More

    ಬಾಲದಲ್ಲಿ ಘಂಟೆ, ಸೊಂಟದಲ್ಲಿ ಕತ್ತಿ

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ತಾಲೂಕಿನ ಬಾಲೇನಹಳ್ಳಿ ಗ್ರಾಮದಲ್ಲಿ ಐತಿಹಾಸಿಕ 8 ಅಡಿ ಎತ್ತರದ ಆಂಜನೇಯನ ಮೂರ್ತಿ ಇರುವ ದೇವಾಲಯವಿದೆ.
    ವ್ಯಾಸರಾಯರ ಕಾಲದಲ್ಲಿ ಈ ವಿಗ್ರಹ ಕೆತ್ತಲಾಗಿದೆ. ಈ ತರಹದ ಮೂರ್ತಿಗಳನ್ನು ಪ್ರಾಕೃತಿಕವಾಗಿ ಮತ್ತು ಪೂಜಿಸುವ ಸ್ಥಳಗಳಲ್ಲಿ ಲಭ್ಯವಿರುವುದು ಅಪರೂಪ ಎನ್ನಲಾಗಿದೆ.

    ವ್ಯಾಸರಾಯರ ಕಾಲದಲ್ಲಿ ಈ ರೀತಿ ಎತ್ತರದ 700 ಆಂಜನೇಯ ಸ್ವಾಮಿಯ ಮೂರ್ತಿಗಳನ್ನು ಕೆತ್ತಿಸಲಾಗಿದೆ ಎಂಬುದು ಸಂಶೋಧಕರ ಮಾಹಿತಿ. ಬಾಲೇನಹಳ್ಳಿ, ತಿರುಪತಿ, ಹಂಪಿ ಸೇರಿ ಕೆಲ ಭಾಗದಲ್ಲಿ ಈ ತರಹದ ಮೂರ್ತಿಗಳನ್ನು ಕಾಣಬಹುದಾಗಿದೆ.

    ಐತಿಹ್ಯ: ಅಭಯಹಸ್ತ, ಬಾಲದಲ್ಲಿ ಘಂಟೆ, ಸೊಂಟಕ್ಕೆ ಕತ್ತಿ ಕೆತ್ತನೆ ಇರುವ ಹನುಮಪ್ಪನ ಮೂರ್ತಿಯನ್ನು ಇಲ್ಲಿ ಪೂಜಿಸಲಾಗುತ್ತಿದೆ. ಗ್ರಾಮದ ಹೊರಭಾಗದ ಪಾದಗಟ್ಟೆ ಬಳಿ ಇರುವ ಬಂಡೆಕಲ್ಲುಗಳ ನಡುವಿನ ಚಿಲುಮೆ ನೀರನ್ನು ಆಂಜನೇಯ ಕುಡಿದಿರುವ ಐತಿಹ್ಯ ಇದೆ. ಚಿಲುಮೆ ನೀರು ಕುಡಿಯಲು ಊರಿರುವ ಕೈ ಮತ್ತು ಮೊಣಕಾಲು ಗುರುತು ಈಗಲೂ ಕಾಣುತ್ತೇವೆ. ಅದೇ ಬಾಲದಲ್ಲಿ ಘಂಟೆ, ಸೊಂಟದಲ್ಲಿ ಕತ್ತಿರೀತಿ ಈ ಚಿಲುಮೆ ಯಾವ ಕಾಲದಲ್ಲೂ ಬತ್ತದೆ ಇರುವುದು ವಿಶೇಷ.

    ಆಚರಣೆ: ಶ್ರಾವಣ ಮಾಸದಲ್ಲಿ ವಿಜೃಂಭಣೆಯಿಂದ ಕಾರ್ತಿಕೋತ್ಸವ ಆಚರಿಸಿ 101 ಎಡೆ ಅರ್ಪಿಸಲಾಗುತ್ತದೆ. ಅನ್ನ, ಮೊಸರು, ಬೆಲ್ಲ, ಹಾಲು, ಬಾಳೆಹಣ್ಣು, ಜೇನುತುಪ್ಪ ಹೀಗೆ ವಿವಿಧ ಪದಾರ್ಥ ಬಳಸಿ ಪ್ರಸಾದ ತಯಾರಿಸಲಾಗುತ್ತದೆ. 12 ಆಯಾಗಾರರಿಗೆ ಎಡೆ ಹಂಚಿದ ಬಳಿಕ ಉಳಿದದ್ದನ್ನು ಪೂಜಾರ ಗುಡಿಕಟ್ಟಿನವರು ಒಂದು ಅಗುಳು ಉಳಿಸದೆ ಊಟ ಮಾಡುವ ಪದ್ಧತಿ ಇದೆ.

    ಪೂಜೆ: ಆಂಜನೇಯಸ್ವಾಮಿ ದೇಗುಲದ ಬುಡ್ಡೆಕಲ್ಲಿಗೆ 101 ಬಿಂದಿಗೆ ನೀರು ಹಾಕಿ ಪೂಜಿಸಲಾಗುತ್ತದೆ. ಬಳಿಕ ಕಾರ್ತಿಕೋತ್ಸವದ ಪಲ್ಲಕ್ಕಿಯಲ್ಲಿ ಮೂರ್ತಿ ಹೊತ್ತು ಪಾದಗಟ್ಟೆ ಬಳಿಗೆ ಕರೆದೊಯ್ದು ವಿಶೇಷ ಪೂಜೆ ಸಲ್ಲಿಸುವ ರೂಢಿಯಿದೆ. ವಿಜಯದಶಮಿಯಲ್ಲಿ ಬನ್ನಿ ಮುಡಿಯುವ ಸಂಪ್ರದಾಯ ಈಗಲೂ ಇಲ್ಲಿ ಕಾಣುತ್ತೇವೆ.

    ಸೋಲಾರ್ ಗ್ರಾಮ
    ಆಂಜನೇಯಸ್ವಾಮಿಯ ಪವಾಡ ತಿಳಿದು ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ದರ್ಶನಕ್ಕೆ ಆಗಮಿಸಿದ್ದರು. ಆ ವೇಳೆ ವಿದ್ಯುತ್ ಸ್ಥಗಿತ ಆಗಿತ್ತು. ಸಚಿವರಾಗಿದ್ದ ತನ್ನ ಸಹೋದರ ಎಚ್.ಡಿ.ರೇವಣ್ಣ ಅವರಿಗೆ ತಕ್ಷಣ ದೂರವಾಣಿ ಕರೆ ಮಾಡಿ ಇಲ್ಲಿಗೆ ಸೋಲಾರ ಲೈಟ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು. ಅದರ ಫಲ ಇಡೀ ಗ್ರಾಮಕ್ಕೆ ಗುಡ್ಡಗಾಡು ಫಲಾನುಭವಿಗಳ ಯೋಜನೆಯಡಿ 250 ಕುಟುಂಬಗಳಿಗೆ ತಲಾ 13 ಸಾವಿರ ರೂ. ವೆಚ್ಚದಲ್ಲಿ ಸೋಲಾರ್ ಲೈಟ್ ವ್ಯವಸ್ಥೆ ಮಾಡಲಾಗಿದ್ದು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸೋಲಾರ್ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

    ಎಚ್‌ಡಿಕೆಗೆ ಸಿಎಂ ಭಾಗ್ಯ
    ಊರಿಗೆ ಬಂದು ಆಂಜನೇಯ ಸ್ವಾಮಿ ದೇವರ ದರ್ಶನ ಪಡೆದು ಹೋದ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗುವ ಯೋಗ ಲಭಿಸಿತು. ನಿಖಿಲ್ ಕುಮಾರಸ್ವಾಮಿ ಕೂಡ ಭೇಟಿ ನೀಡಿದ್ದ ಕೆಲವೇ ತಿಂಗಳಲ್ಲಿ ಅವರು ಬೇಡಿಕೊಂಡಂತೆ ಮತ್ತೊಮ್ಮೆ ಎಚ್‌ಡಿಕೆ, ಜೆಡಿಎಸ್-ಕಾಂಗ್ರೆಸ್ ನೇತೃತ್ವದಲ್ಲಿ ಸಿಎಂ ಆದರು. ಈ ಹಿನ್ನೆಲೆಯಲ್ಲಿ ಆಂಜನೇಯ ದೇವಸ್ಥಾನಕ್ಕೆ ರಾಜಕಾರಣಿಗಳು, ಅಧಿಕಾರಸ್ಥರು ಹೆಚ್ಚು ಭೇಟಿ ನೀಡಿ ಹರಕೆ ಮಾಡಿಕೊಳ್ಳುತ್ತಾರೆ.

    ಎಲ್ಲಿದೆ ಮಂದಿರ
    ಚಿತ್ರದುರ್ಗದಿಂದ ಚಳ್ಳಕೆರೆಗೆ ತೆರಳುವ ಮಾರ್ಗ ಮಧ್ಯೆ ಹೆದ್ದಾರಿಯಲ್ಲಿ ಇಳಿದು 1.6 ಕಿಮೀ ಒಳ ದಾರಿಯಲ್ಲಿ ಸಾಗಿದರೆ ಬಾಲೇನಹಳ್ಳಿಯಲ್ಲಿ ಆಂಜನೇಯ ದೇವಸ್ಥಾನಕ್ಕೆ ತಲುಪಬಹುದು. ಈ ಮಾರ್ಗದಲ್ಲಿ ಸಾರಿಗೆ ಸಮಸ್ಯೆ ಇಲ್ಲ.

    ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ದೇಗುಲಕ್ಕೆ ನಿಯೋಜಿತ ಅರ್ಚಕರಿಲ್ಲ. ಇಲ್ಲಿ ಪೂಜಿಸುವವರಿಗೆ ವೇತನವಿಲ್ಲ. ಗ್ರಾಮದಲ್ಲಿನ 20 ಎಕರೆ ಜಮೀನನ್ನು ದೇಗುಲದ ಹೆಸರಿಗೆ ಮಾಡಿಕೊಟ್ಟಲ್ಲಿ, ಇಲ್ಲಿ ಬೆಳೆಯುವ ಬೆಳೆಯಿಂದ ಅರ್ಚಕರ ಕುಟುಂಬಕ್ಕೆ ಸಂಭಾವನೆ ನೀಡಬಹುದು.
    ಕೆ.ಟಿ.ದೇವೇಂದ್ರರೆಡ್ಡಿ ಗ್ರಾಮಸ್ಥ

    ಗ್ರಾಮದ ಆಂಜನೇಯ ಸ್ವಾಮಿ ಬಹಳ ಶಕ್ತಿವಂತ ಮತ್ತು ಪವಾಡ ಪುರುಷ. ಭಕ್ತರ ಇಷ್ಟಾರ್ಥ ಈಡೇರಿಸುವ ದೈವ. ಇಲ್ಲಿಗೆ ಬೇರೆಡೆಯಿಂದ ಬಹಳಷ್ಟು ಮಂದಿ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ದೇಗುಲದ ಅಭಿವೃದ್ಧಿಗೆ ಸಹಕಾರ ಅಗತ್ಯ.
    ತಿಪ್ಪೇಸ್ವಾಮಿ, ಪೈನಿಡಿ ವಂಶಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts