More

    ಸಾಲಕ್ಕಾಗಿ ಬ್ಯಾಂಕ್ ಸದೃಢಗೊಳಿಸಲು ಶಾಸಕ ರಮೇಶ್​ಕುಮಾರ್ ಮನವಿ

    ಕೋಲಾರ: ಬದುಕುವ ಆಸೆಯಿಂದ ಬ್ಯಾಂಕಿಗೆ ಬರುವ ಪ್ರತಿ ಬಡವನಿಗೂ ಸಾಲ ನೀಡುವಂತಾಗಲು ಡಿಸಿಸಿ ಬ್ಯಾಂಕ್ ಅನ್ನು ಸದೃಢಗೊಳಿಸಿ, ರೈತರನ್ನು ನಂಬದ, ಕಳ್ಳರಿಗೆ ಸಾಲ ನೀಡುವ ವಾಣಿಜ್ಯ ಬ್ಯಾಂಕ್​ಗಳ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬೇಕು ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್ ಹೇಳಿದರು.

    ಸುಗಟೂರು ಎಸ್​ಎಫ್​ಸಿಎಸ್ ಆಶ್ರಯದಲ್ಲಿ ಡಿಸಿಸಿ ಬ್ಯಾಂಕ್​ನಿಂದ ಬುಧವಾರ ಮಹಿಳಾ ಸ್ವಸಹಾಯ ಸಂಘಗಳಿಗೆ 1.74 ಕೋಟಿ ರೂ.ಸಾಲ ವಿತರಿಸಿ ಮಾತನಾಡಿ, ಡಿಸಿಸಿ ಬ್ಯಾಂಕ್ ನಿಮ್ಮನ್ನು ಕೂರಿಸಿ ಸಾಲ ನೀಡುತ್ತಿದೆ. ಸಾಲ ಕೇಳುವವರು ಕಷ್ಟದಲ್ಲಿರುತ್ತಾರೆ, ಆದರೆ ಕಳ್ಳರಲ್ಲ ಎಂದರು.

    ಸುಗಟೂರು ಸೊಸೈಟಿ 32 ಕೋಟಿ ರೂ. ವಹಿವಾಟು ನಡೆಸಿರುವುದು ಶ್ಲಾಘನೀಯ. ಮುಂದಿನ ವರ್ಷದೊಳಗೆ 100 ಕೋಟಿ ರೂ. ವಹಿವಾಟು ನಡೆಸುವಂತಾಗಬೇಕು. ಸೊಸೈಟಿಗೆ ಪ್ರತಿ ಕುಟುಂಬದಿಂದಲೂ ಸದಸ್ಯನಿರಬೇಕು, ಜಾತಿ, ಪಕ್ಷ ನೋಡಬೇಡಿ, ಮನೆಮನೆಗೂ ಹೋಗಿ ಸದಸ್ಯತ್ವ ಮಾಡಿಸಿಕೊಳ್ಳಿ, ಉಪವಾಸ ಇರೋನಿಗೆ ಊಟ ಹಾಕಿ, ಹೊಟ್ಟೆ ತುಂಬಿದವನಿಗಲ್ಲ ಎಂದು ಸಲಹೆ ನೀಡಿದರು.

    ನಾಗಿರೆಡ್ಡಿ, ಜಿ.ನಾರಾಯಣಗೌಡ ಅವರಂತಹ ಮಹನೀಯರು ಕಟ್ಟಿದ ಡಿಸಿಸಿ ಬ್ಯಾಂಕ್ ಬ್ಯಾಲಹಳ್ಳಿ ಗೋವಿಂದಗೌಡ ಮತ್ತು ಅವರ ಆಡಳಿತ ಮಂಡಳಿಯಿಂದ ಉಳಿದಿದೆ. ಇದು ದೇವಾಲಯ ಇದ್ದಂತೆ. ಪಡೆದ ಸಾಲದ ಕಂತುಗಳನ್ನು ಸಮಯಕ್ಕೆ ಕಟ್ಟಿ ಬ್ಯಾಂಕ್ ಉಳಿಸುವ ಹೊಣೆಯೂ ನಿಮ್ಮ ಮೇಲಿದೆ. ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಸಾಲದ ಮೊತ್ತ 1 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

    ಸುಗಟೂರು ಎಸ್​ಎಫ್​ಸಿಎಸ್ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ ಅಧ್ಯಕ್ಷತೆ ವಹಿಸಿದ್ದರು. ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಮಾಜಿ ನಿರ್ದೇಶಕ ಕೃಷ್ಣೇಗೌಡ, ಕೃಷಿಕ ಸಮಾಜದ ಮಂಜುನಾಥ್, ಮುಖಂಡರಾದ ಅಣ್ಣಿಹಳ್ಳಿ ನಾಗರಾಜ್, ಗ್ರಾಪಂ ಮಾಜಿ ಅಧ್ಯಕ್ಷ ವಿಶ್ವನಾಥ್, ಎಸ್​ಎಫ್​ಸಿಎಸ್ ಅಧ್ಯಕ್ಷ ತಿಮ್ಮರಾಯಪ್ಪ, ಉಪಾಧ್ಯಕ್ಷೆ ರುಕ್ಕಮ್ಮ, ನಿರ್ದೇಶಕರಾದ ತೊಟ್ಲಿ ವೆಂಕಟರಾಮರೆಡ್ಡಿ, ರಮಣಾರೆಡ್ಡಿ, ಹನುಮೇಗೌಡ, ಗೋಪಾಲಗೌಡ ಇತರರು ಉಪಸ್ಥಿತರಿದ್ದರು.

    ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ: ರೈತರಿಗೆ ವಾರದೊಳಗೆ 4.40 ಕೋಟಿ ರೂ. ಸಾಲ ನೀಡಲಾಗುವುದು. ಸಕಾಲದಲ್ಲಿ ಮರುಪಾವತಿಸಿ ಬ್ಯಾಂಕ್ ಉಳಿಸಬೇಕು. ನಬಾರ್ಡ್​ನ ಇ-ಶಕ್ತಿ ಯೋಜನೆಗೆ ಆಯ್ಕೆಯಾದ ದೇಶದಲ್ಲೇ ಮೊದಲ ಡಿಸಿಸಿ ಬ್ಯಾಂಕ್ ನಮ್ಮದು. ಸೊಸೈಟಿಗಳ ಗಣಕೀಕರಣ ವ್ಯವಸ್ಥೆ ಜ.1 ರಿಂದ ಜಾರಿಯಾಗಲಿದೆ. ಇದರಿಂದ ಪಾರದರ್ಶಕ ವಹಿವಾಟು ನಡೆಯಲಿದೆ, ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts