More

    ಬಯಲು ಜಂಗೀ ಕುಸ್ತಿ ಉಳಿವಿಗೆ ಅವಿರತ ಯತ್ನ

    ತರೀಕೆರೆ: ಪಾಳೇಗಾರರು ಆಳಿದ ತರೀಕೆರೆಯಲ್ಲಿ ಅನಾದಿಕಾಲದಿಂದ ಆಯೋಜಿಸುತ್ತಿರುವ ಬಯಲು ಜಂಗೀ ಕುಸ್ತಿ ಉಳಿಸಿ ಬೆಳೆಸುವ ಪ್ರಯತ್ನ ಅವಿರತವಾಗಿದೆ ಎಂದು ಪುರಸಭೆ ಅಧ್ಯಕ್ಷ ಪರಮೇಶ್ ಹೇಳಿದರು.
    ಬುಧವಾರ ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಶ್ರೀಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ, ಕುರುಬ ಸಮಾಜ, ಪುರಸಭೆ ಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ದಸರಾ ಬಯಲು ಜಂಗೀ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
    ಪಾಳೇಗಾರ ರಾಜಾ ಸರ್ಜಾ ಹನುಮಪ್ಪ ನಾಯಕರ ಸ್ಮರಣಾರ್ಥ ಅ.25 ರಿಂದ 27ರವರೆಗೆ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಗ್ರಾಮೀಣ ಕ್ರೀಡೆಗಳ ಉಳಿವಿಗೆ ಸರ್ಕಾರ ಮಾತ್ರವಲ್ಲ, ಸ್ಥಳೀಯ ಸಂಘ ಸಂಸ್ಥೆಗಳು ಕೂಡ ಪ್ರಯತ್ನಿಸಬೇಕು ಎಂದರು.
    ಮಾಜಿ ಪೈಲ್ವಾನ್ ವಗ್ಗಪ್ಪರ ಮಂಜಣ್ಣ ಮಾತನಾಡಿ, ಪೂರ್ವಜರ ಕಾಲದಿಂದಲೂ ನಿರಂತರವಾಗಿ ನಡೆಯುತ್ತಿರುವ ಸಾಂಪ್ರದಾಯಿಕ ಕ್ರೀಡೆಗೆ ಆರಂಭಿಕ ಹಂತದಲ್ಲಿ ಪೈಲ್ವಾನ್ ಬಸಣ್ಣ ಪೋಷಿಸಿ ಮೇಲ್ಪಂಕ್ತಿ ಹಾಕಿದ್ದರು. ಉಳಿದವರು ಕುಸ್ತಿ ಪರಂಪರೆ ಮುಂದುವರೆಸಿದ್ದಾರೆ. ಇಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿ ಹೆಸರುವಾಸಿಯಾಗಿದ್ದು, ಬೆಳಗಾವಿ, ವಿಜಯಪುರ, ಧಾರವಾಡ, ಹುಬ್ಬಳ್ಳಿ, ರಾಣೆಬೆನ್ನೂರು, ಹರಿಹರ, ಶಿವಮೊಗ್ಗ, ಹೊಳೆಹೊನ್ನೂರು, ಬೀರೂರು, ದಾವಣಗೆರೆ, ಭದ್ರಾವತಿ, ಮಹಾರಾಷ್ಟ್ರ, ಸೊಲ್ಲಾಪುರ, ಕೊಲ್ಲಾಪುರ, ಸಾಂಗ್ಲಿ ಇನ್ನಿತರ ಕಡೆಗಳಿಂದ ಕುಸ್ತಿಪಟುಗಳು ಆಗಮಿಸಿ ಬೆಳ್ಳಿಗದೆ, ಬೆಳ್ಳಿ ಖಡ್ಗ, ಚಿನ್ನದ ಅಖಾಡ ಬಳೆ ಸೇರಿ ಹಲವು ಪ್ರಶಸ್ತಿಗಳಿಗಾಗಿ ಕಾದಾಡಲಿದ್ದಾರೆ ಎಂದು ಹೇಳಿದರು.
    ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಕುಮಾರಪ್ಪ, ಸದಸ್ಯ ಟಿ.ಜಿ.ಅಶೋಕ್‌ಕುಮಾರ್, ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಶ್ರೀಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಅಧ್ಯಕ್ಷ ಟಿ.ಎನ್.ಕಿರಣ್‌ಕುಮಾರ್, ಉಪಾಧ್ಯಕ್ಷ ಟಿ.ಬಿ.ಸಂಜಯ್, ಜೈಸ್ವಾಮಿ, ಪ್ರಧಾನ ಕಾರ್ಯದರ್ಶಿ ಆರ್.ರಾಘವೇಂದ್ರ, ಟಿ.ಆರ್.ವೆಂಕಟೇಶ್, ಮಾಜಿ ಪೈಲ್ವಾನರಾದ ಕಾರೆ ಶಿವಣ್ಣ, ರಂಗಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts