More

    ಜಿಲ್ಲಾ ಉಸ್ತುವಾರಿ ನಿಯೋಜನೆ ಕುತೂಹಲ

    *ಬಿಜೆಪಿ ಮಾಡಿದ ಪ್ರಯೋಗ ವಿಲ *ಕೆ.ಎಚ್.ಮುನಿಯಪ್ಪ ಹೆಸರು ಮುಂಚೂಣಿ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಬಿಜೆಪಿ ನೆಲೆಕಂಡುಕೊಳ್ಳಲು ಪರದಾಡಿದ ಗ್ರಾಮಾಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಾರುಪತ್ಯ ಮೆರೆದಿದೆ. ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಗೆಲುವು ಹೊರತುಪಡಿಸಿ ಉಳಿದ ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಏತನ್ಮಧ್ಯೆ ಯಾರಿಗೆ ಒಲಿಯಲಿದೆ ಉಸ್ತುವಾರಿ ಜವಾಬ್ದಾರಿ ಎಂಬುದು ಕುತೂಹಲ ಹುಟ್ಟುಹಾಕಿದೆ.
    ಗ್ರಾಮಾಂತರ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗಿವೆ. ಆದರೆ ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‌ಗೆ ನೆಲೆಯೇ ಇಲ್ಲದಂತೆ ಮತದಾರ ಕಾಂಗ್ರೆಸ್‌ಗೆ ಜೈಕಾರ ಹಾಕಿದ್ದಾನೆ. ಜಿಲ್ಲೆಯಿಂದಲೇ ಆಯ್ಕೆಯಾದ ಶಾಸಕರೊಬ್ಬರಿಗೆ ಸಚಿವ ಸ್ಥಾನ ದಕ್ಕಲಿದೆ ಎಂಬ ಮಾತು ಮುನ್ನೆಲೆಗೆ ಬಂದಿದೆ.

    ಜೆಡಿಎಸ್‌ಗೆ ಕೈ ತಪ್ಪಿದ ಉಸ್ತುವಾರಿ: ಈ ಬಾರಿ ಉಸ್ತುವಾರಿ ರೇಸ್‌ನಲ್ಲಿ ನೆಲಮಂಗಲದ ಜೆಡಿಎಸ್ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹಾಗೂ ದೇವನಹಳ್ಳಿ ಜೆಡಿಎಸ್ ಮಾಜಿ ಶಾಸಕ ನಿಸರ್ಗನಾರಾಯಣಸ್ವಾಮಿ ಹೆಸರು ಕೇಳಿಬರುತ್ತಿತ್ತು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಇವರಿಬ್ಬರಿಗೂ ಮಂತ್ರಿಗಿರಿ ಸಿಗಲಿದೆ ಎಂಬ ಮಾತು ದಟ್ಟವಾಗಿತ್ತು. ಅದರಲ್ಲೂ ಎರಡು ಬಾರಿ ಗೆದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಡಾ.ಕೆ.ಶ್ರೀನಿವಾಸಮೂರ್ತಿ ಅವರಿಗೆ ಮಂತ್ರಿಗಿರಿ ಜತೆಗೆ ಉಸ್ತುವಾರಿಯ ಜವಾಬ್ದಾರಿಯೂ ಸಿಗಲಿದೆ ಎಂಬ ಮಾತು ಮುಂಚೂಣಿಯಲ್ಲಿತ್ತು. ಆದರೆ ವ್ಯತಿರಿಕ್ತ ಚುನಾವಣಾ ಲಿತಾಂಶ ನೀಡುವ ಮೂಲಕ ಮತದಾರ ಇವೆಲ್ಲಕ್ಕೂ ಪೂರ್ಣ ವಿರಾಮ ಇಟ್ಟಿದ್ದಾನೆ.

    ಕೆ.ಎಚ್‌ಗೆ ಉಸ್ತುವಾರಿ? ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಅಭೂತಪೂರ್ವ ಗೆಲವು ದಾಖಲಿಸಿದ ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಜಿಲ್ಲೆಯ ಉಸ್ತುವಾರಿ ನೀಡಲಾಗುತ್ತದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಎರಡು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿ ಮೂರನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದ ದೊಡ್ಡಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಯ್ಯ ಅವರಿಗೆ ಈ ಮೊದಲು ಉಸ್ತುವಾರಿ ಸ್ಥಾನ ದೊರಕಲಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿತ್ತು. ಆದರೆ ಬಿಜೆಪಿಯ ಧೀರಜ್ ಮುನಿರಾಜ್ ಎದುರು ಸೋಲೋಪ್ಪಿಕೊಂಡದ್ದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಇದೀಗ ದೇವನಹಳ್ಳಿಯಲ್ಲಿ ಗೆದ್ದ ಅಭ್ಯರ್ಥಿಯ ಹೆಗಲಿಗೇರುವುದು ಬಹುತೇಕ ಖಚಿತ ಎಂಬ ಮಾತು ಕೇಳಿಬರುತ್ತಿದೆ.

    ಬಿಜೆಪಿಯ ಪ್ರಯೋಗ ಮಾಡಲ್ಲ: ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಎಂಟಿಬಿ ನಾಗರಾಜ್ ಹಾಗೂ ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ಅವರ ಉಸ್ತುವಾರಿ ಅದಲು ಬದಲು ಮಾಡಿದ್ದ ಬಿಜೆಪಿ ವರಿಷ್ಠರ ಪ್ರಯೋಗ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂಬ ಆತ್ಮಾವಲೋಕನ ನಡೆಯುತ್ತಿದೆ. ಇವರಿಬ್ಬರೂ ಒಲ್ಲದ ಮನಸ್ಸಿನಿಂದಲೇ ಉಸ್ತುವಾರಿ ನಿರ್ವಹಣೆಗೆ ಪರದಾಡುತ್ತಿದ್ದ ರೀತಿ ಗುಟ್ಟಾಗಿ ಉಳಿದಿರಲಿಲ್ಲ. ಚಿಕ್ಕಬಳ್ಳಾಪುರ ಉಸ್ತುವಾರಿ ಹೊತ್ತಿದ್ದ ಎಂಟಿಬಿ ನಾಗರಾಜ್ ಸರ್ಕಾರಿ ಕಾರ್ಯಕ್ರಮಗಳಿಗಷ್ಟೇ ಚಿಕ್ಕಬಳ್ಳಾಪುರದಲ್ಲಿ ದರ್ಶನ ಭಾಗ್ಯ ಕೊಡುತ್ತಿದ್ದರು. ಹಾಗೆಯೇ ಡಾ.ಕೆ.ಸುಧಾಕರ್ ಗ್ರಾಮಾಂತರ ಜಿಲ್ಲೆಯಲ್ಲಿನ ಸರ್ಕಾರಿ ಕಾರ್ಯಕ್ರಮಗಳಿಗಷ್ಟೇ ಉಸ್ತುವಾರಿ ಸೀಮಿತಗೊಳಿಸಿದ್ದರು. ಇದರಿಂದ ಎರಡೂ ಜಿಲ್ಲೆಗೆ ಉಸ್ತುವಾರಿ ಇದ್ದರೂ ಹೇಳಿಕೊಳ್ಳುವಂತ ಪ್ರಯೋಜನವಾಗಲಿಲ್ಲ ಎಂಬ ವಾದ ಕೇಳಿಬಂದಿತ್ತು. ಈ ಬಗ್ಗೆ ಚೆನ್ನಾಗಿ ಅರಿತಿರುವ ಕಾಂಗ್ರೆಸ್ ವರಿಷ್ಠರು ಇಂಥ ಪ್ರಯೋಗಕ್ಕೆ ಕೈ ಹಾಕುವುದಿಲ್ಲ, ಅಲ್ಲದೆ ಜಿಲ್ಲೆಯಿಂದಲೇ ಸಚಿವರಾದವರಿಗೆ ಉಸ್ತುವಾರಿ ನೀಡುವುದು ಕಾಂಗ್ರೆಸ್ ಸಂಪ್ರದಾಯವಾಗಿದೆ. ಇದರಿಂದ ಬಹುತೇಕ ಕೆ.ಎಚ್.ಮುನಿಯಪ್ಪ ಅವರಿಗೆ ಉಸ್ತುವಾರಿ ಹೊಣೆ ಬರಲಿದೆ ಎಂಬ ವಾದ ಕೇಳಿಬರುತ್ತಿದೆ.

    ರೇಸ್‌ನಲ್ಲಿ ಕೃಷ್ಣಬೈರೇಗೌಡ: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಉಸ್ತುವಾರಿಯಾಗಿದ್ದ ಕೃಷ್ಣಬೈರೇಗೌಡ ಜಿಲ್ಲೆಯಲ್ಲಿ ಉತ್ತಮ ಹೆಸರು ಮಾಡಿದ್ದರು. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಡಳಿತಭವನವನ್ನು ದೇವನಹಳ್ಳಿಗೆ ಸ್ಥಳಾಂತರಿಸಿ ಜಿಲ್ಲೆಯ ಜನರು ನಗರಕ್ಕೆ ಅಲೆದಾಡುವುದನ್ನು ತಪ್ಪಿಸಿದ್ದರು. ಜಿಲ್ಲೆಯಲ್ಲಿನ ಅಭಿವೃದ್ಧಿ ಕೆಲಸಗಳಿಗೆ ದನಿಯಾಗುತ್ತಿದ್ದರು ಜನರಿಗೂ ಸುಲಭವಾಗಿ ಕೈಗೆ ಸಿಗುವ ಸಚಿವರು ಎಂಬ ಹೆಸರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೃಷ್ಣಬೈರೇಗೌಡರಿಗೇ ಉಸ್ತುವಾರಿ ವಹಿಸುವ ಬಗ್ಗೆ ವರಿಷ್ಠರ ಒಂದು ತಂಡ ಚಿಂತನೆ ನಡೆಸಿದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts