More

    4 ಶಾಲೆಗೆ ಬಾಗಿಲು ತೆರೆಯುವ ಭಾಗ್ಯ..!

    ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಲು ಹಲವು ಕಾರಣಗಳಿವೆ. ಕೆಲವು ಕಡೆ ಮಕ್ಕಳ ಕೊರತೆ ನೆಪವಾದರೆ, ಇನ್ನೂ ಕೆಲವು ಕಡೆ ಶಿಕ್ಷಕರ ಅಸಮರ್ಪಕ ಕಾರ್ಯನಿವರ್ಹಣೆಯಿಂದ ಶಾಲೆಗಳನ್ನು ಮುಚ್ಚಲಾಗಿದೆ. ಆದರೆ, ಬಸವನಬಾಗೇವಾಡಿ ತಾಲೂಕಿನಲ್ಲಿ ಹೀಗೆ ಮುಚ್ಚಲ್ಪಟ್ಟ ನಾಲ್ಕು ಶಾಲೆಗಳಿಗೆ ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ತಳವಾರ ಹಾಗೂ ಗ್ರಾಮಸ್ಥರು ಬಾಗಿಲು ತೆರೆಯುವ ಭಾಗ್ಯ ಕಲ್ಪಿಸಿದ್ದಾರೆ. ಈ ಕುರಿತು ಸಮಗ್ರ ವರದಿ ಇಲ್ಲಿದೆ.

    ಬಸಪ್ಪ ಎಸ್.ಕುಂಬಾರ ವಿಜಯಪುರ

    ವಿದ್ಯಾರ್ಥಿಗಳ ಕಡಿಮೆ ಸಂಖ್ಯೆಯಿಂದಾಗಿ ಎರಡ್ಮೂರು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಬಸನಬಾಗೇವಾಡಿ ತಾಲೂಕಿನ ನಾಲ್ಕು ಶಾಲೆಗಳಿಗೀಗ ‘ಬಾಗಿಲು ತೆರೆಯುವ ಭಾಗ್ಯ’ ದೊರೆತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುತುವರ್ಜಿ ವಹಿಸಿ ಶಾಲೆಗಳನ್ನು ಪುನರಾರಂಭಿಸಿದ್ದು, ಮಕ್ಕಳ ಪಾಲಕರು ನಿಟ್ಟುಸಿರು ಬಿಡುವಂತಾಗಿದೆ.
    ತಾಲೂಕಿನ ಡೋಣೂರ ಆಶ್ರಯ ಕಾಲನಿ, ಇಂಗಳೇಶ್ವರ ಎಲ್‌ಟಿ-2, ಗಂಗೂರ ಎಲ್‌ಟಿ, ಬೆಲ್ಲದ ಹಳ್ಳ ತೋಟದ ಶಾಲೆಗಳು ಈ ವರ್ಷದಿಂದ ಪುನರಾರಂಭಗೊಳ್ಳಲಿವೆ. ಎರಡ್ಮೂರು ವರ್ಷಗಳಿಂದ ನಾನಾ ಕಾರಣಗಳಿಂದ ಶಾಲೆಗಳು ಬಂದ್ ಆಗಿದ್ದವು. ಇಲ್ಲಿಯ ಮಕ್ಕಳು ಪಕ್ಕದ ಗ್ರಾಮದ ಶಾಲೆಗಳಿಗೆ ತೆರಳುತ್ತಿದ್ದರು. ಬಸ್ ಸೌಕರ್ಯ ಇಲ್ಲದ್ದರಿಂದ ನಿತ್ಯವೂ ಕಿ.ಮೀ.ಗಟ್ಟಲೇ ನಡೆದು ಹೋಗುತ್ತಿದ್ದರು. ಕೆಲವು ಪಾಲಕರು ಆಟೋಗಳಿಗೆ ಬಾಡಿಗೆ ನೀಡಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುತ್ತಿದ್ದರು. ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇದ್ದರೂ ಶಿಕ್ಷಕರ ಅಸಮರ್ಪಕ ಕಾರ್ಯನಿವರ್ಹಣೆಯಿಂದ ಶಾಲೆಗಳು ಮುಚ್ಚಿದ್ದವು.
    ಈ ವಿಷಯ ಬಿಇಒ ಬಿ.ಎಸ್.ತಳವಾರ ಅವರ ಗಮನಕ್ಕೆ ಬಂದ ತಕ್ಷಣವೇ ಮುಚ್ಚಿದ ಶಾಲೆಗಳಿಗೆ ಭೇಟಿ ನೀಡಿ ಪಾಲಕರ, ಗ್ರಾಮಸ್ಥರ ಸಭೆ ನಡೆಸಿ ಶಾಲೆ ಪ್ರಾರಂಭದ ಬಗ್ಗೆ ಚರ್ಚಿಸಿದರು. ತಮ್ಮ ಮಕ್ಕಳ ಅನುಕೂಲಕ್ಕಾಗಿ ಶಾಲೆ ಆರಂಭಿಸಲಾಗುವುದು. ತಾವು ಸಹಾಯ ಸಹಕಾರ ನೀಡಬೇಕೆಂದು ಪಾಲಕರನ್ನು ಕೋರಿದರು. ಇದಕ್ಕೆ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದ್ದು, ಸದ್ಯ ಶಾಲೆಗಳಲ್ಲಿ ಪ್ರವೇಶಾತಿ ಪಡೆಯಲಾಗುತ್ತಿದೆ.
    ನಮ್ಮ ಮಕ್ಕಳು ಐದಾರು ಕಿ.ಮೀ. ನಡೆದುಕೊಂಡು ಶಾಲೆಗಳಿಗೆ ಹೋಗುತ್ತಿದ್ದರು. ನಿತ್ಯ ಭಯದಲ್ಲೇ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದೇವು. ಕೆಲವರು ಶಾಲೆಯನ್ನೇ ತೊರೆದರು. ಈ ವರ್ಷ ನಮ್ಮೂರಿನಲ್ಲೇ ಶಾಲೆ ಪ್ರಾರಂಭಿಸಲಾಗಿದೆ. ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಬಹಳ ಅನುಕೂಲವಾಗಲಿದೆ. ಬಿಇಒ ಅವರು ಮುತುವರ್ಜಿ ವಹಿಸಿ ಶಾಲೆ ಪ್ರಾರಂಭಿಸಿದ್ದಾರೆ. ಅವರ ಕಾರ್ಯದಕ್ಷತೆಯನ್ನು ಮೆಚ್ಚಲೇಬೇಕು ಎನ್ನುತ್ತಾರೆ ಡೋಣೂರ ಆಶ್ರಯ ಕಾಲನಿಯ ನಿವಾಸಿ ಶಂಕ್ರಪ್ಪ ಹುಲ್ಲೂರ.

    116 ಮಕ್ಕಳಿಗೆ ಸೌಭಾಗ್ಯ

    ಡೋಣೂರ 56, ಇಂಗಳೇಶ್ವರ ಎಲ್.ಟಿ-26, ಗಂಗೂರ ಎಲ್.ಟಿ-18, ಬೆಲ್ಲದ ಹಳ್ಳ ತೋಟದ ಶಾಲೆಯಲ್ಲಿ 16 ಮಕ್ಕಳು ಪ್ರಸಕ್ತ ವರ್ಷ ಪ್ರವೇಶ ಪಡೆದಿದ್ದಾರೆ. ಜತೆಗೆ ಖಾಸಗಿ ಶಾಲೆಗಳನ್ನು ತೊರೆದು ಹಲವು ವಿದ್ಯಾರ್ಥಿಗಳು ಪುನರಾರಂಭವಾದ ಸರ್ಕಾರಿ ಶಾಲೆಗಳಲ್ಲೇ ಪ್ರವೇಶ ಪಡೆಯುತ್ತಿದ್ದಾರೆ. ಕೆಲಸ ಅರಸಿ ಗುಳೆ ಹೋಗಿದ್ದವರ ಮಕ್ಕಳಿಗೆ ಆಯಾ ಗ್ರಾಮದ ಶಾಲೆಗಳಲ್ಲೇ ಪ್ರವೇಶ ನೀಡಲಾಗಿದೆ. ಶಾಲೆಗಳಿಗೆ ಅಗತ್ಯ ಶಿಕ್ಷಕರನ್ನು, ಸೌಲಭ್ಯಗಳನ್ನು ಬಿಇಒ ಅವರು ಕಲ್ಪಿಸಿದ್ದಾರೆ.

    2 ಲಕ್ಷ ರೂ. ದೇಣಿಗೆ ಸಂಗ್ರಹ

    ಡೋಣೂರ ಆಶ್ರಯ ಕಾಲನಿಯಲ್ಲಿ ಹೊಸದಾಗಿ ಆರಂಭಿಸಿರುವ ಶಾಲೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
    ಇಲ್ಲಿ ಶಾಲೆಗಾಗಿ ಜಾಗವಿದೆ. ಆದರೆ, ಕೊಠಡಿಗಳು, ಅಗತ್ಯ ಸೌಲಭ್ಯಗಳು ಇಲ್ಲ. ಸದ್ಯ ಖಾಲಿ ಇರುವ ಏಳು ಆಶ್ರಯ ಮನೆಗಳಲ್ಲೇ 1 ನೇ ತರಗತಿಯಿಂದ 5ನೇ ತರಗತಿವರೆಗೆ ಶಾಲೆ ಆರಂಭಿಸಲಾಗಿದೆ. ಸದ್ಯ ಮುಖ್ಯಗುರು ಎಚ್.ಎಚ್.ಕುರುಣದ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮದ ಯುವಕರು, ಹಿರಿಯರು ಬೆಂಬಲವಾಗಿ ನಿಂತಿದ್ದಾರೆ.

    ಶಾಲೆಯ ಖಾಲಿ ಜಾಗದಲ್ಲಿ ಬೆಳೆದು ನಿಂತಿದ್ದ ಮುಳ್ಳುಕಂಟಿಗಳನ್ನು ಯುವಕರು ತೆರವುಗೊಳಿಸಿ ಕೊಟ್ಟಿದ್ದು, ಶಾಲೆಗೆ ತಾತ್ಕಾಲಿಕವಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಪ್ರತಿಯೊಂದು ಮನೆಯಿಂದ ದೇಣಿಗೆ ಸಂಗ್ರಹಿಸಿದ್ದಾರೆ. ಸದ್ಯ 2 ಲಕ್ಷ ರೂ. ಸಂಗ್ರಹವಾಗಿದ್ದು, ಶಾಲೆಗಳಿಗೆ ಬೇಕಾದ ಟೇಬಲ್, ಖುರ್ಚಿ, ಬ್ಲಾಕ್ ಬೋರ್ಡ್, ಶಾಲೆ ಸೀಲ್, ನೋಟ್ ಪ್ಯಾಡ್, ಸ್ವಾತಂತ್ರೃ ಹೋರಾಟಗಾರರು, ಸಾಹಿತಿಗಳು, ಗಣ್ಯರ ಭಾವಚಿತ್ರಗಳು ಸೇರಿ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸಲಾಗಿದೆ. ಕೆಲವು ಶಿಕ್ಷಣ ಪ್ರೇಮಿಗಳು 10 ಸಾವಿರ ರೂ.ವರೆಗೂ ದೇಣಿಗೆ ಅಥವಾ ಸಾಮಾನುಗಳನ್ನು ಕೊಡುಗೆ ನೀಡುತ್ತಿದ್ದಾರೆ.
    ಸದ್ಯ ಆಶ್ರಯ ಮನೆಗಳಲ್ಲಿ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಗ್ರಾಮದ ಪ್ರತಿಯೊಬ್ಬರೂ ನಮಗೆ ಸಹಕಾರ ನೀಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಶಾಸಕರಿಂದ ಶಾಲೆ ಉದ್ಘಾಟನೆ ಮಾಡಿಸಲಾಗುವುದು. ಬಿಇಒ ಅವರು ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆ ರಾಜ್ಯಕ್ಕೆ ಮಾದರಿಯಾಗುವಂತೆ ಮಾಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಮುಖ್ಯಗುರು ಎಚ್.ಎಚ್.ಕರುಣದ ವಿಶ್ವಾಸ ವ್ಯಕ್ತಪಡಿಸಿದರು.

    ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ. ರೈತರು, ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮುಚ್ಚಿದ ಶಾಲೆಗಳನ್ನು ತೆರೆಯಲಾಗಿದೆ. ಕ್ಷೇತ್ರದ ಶಾಸಕರಾದ ಶಿವಾನಂದ ಪಾಟೀಲರ ಸಹಕಾರ, ಮಾರ್ಗದರ್ಶನ ಬಹಳಷ್ಟಿದೆ. ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಪ್ರಸಕ್ತ ವರ್ಷದಿಂದ ತರಗತಿ ಆರಂಭಿಸಲಾಗುತ್ತಿದೆ. ಅದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
    ಬಿ.ಎಸ್.ತಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಸವನಬಾಗೇವಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts