More

    ತಾರಕಕ್ಕೇರಿದ ಹಾವೇರಿ -ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪೈಪೋಟಿ; ನನಗೆ ಟಿಕೆಟ್​ ಬೇಕೇ ಬೇಕು ಎಂದ ಬಿ.ಸಿ. ಪಾಟೀಲ್

    ಹಾವೇರಿ: ಮುಂದಿನ ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಾಗಲೇ ತಯಾರಿ ಆರಂಭವಾಗಿದ್ದು, ಪಕ್ಷಗಳಲ್ಲಿ ಟಿಕೆಟ್​ಗಾಗಿ ದೊಡ್ಡ ಪೈಪೋಟಿ ಶುರುವಾಗಿದೆ. ಟಿಕೆಟ್​ ವಿಚಾರಕ್ಕೆ ಬಂದರೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಪೈಪೋಟಿ ಆರಂಭವಾಗಿದ್ದು, ಆಕಾಂಕ್ಷಿಗಳು ಟಿಕೆಟ್‌ಗಾಗಿ ಸಾಲು ಸಾಲಾಗಿ ನಿಂತಿದ್ದಾರೆ.

    ಇದೀಗ ಕಾಂಗ್ರೆಸ್​ ಅಭ್ಯರ್ಥಿಯನ್ನು ಘೋಷಿಸುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ನನಗೆ ಟಿಕೆಟ್​ ಬೇಕೇ ಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್​ ಪಟ್ಟು ಹಿಡಿದಿದ್ದಾರೆ.

    ಹಿರೇಕೆರೂರಿನಲ್ಲಿ ಈ ಕುರಿತು ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ್, ನಾವು ತ್ಯಾಗ ಮಾಡಿ ಬಂದವರು ಮನೇಲಿ ಕುಳಿತುಕೊಂಡಿದ್ದೇವೆ. ನಮಗೆ ಹೆದರಿಸೋದು ಬೆದರಿಸೋದು ಗೊತ್ತಿಲ್ಲ. ಸೈಲೆಂಟ್ ಇದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯ ಅಂತ ಭಾವಿಸಬಾರದು.

    ಈಗಾಗಲೇ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ನಾನು ಹಾವೇರಿ ಗದಗ ಜಿಲ್ಲೆಗಳ ಉಸ್ತುವಾರಿ ಆಗಿ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಕೊಡಬೇಕು ಎಂದು ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ನಾನು ಟಿಕೆಟ್ ಬೆನ್ನತ್ತಿಕೊಂಡು ಹೋಗೋನಲ್ಲ ನನಗೆ ಕೊಡಬೇಕು ಅಂತ ವಾದ ಮಾಡ್ತಾ ಇದ್ದೇನೆ. ಟಿಕೆಟ್​​ ಸಿಗಲಿಲ್ಲ ಎಂದರೆ ಕಾರ್ಯಕರ್ತರ ಜೊತೆ ಮಾತಾಡ್ತೀನಿ ನನಗೆ ನನ್ನದೇ ಹಾದಿ ಇದೆ. ನಾನು ಹೆಬ್ಬಾರ್​ ಹಾಗೂ ಸೋಮಶೇಖರ್​ ಅವರ ಹಾದಿಯನ್ನು ಪಾಲಿಸುವವನಲ್ಲಾ.

    BC Patil

    ಇದನ್ನೂ ಓದಿ: ಕಾಂಗ್ರೆಸ್​ನ ಮಾಜಿ ಶಾಸಕ ವಾಸು ನಿಧನ

    ಕಾಂತೇಶ್ ಅವರ ಬಗ್ಗೆ ಮಾತಾಡೋಕೆ ಹೋಗಲ್ಲ. ಕಾಂತೇಶ್​ಗೂ ನನಗೂ ಸಂಬಂಧ ಇಲ್ಲ. ಯಡಿಯೂರಪ್ಪನವರೇ ಕಾಂತೇಶ್ ಜೊತೆ ನಿಂತು ಗೆಲ್ಲಿಸಿಕೊಂಡು ಬರೋದಾಗಿ ಮಾತುಕೊಟ್ಟಿದ್ದಾರೆ. ಆದರೆ, ಈಶ್ವರಪ್ಪನವರು ಇದರ ಬಗ್ಗೆ ಮಾತನಾಡಿದ್ದು, ಯಡಿಯೂರಪ್ಪನವರು ಈ ಮಾತನ್ನು ಹೇಳಬೇಕಾಗಿರುವುದು. ಯಡಿಯೂರಪ್ಪನವರೇ ಆ ಮಾತು ಹೇಳಬೇಕಲ್ವಾ ಅವರು ಹೇಳಿದರೆ ಆ ಪ್ರಕಾರ ನಡೆದುಕೊಳ್ಳಬೇಕಾಗುತ್ತೆ.

    ನಾನು ಸೋತಿದ್ದೀನಿ, ಅವಕಾಶ ಕೊಡಿ ಗೆಲ್ತೀನಿ ಅಂತ ಕೇಳ್ತಿದ್ದೇನೆ. ಕಾಂತೇಶ್​ಗೆ ಟಿಕೇಟ್ ಕೊಟ್ಟರೆ ವಿಚಾರ ಮಾಡ್ತೇನೆ. ಟಿಕೆಟ್​ ಪಡೆಯಬೇಕೆಂದರೆ ಅವರು ಹಾವೇರಿ – ಗದಗದವರೇ ಆಗಬೇಕಲ್ವಾ. ನಾನು ಎಲ್ಲಾ ಹೇಳಿದರೆ ನಿಮಗೆ ರುಚಿ ಉಳಿಯಲ್ಲ. ನಾನು ಎಚ್ಚರಿಕೆ ಕೊಡ್ತಾ ಇಲ್ಲ ನನಗೆ ಕೊಡಬೇಕು ಅಂತ ಡಿಮ್ಯಾಂಡ್ ಮಾಡ್ತಾ ಇದ್ದೇನೆ.

    ಈಗಿನ ಕಾಲದಲ್ಲಿ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯ ತನ್ನ ಸ್ಥಾನವನ್ನು ತ್ಯಾಗ ಮಾಡುವುದಿಲ್ಲ. ನಾವು ಶಾಸಕ ಸ್ಥಾನವನ್ನು ತ್ಯಾಗ ಮಾಡಿದ್ದೇವೆ. ನಮ್ಮ ತ್ಯಾಗಕ್ಕೆ ಸರ್ಕಾರ ಬಂತು ನಮಗೆ ಟಿಕೆಟ್​ ಕೊಡುವುದರಲ್ಲಿ ನ್ಯಾಯ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಯಾಕೆ ಸೋತಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ನಾವೆಲ್ಲಾ ಸೋತಿದ್ದೇವೆ ನಮ್ಮ ಹಿತವನ್ನೂ ಅವರು ಕಾಯಲಿ ಅದರ ಜವಾಬ್ದಾರಿ ಅವರಿಗೆ ಇದೆ ಅಲ್ವಾ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್​ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts