More

    ನ್ಯಾಯಮೂರ್ತಿ ಸದಾಶಿವ ವರದಿ ಬಹಿರಂಗ ಚರ್ಚೆಯಾಗಲಿ

    ಚಿಕ್ಕಮಗಳೂರು: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಹಿರಂಗ ಚರ್ಚೆಗೆ ಬಿಡದೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು ಎಂದು ಒತ್ತಾಯಿಸಿ ಶನಿವಾರ ಜಿಲ್ಲಾ ಬಂಜಾರ ಸಂಘ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿತು.

    ಸಂಘದ ಅಧ್ಯಕ್ಷ ಟಿ.ಎಲ್.ಲಕ್ಷ್ಮಣ ನಾಯ್ಕ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಏಕತೆ ಉಳಿಸಿಕೊಳ್ಳುವುದು ನಮ್ಮ ಉದ್ದೇಶ. ಎಲ್ಲರಿಗೂ ಸಮಾನ ಅವಕಾಶ ಸಿಗಲು ಸರ್ಕಾರ ಪಾರದರ್ಶಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು.

    ಕೆಲವು ದುಷ್ಟ ಶಕ್ತಿಗಳು ಪರಿಶಿಷ್ಟ ಜಾರಿ ಪಟ್ಟಿಯಲ್ಲಿರುವ ಸಮುದಾಯಗಳಲ್ಲಿ ಪರಿಸ್ಪರ ದ್ವೇಷ ಹುಟ್ಟುಹಾಕಲು ಯತ್ನಿಸುತ್ತಿವೆ. ಲಂಬಾಣಿ, ಭೋವಿ, ಕೊರಚ ಮತ್ತು ಕೊರಮ ಜಾತಿಗಳನ್ನು ಎಸ್​ಸಿ ಪಟ್ಟಿಯಿಂದ ತೆಗೆದು ಹಾಕಬೇಕು ಎಂಬ ಅನಗತ್ಯ ಚರ್ಚೆ ಹುಟ್ಟುಕಾಕಲಾಗಿದೆ. ವರ್ಗೀಕರಣ, ಕೆನೆಪದರ ಮತ್ತಿತರ ವಿಚಾರಗಳನ್ನು ಹರಿಬಿಟ್ಟು ನಮ್ಮ ಏಕತೆ ಛಿದ್ರಗೊಳಿಸಿ ಹೋರಾಟಗಳನ್ನು ಹತ್ತಿಕ್ಕುವ ದುರುದ್ದೇಶದಿಂದ ಕೆಲವರು ನಮ್ಮನ್ನು ಒಡೆದು ಆಳಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

    ನ್ಯಾ. ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು. ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ಮತ್ತು ಆಸಕ್ತರಿಗೆ ಈ ವರದಿ ದೃಢೀಕೃತ ಪ್ರತಿ ನೀಡಬೇಕು. ಆಕ್ಷೇಪಣೆ, ತಕರಾರು ಮತ್ತು ನ್ಯಾಯ ಸಮ್ಮತ ತಿದ್ದುಪಡಿ ಸೂಚಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

    ಸಂಘದ ಕಾರ್ಯದರ್ಶಿ ಚಂದ್ರಾನಾಯ್ಕ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳ ಮೀಸಲಾತಿ ಹೆಚ್ಚಳಕ್ಕಾಗಿ ಶಿಫಾರಸು ಮಾಡಿರುವ ನ್ಯಾ. ನಾಗಮೋಹನದಾಸ್ ವರದಿ ಪ್ರಕಟಿಸಬೇಕು. ರಾಜ್ಯದ ಎಲ್ಲ ಜಾತಿ, ಜನಾಂಗ, ಬುಡಕಟ್ಟುಗಳ ಸ್ಥಿತಿಗತಿ ಅರಿಯಲು ಹಿಂದಿನ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

    ಈ ಎಲ್ಲ ವಿಚಾರಗಳ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಹಾಗೂ ಸರ್ಕಾರದ ಮೇಲೆ ಒತ್ತಡ ತಂದು 99 ಸಮುದಾಯಗಳ ಹಿತ ಕಾಪಾಡಬೇಕು ಎಂದು ಸಚಿವರನ್ನು ಕೋರಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts