More

    ರಜೆಯಲ್ಲಿ ಭಿಕ್ಷಾಟನೆಗಿಳಿವ ಮಕ್ಕಳು, ಉತ್ತರ ಕರ್ನಾಟಕ ಮೂಲದ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಳ

    – ಅವಿನ್ ಶೆಟ್ಟಿ ಉಡುಪಿ
    ಕೊಪ್ಪಳ, ಬಳ್ಳಾರಿ, ಬಾಗಲಕೋಟೆ ಸಹಿತ ಉತ್ತರ ಕರ್ನಾಟಕ ಭಾಗದಿಂದ ಆಗಮಿಸಿದ ವಲಸೆ ಕಾರ್ಮಿಕರ ಮಕ್ಕಳು ಭಿಕ್ಷಾಟನೆ ಹಾಗೂ ಮಲ್ಪೆ ಭಾಗದಲ್ಲಿ ಮೀನು ಆಯುವ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದು, ಹಿಂದಿನ ಮೂರು ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣ, ಶಾಲೆ ಆರಂಭವಾಗದಿರುವುದು.

    ಮಣಿಪಾಲ, ಉಡುಪಿ ಬಸ್ ನಿಲ್ದಾಣ, ಜನಸಂದಣಿ ಪ್ರದೇಶಗಳಲ್ಲಿ ಹೆತ್ತವರು ಮಕ್ಕಳನ್ನು ಹಿಡಿದುಕೊಂಡು ಭಿಕ್ಷಾಟನೆ ನಡೆಸುವ ದೃಶ್ಯಗಳು ಜಿಲ್ಲೆಯ ಹಲವಾರು ಕಡೆ ಕಂಡುಬರುತ್ತಿವೆ. ಮಕ್ಕಳ ಮುಖ ನೋಡಿ ಸಾರ್ವಜನಿಕರು ಕೂಡ ಹಣ ನೀಡುತ್ತಾರೆ ಎಂಬ ಆಲೋಚನೆ ಪೋಷಕರದು. ಸಾರ್ವಜನಿಕ ಸ್ಥಳದಲ್ಲಿ ಇಂಥ ಚಟುವಟಿಕೆಯಲ್ಲಿ ತೊಡಗುವ ಮಕ್ಕಳನ್ನು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಿಡಿದು ಮಕ್ಕಳ ರಕ್ಷಣಾ ಘಟಕ ವಶಕ್ಕೆ ಒಪ್ಪಿಸುತ್ತಿದ್ದಾರೆ. ಆದರೂ ಬಾಲಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದು ಇಲಾಖೆಗೆ ತಲೆನೋವಾಗಿದೆ.

    2017-18, 18-19ರಲ್ಲಿ ತಲಾ 10, 2019-20ನೇ ಸಾಲಿನಲ್ಲಿ 12 ಪ್ರಕರಣಗಳಿದ್ದವು. ಈ ವರ್ಷ ಅತ್ಯಧಿಕ 28 ಪ್ರಕರಣಗಳು ದಾಖಲಾಗಿವೆ. ಲಾಕ್‌ಡೌನ್ ಅವಧಿಯಲ್ಲಿ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಸ್ಥಗಿತವಾದಾಗ ವಲಸೆ ಕಾರ್ಮಿಕರೂ ಊರಿಗೆ ತೆರಳಿದ್ದರು. ಈಗ ಮೀನುಗಾರಿಕೆ ಪುನರಾರಂಭ ಆಗಿರುವುದರಿಂದ ಕೆಲಸ ಅರಸಿಕೊಂಡು ಕಾರ್ಮಿಕರು ಜಿಲ್ಲೆಗೆ ಬರುತ್ತಿದ್ದಾರೆ. ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳು ಕೂಡ ಹಣದ ನೆಪದಲ್ಲಿ ಕಾಯಕದಲ್ಲಿ ನಿರತರಾಗಿದ್ದಾರೆ.

    ಸಾಮಗ್ರಿ ಮಾರಾಟದಲ್ಲಿ ನಿರತ: ಕೋವಿಡ್ -19 ಗದ್ದಲ ಆರಂಭವಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಭಿಕ್ಷಾಟನೆ ಬಗ್ಗೆ ದೂರುಗಳು ಬಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಚೈಲ್ಡ್‌ಲೈನ್ ಸಂಸ್ಥೆ ಮಾಹಿತಿ ನೀಡಿವೆ. ಹಿಂದೆ ಜಿಲ್ಲೆಯಲ್ಲಿ ಭಿಕ್ಷಾಟನೆ ಸಂದರ್ಭ ಪತ್ತೆಯಾದ ಬಹುತೇಕ ಎಲ್ಲ ಮಕ್ಕಳು ಹೊರಜಿಲ್ಲೆ ಹಾಗೂ ಹೊರರಾಜ್ಯದವರು. ಅವರು ಕೋವಿಡ್ ಸಂದರ್ಭ ಊರುಗಳಿಗೆ ತೆರಳಿದ್ದರು. ಈಗ ನೇರವಾಗಿ ಭಿಕ್ಷಾಟನೆಯಲ್ಲಿ ತೊಡಗದೆ, ಶಾಲೆಗೆ ಹೋಗುವ ವಯಸ್ಸಿನ ಮಕ್ಕಳು ರಸ್ತೆಯಲ್ಲಿ ಬಲೂನ್, ಪೆನ್ ಮತ್ತಿತರ ಸಾಮಗ್ರಿ ಮಾರಾಟ ನಡೆಸುತ್ತಿದ್ದಾರೆ ಎಂದು ಪಡಿ ನಿರ್ದೇಶಕ, ಮಕ್ಕಳ ಹಕ್ಕುಗಳ ಹೋರಾಟಗಾರ ರೆನ್ನಿ ಡಿಸೋಜ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಹೆಚ್ಚಾಗಿ ವಲಸೆ ಕಾರ್ಮಿಕರ ಮಕ್ಕಳು ಭಿಕ್ಷಾಟನೆ, ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾರ್ವಜನಿಕರು ಇಂಥ ಮಕ್ಕಳ ಮಾಹಿತಿ ನೀಡಿದರೆ ಅವರನ್ನು ವಶಕ್ಕೆ ಪಡೆದು ಮಕ್ಕಳ ರಕ್ಷಣಾ ಸಮಿತಿ ಮುಂದೆ ಹಾಜರುಪಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇಲಾಖೆಯಿಂದ ಅವರ ವಿದ್ಯಾಭ್ಯಾಸಕ್ಕೂ ಸಹಕಾರ ನೀಡಲಾಗುತ್ತದೆ.
    – ಪ್ರಭಾಕರ ಆಚಾರ್, ಕಾನೂನು ಪರಿವೀಕ್ಷಣಾಧಿಕಾರಿ, ಮಕ್ಕಳ ರಕ್ಷಣಾ ಘಟಕ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts