More

    ಪ್ರಾಕೃತಿಕ ವಿಕೋಪದ ಬಗ್ಗೆ ಮುಂಜಾಗ್ರತೆ ವಹಿಸಿ

    ಚಿಕ್ಕಮಗಳೂರು: ಸದ್ಯದಲ್ಲಿಯೇ ಮುಂಗಾರು ಆರಂಭವಾಗಲಿದ್ದು, ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ಇಲಾಖೆಗಳು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರದ ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ಮುಂಗಾರು ಮಳೆ ಸಂಬAಧ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಯಿಂದ ಜೀವಹಾನಿ, ಜಾನುವಾರು ಹಾನಿಯಾದಲ್ಲಿ ಕೂಡಲೇ ವರದಿ ನೀಡಿ, ಪರಿಹಾರ ವಿತರಿಸುವಂತೆ ಎಲ್ಲ ತಹಸೀಲ್ದಾರ್‌ಗಳಿಗೆ ತಿಳಿಸಿದರು.
    ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸುವುದಕ್ಕೆ ಮೊದಲ ಆಧ್ಯತೆ ನೀಡಬೇಕು. ರಾಜ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಹೇಳಿದರು.
    ಗಾಳಿ, ಮಳೆಯಿಂದಾಗಿ ರಸ್ತೆಗೆ ಅಡ್ಡಲಾಗಿ ಬೀಳುವ ಮರಗಳನ್ನು ಅರಣ್ಯ ಇಲಾಖೆಯಿಂದ ಕೂಡಲೇ ತೆರವುಗೊಳಿಸಲು ಅಗತ್ಯವಿರುವ ಎಲ್ಲ ಯಂತ್ರೋಪಕರಣಗಳು ಮತ್ತು ಸಿಬ್ಬಂದಿಯನ್ನು ಸನ್ನದವಾಗಿಡಬೇಕು. ಅಗ್ನಿಶಾಮಕ ದಳ ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸುರಕ್ಷಾ ಉಪಕರಣಗಳೊಂದಿಗೆ ಸನ್ನದರಾಗಿರಬೇಕು. ಗೃಹರಕ್ಷಕ ದಳ ಸಿಬ್ಬಂದಿ ಸಹ ತುರ್ತುಸೇವೆಗೆ ಲಭ್ಯವಿರಬೇಕು ಎಂದು ತಿಳಿಸಿದರು.
    ವಿದ್ಯುತ್ ವ್ಯತ್ಯಯ ಉಂಟಾದಲ್ಲಿ ಕೂಡಲೇ ಸರಿಪಡಿಸಬೇಕು. ಬೀಳುವ ಪರಿಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳು, ಜೊತು ಬಿದ್ದಿರುವ ವಿದ್ಯುತ್ ತಂತಿಗಳು ಕಂಡು ಬಂದಲ್ಲಿ ಕೂಡಲೇ ಸರಿಪಡಿಸಿ ವಿದ್ಯುತ್ ತಂತಿಯಿAದ ಯಾವುದೇ ಜೀವ ಹಾನಿಯಾಗದಂತೆ ಎಚ್ಚರವಹಿಸಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
    ಜನರಿಗೆ ಅನುಕೂಲವಾಗುವಂತೆ ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆಗಳನ್ನು ಪ್ರತಿ ತಾಲೂಕುಗಳಲ್ಲಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕು. ಸಹಾಯವಾಣಿಗೆ ಬರುವ ದೂರುಗಳನ್ನು ಕಡ್ಡಾಯವಾಗಿ ದಾಖಲಿಸಬೇಕು ಎಂದು ಹೇಳಿದರು.
    ಮಳೆ, ಪ್ರವಾಹ ಸಂದರ್ಭದಲ್ಲಿ ಏನೇ ತೊಂದರೆಯಾದಲ್ಲಿ ಕೂಡಲೇ ಘಟನಾ ಸ್ಥಳಕ್ಕೆ ಹೋಗಬೇಕು. ಜೀವ, ಆಸ್ತಿ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಮಳೆಯಿಂದಾಗಿ ಗಿಡ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ವಿದ್ಯುತ್ ಕಡಿತ, ಕುಡಿಯುವ ನೀರಿಗೆ ತೊಂದರೆಯAತಹ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಕಂದಾಯ, ಮೆಸ್ಕಾಂ, ಅರಣ್ಯ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗಳ ಮಧ್ಯೆ ಸಮನ್ವಯ ಮುಖ್ಯವಾಗಿದೆ. ಹೀಗಾಗಿ ಎಲ್ಲರೂ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
    ಶಾಲೆ, ಅಂಗನವಾಡಿ ಕಟ್ಟಡಗಳು ದುರಸ್ತಿಯಲ್ಲಿದ್ದರೆ ಅಂತಹ ಕಟ್ಟಡಗಳನ್ನು ಗುರುತಿಸಿ ತಕ್ಷಣ ದುರಸ್ತಿ ಪಡಿಸಲು ಕ್ರಮವಹಿಸಬೇಕು. ಯಾವುದೇ ದೂರುಗಳಿಗೆ ಆಸ್ಪದ ನೀಡದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
    ಸಭೆಯಲ್ಲಿ ಜಿಪಂ ಸಿಇಒ ಡಾ.ಗೋಪಾಲಕೃಷ್ಣ, ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಎಎಸ್‌ಪಿ ಕೃಷ್ಣಮೂರ್ತಿ, ಚಿಕ್ಕಮಗಳೂರು ತರೀಕೆರೆ ಉಪ ವಿಭಾಗಗಳ ಉಪವಿಭಾಗಾಧಿಕಾರಿಗಳು, ಎಲ್ಲ ತಾಲೂಕುಗಳ ತಹಸೀಲ್ದಾರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts