More

    ಐಪಿಎಲ್ ಹೊಸ ತಂಡಗಳಿಗೆ ಹರಾಜಿಗೆ ಮುನ್ನವೇ 3 ಆಟಗಾರರು; ರಾಹುಲ್, ಹಾರ್ದಿಕ್‌ಗೆ ಸಾರಥ್ಯ?

    ನವದೆಹಲಿ: ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಅಹಮದಾಬಾದ್ ಮತ್ತು ಲಖನೌ ತಂಡಗಳಿಗೆ ಹರಾಜು ಪ್ರಕ್ರಿಯೆಗೆ ಮುಂಚಿತವಾಗಿ 3 ಆಟಗಾರರನ್ನು ಸೇರಿಸಿಕೊಳ್ಳಲು ಬಿಸಿಸಿಐ ಜ. 22ರವರೆಗೆ ಗಡುವು ನೀಡಿದೆ. ಈ ಅವಕಾಶ ಬಳಸಿಕೊಂಡು ಲಖನೌ ತಂಡ ಕನ್ನಡಿಗ ಕೆ.ಎಲ್. ರಾಹುಲ್ ಜತೆ ಹಾಗೂ ಅಹಮದಾಬಾದ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರೊಂದಿಗೆ ಒಪ್ಪಂದ ಮಾಡಿಕೊಂಡು ನಾಯಕರನ್ನಾಗಿಯೂ ನೇಮಿಸುವ ಸಾಧ್ಯತೆ ಇದೆ. ಇವರಿಬ್ಬರು ತಲಾ 15 ಕೋಟಿ ರೂ. ಸಂಭಾವನೆ ಪಡೆಯುವ ಸಾಧ್ಯತೆ ಇದೆ.

    ಹೊಸ ತಂಡಗಳು ಗರಿಷ್ಠ ಇಬ್ಬರು ಭಾರತೀಯರು ಮತ್ತು ಓರ್ವ ವಿದೇಶಿ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಿದೆ.

    ಗರಿಷ್ಠ ₹15 ಕೋಟಿ ವೇತನ
    ಹರಾಜಿಗೆ ಮುನ್ನ ಸೇರ್ಪಡೆಯಾಗುವ ಮೂವರು ಆಟಗಾರರೊಂದಿಗೆ ಹೊಸ ತಂಡಗಳು ಕ್ರಮವಾಗಿ 15, 11 ಮತ್ತು 7 ಕೋಟಿ ರೂ. ಸಂಭಾವನೆಗೆ ಒಪ್ಪಂದ ಮಾಡಿಕೊಳ್ಳಬೇಕು. ಇದರಿಂದ ಆ ತಂಡಗಳ ಹರಾಜಿನ ಒಟ್ಟು 90 ಕೋಟಿ ರೂ. ಬಜೆಟ್‌ನಲ್ಲಿ 33 ಕೋಟಿ ರೂ. ಕಡಿತವಾಗಲಿದೆ. ಇಬ್ಬರನ್ನಷ್ಟೇ ಸೇರಿಸಿಕೊಂಡರೆ 14 ಮತ್ತು 10 ಕೋಟಿ ರೂ. ನೀಡಬೇಕು. ಇದರಿಂದ ಬಜೆಟ್‌ನಲ್ಲಿ 24 ಕೋಟಿ ರೂ. ಕಡಿತವಾಗಲಿದೆ. ಒಬ್ಬ ಆಟಗಾರನನ್ನಷ್ಟೇ ಸೇರಿಸಿಕೊಂಡರೆ 14 ಕೋಟಿ ರೂ. ಪಾವತಿಸಬೇಕಾಗುತ್ತದೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ (ಅನ್‌ಕ್ಯಾಪ್ಡ್) ಆಟಗಾರನನ್ನು ಸೇರಿಸಿಕೊಂಡರೆ 4 ಕೋಟಿ ರೂ. ಸಂಭಾವನೆ ನೀಡಬೇಕು. ಇಷ್ಟು ಮೊತ್ತದ ಸಂಭಾವನೆಯನ್ನು ಫ್ರಾಂಚೈಸಿ, ಆಟಗಾರರಿಗೆ ಪಾವತಿಸದಿದ್ದರೂ, ಬಜೆಟ್‌ನಲ್ಲಿ ಇಷ್ಟೇ ಮೊತ್ತ ಕಡಿತವಾಗಲಿದೆ.

    ಬೆಂಗಳೂರಿನಲ್ಲಿ ಹರಾಜು
    ಐಪಿಎಲ್ ಆಡಳಿತ ಮಂಡಳಿ ಮಂಗಳವಾರವಷ್ಟೇ ಎರಡೂ ತಂಡಗಳಿಗೆ ಅಧಿಕೃತ ಅಂಗೀಕಾರ ನೀಡಿದ್ದು, ಜನವರಿ 22ರಂದು ಸಂಜೆ 5ರೊಳಗೆ ಆಟಗಾರರ ಹೆಸರು ಅಂತಿಮಗೊಳಿಸಬೇಕಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಖನೌ ತಂಡದ ಫ್ರಾಂಚೈಸಿ 7090 ಕೋಟಿ ರೂ.ಗೆ ಆರ್‌ಪಿಎಸ್‌ಜಿ ಗ್ರೂಪ್‌ಗೆ ಒಲಿದಿದ್ದರೆ, ಅಹಮದಾಬಾದ್ ಫ್ರಾಂಚೈಸಿ 5,625 ಕೋಟಿ ರೂ.ಗೆ ಸಿವಿಸಿ ಪಾಲಾಗಿತ್ತು. ಆದರೆ, ಸಿವಿಸಿ ಸಂಸ್ಥೆ ಬೆಟ್ಟಿಂಗ್ ಕಂಪನಿಗಳ ಜತೆಗೆ ಸಂಪರ್ಕ ಹೊಂದಿದ್ದ ಆರೋಪ ಎದುರಿಸಿದ ಕಾರಣ ತಂಡಗಳಿಗೆ ಕ್ಲೀನ್‌ಚಿಟ್ ನೀಡಲು ವಿಳಂಬವಾಗಿತ್ತು. ಕರೊನಾ ಭೀತಿಯ ನಡುವೆಯೂ ಫೆಬ್ರವರಿ 12-13ರಂದೇ ಬೆಂಗಳೂರಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಐಪಿಎಲ್ ಆಯುಕ್ತ ಬ್ರಿಜೇಶ್ ಪಟೇಲ್ ಮಂಗಳವಾರವೇ ಸ್ಪಷ್ಟಪಡಿಸಿದ್ದರು. ಏಪ್ರಿಲ್-ಮೇನಲ್ಲಿ ಭಾರತದಲ್ಲೇ ಟೂರ್ನಿ ನಡೆಯಲಿದೆ.

    ಸಂಭಾವ್ಯರು ಯಾರು
    ಮೂಲಗಳ ಪ್ರಕಾರ ಲಖನೌ ತಂಡ ನಾಯಕತ್ವಕ್ಕೆ ಕೆ.ಎಲ್. ರಾಹುಲ್‌ರನ್ನು ಪರಿಗಣಿಸುತ್ತಿದ್ದು, ಅವರೊಂದಿಗೆ ವಿದೇಶಿ ಆಟಗಾರರ ಕೋಟಾದಲ್ಲಿ ಕಗಿಸೊ ರಬಾಡ ಅಥವಾ ಮಾರ್ಕಸ್ ಸ್ಟೋಯಿನಿಸ್‌ರನ್ನು ಸೆಳೆಯಲು ಯೋಜಿಸಿದೆ. ಇನ್ನು ನಾಯಕತ್ವವಿಲ್ಲದೆ ಬರೀ ಆಟಗಾರರಾಗಿ ಆಡಲು ಒಪ್ಪಿದರೆ ಶ್ರೇಯಸ್ ಅಯ್ಯರ್ ಅಥವಾ ಮೊಹಮದ್ ಶಮಿ ಲಖನೌ ತಂಡಕ್ಕೆ ಸೇರ್ಪಡೆಯಾಗಬಹುದು ಎನ್ನಲಾಗಿದೆ. ಅಹಮದಾಬಾದ್ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಪಟ್ಟ ಕಟ್ಟುವ ಇರಾದೆ ಹೊಂದಿದ್ದು, ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಮತ್ತು ಆಫ್ಘನ್ ಸ್ಪಿನ್ನರ್ ರಶೀದ್ ಖಾನ್‌ರನ್ನೂ ಸೇರಿಸಿಕೊಳ್ಳಲು ಬಯಸಿದೆ ಎನ್ನಲಾಗಿದೆ.

    ಇವರಲ್ಲದೆ, ಈಗಾಗಲೆ ವಿವಿಧ ತಂಡಗಳಲ್ಲಿ ರಿಟೇನ್ ಆಗದೆ ಬಿಡುಗಡೆಯಾಗಿರುವ ಶಿಖರ್ ಧವನ್, ಯಜುವೇಂದ್ರ ಚಾಹಲ್, ದೇವದತ್ ಪಡಿಕಲ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಕ್ರಿಸ್ ಗೇಲ್ ಮುಂತಾದ ಆಟಗಾರರನ್ನೂ ಸೆಳೆದುಕೊಳ್ಳಲು ಹೊಸ ತಂಡಗಳಿಗೆ ಅವಕಾಶವಿದೆ.

    49ನೇ ಜನ್ಮದಿನದಂದು ರಾಹುಲ್ ದ್ರಾವಿಡ್‌ಗೆ ಎದುರಾಯಿತು ಕಸಿವಿಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts