜನೆ

    ಒಂದೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇಂದ್ರದ ಸಿಎಪಿಎಫ್‌ನ ಒಂದೊಂದು ತಂಡ ನಿಯೋಜನೆ ಮಾಡಲಾಗುತ್ತಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳು ಹೆಚ್ಚಿರುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಕಂಪನಿಗಳನ್ನು ನಿಯೋಜಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 4,434 ಮತಗಟ್ಟೆಗಳಿದ್ದು, ಅದರಲ್ಲಿ 2,217 ಮತಗಟ್ಟೆಗಳಲ್ಲಿ ಕಟ್ಟುನಿಟ್ಟಿನ ಚುನಾವಣೆ ಪ್ರಕ್ರಿಯೆ ನಡೆಸಲು ಮುಂದಾಗಿದ್ದಾರೆ. ಜಿಲ್ಲೆಯ 2,217 ಮತಗಟ್ಟೆಗಳನ್ನು ಸೂಕ್ಷ್ಮ, ಅತಿ ಸೂಕ್ಷ್ಮ ಹಾಗೂ ಆಕ್ಷೇಪಾರ್ಹ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಇಂಹವುಗಳ ಮೇಲೆ ನಿಗಾವಹಿಸಿದ್ದಾರೆ. ಇಂತಹ ಹೆಚ್ಚು ಮತಗಟ್ಟೆಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇಂದ್ರದ ಸಿಎಪಿಎಫ್‌ನ ಹೆಚ್ಚಿನ ಸಿಬ್ಬಂದಿ ನಿಯೋಜಿಸುತ್ತಿದ್ದಾರೆ. ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 4,434 ಹೆಚ್ಚು ಮತಗಟ್ಟೆಗಳಿವೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯವಿದ್ದ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ರಾಜ್ಯ ಚುನಾವಣಾ ಆಯೋಗ ಟೆಂಡರ್ ನೀಡಿದೆ. ಜಿಲ್ಲೆಯ ಒಟ್ಟಾರೆ ಶೇ.50 ಮತಗಟ್ಟೆಗಳ ಮೇಲೆ ಅಧಿಕಾರಿಗಳು ನಿಗಾವಹಿಸಿದ್ದು, ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

    ಸಶಸ್ತ್ರ ಸೀಮಾ ಬಲದ 11 ತಂಡಗಳು ಈಗಾಗಲೇ ಜಿಲ್ಲೆಗೆ ಆಗಮಿಸಿದ್ದು, ಮತದಾರರಲ್ಲಿ ವಿಶ್ವಾಸ ಮೂಡಿಸಲು ಪಥಸಂಚಲನ ಕೈಗೊಳ್ಳಲಾಗಿದೆ. ಚುನಾವಣಾ ಅಕ್ರಮಗಳ ಮೇಲೆ ನಿಗಾವಹಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಒಟ್ಟಾರೆ 58 ಎಫ್.ಎಸ್.ಟಿ., 66 ಎಸ್.ಎಸ್.ಟಿ.; 18 ವಿ.ವಿ.ಟಿ ಹಾಗೂ 51 ವಿಡಿಯೋ ಸರ್ವೇಲನ್ಸ್ ತಂಡಗಳನ್ನು ರಚಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 12 ಕೋಟಿ ರೂ. ನಗದು ಹಾಗೂ 53.67 ಲಕ್ಷ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಕೀಮ್ ಆ್ಯಪ್ ಮೂಲಕ ಪ್ರತಿಯೊಂದು ಹಣ ಸಾಗಣೆ ಮೇಲೆ ನಿಗಾವಹಿಸಲಾಗಿದೆ.
    | ನಿತೇಶ ಪಾಟೀಲ ಜಿಲ್ಲಾ ಚುನಾವಣಾಧಿಕಾರಿ ಬೆಳಗಾವಿ

    21 ಅಂತಾರಾಜ್ಯ ಚೆಕ್‌ಪೋಸ್ಟ್, 22 ಅಂತರ್ ಜಿಲ್ಲಾ ಚೆಕ್‌ಪೋಸ್ಟ್ ಮತ್ತು 12 ಜಿಲ್ಲೆಗೊಳಗೆ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲೂ ತೀವ್ರ ನಿಗಾ ವಹಿಸಲಾಗಿದೆ. ಸೂಕ್ಷ್ಮ ಮತ್ತು ದುರ್ಬಲ ವರ್ಗ ಹೆಚ್ಚಾಗಿರುವ ಮತಗಟ್ಟೆಗಳಿಗೆ ಈಗಾಗಲೇ ಹಲವಾರು ಸುತ್ತು ಭೇಟಿ ನೀಡಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ.
    | ಡಾ.ಸಂಜೀವ ಪಾಟೀಲ ಎಸ್ಪಿ ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts