More

    ಬಳಸಿಕೊಂಡಿದ್ದಷ್ಟೇ, ಬೆಳೆಸಲಿಲ್ಲ: ಪ್ರಮುಖ 3 ಪಕ್ಷಗಳ ವಿರುದ್ಧ ದಲಿತ ಮುಖಂಡರ ಆರೋಪ

    ಚನ್ನಪಟ್ಟಣ: ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರೂ ಪಕ್ಷಗಳು ತಾಲೂಕಿನ ದಲಿತರನ್ನು ಕೇವಲ ಮತ ಬ್ಯಾಂಕ್‌ನಂತೆ ಬಳಸಿಕೊಂಡು, ಯಾವುದೇ ಅಧಿಕಾರ ನೀಡದೆ ವಂಚಿಸಿವೆ ಎಂದು ಮೂರೂ ಪಕ್ಷಗಳ ದಲಿತ ಮುಖಂಡರು ಆರೋಪಿಸಿದ್ದಾರೆ.

    ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ತಾಲೂಕಿನ ವಿವಿಧ ಪಕ್ಷಗಳ ಮುಖಂಡರು, ದಲಿತರ ಮತವನ್ನು ಪಡೆದು ಅಧಿಕಾರ ಅನುಭವಿಸಿದ ಯಾವುದೇ ಪಕ್ಷದ ನಾಯಕರು ದಲಿತ ಸಮುದಾಯಕ್ಕೆ ಇದುವರೆಗೂ ಸಣ್ಣ ಅಧಿಕಾರವನ್ನೂ ನೀಡಿಲ್ಲ. ದಲಿತರನ್ನು ಬಳಸಿಕೊಂಡಿದ್ದಾರೆಯೇ ವಿನಃ ಬೆಳೆಸಲಿಲ್ಲ. ಪ್ರತಿ ಚುನಾವಣೆಯಲ್ಲೂ ಇಲ್ಲಸಲ್ಲದ ಆಮಿಷ ಒಡ್ಡಿ ದಲಿತರನ್ನು ಓಲೈಸುವ ಎಲ್ಲ ರಾಜಕೀಯ ಪಕ್ಷಗಳು, ಅಧಿಕಾರ ಸಿಕ್ಕ ನಂತರ ಮರೆಯುತ್ತಿವೆ. ಮತಗಳಿಕೆಗಾಗಿ ನಮ್ಮನ್ನು ಇಂದ್ರ – ಚಂದ್ರರಿಗೆ ಹೋಲಿಸುವ ರಾಜಕೀಯ ಪಕ್ಷಗಳು ಅಧಿಕಾರ ನೀಡುವಾಗ ಕಡೆಗಣಿಸಿರುವುದು ಏತಕ್ಕಾಗಿ ಎಂದು ಪ್ರಶ್ನಿಸಿದರು.
    ಸಾಮಾಜಿಕ ನ್ಯಾಯದ ವಿರುದ್ಧವಾಗಿ ಅಧಿಕಾರದಿಂದ ವಂಚಿಸಲಾಗಿದೆ. ತಾಲೂಕಿನಲ್ಲಿ ಆರ್ಥಿಕ ಹಾಗೂ ರಾಜಕೀಯವಾಗಿ ಬಲಿಷ್ಠವಾಗಿ ಓರ್ವ ದಲಿತನೂ ಇಲ್ಲದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಆದರೂ, ನಮ್ಮ ಸಮುದಾಯ ತಾವು ಬೆಂಬಲಿಸುವ ಪಕ್ಷಕ್ಕೆ ಅನ್ಯಾಯ ಎಸಗಿಲ್ಲ. ಇದು ಸಮುದಾಯದ ಪ್ರಾಮಾಣಿಕತೆ ಹಾಗೂ ನಿಷ್ಠೆಗೆ ಸಾಕ್ಷಿ ಎಂದರು.

    ರಾಜಕೀಯ ಅಧಿಕಾರವೂ ಇಲ್ಲ: ತಾಲೂಕಿನಲ್ಲಿ ಮೂರು ಪಕ್ಷಗಳಲ್ಲೂ ನೂರಾರು ದಲಿತ ನಾಯಕರು ದುಡಿಯುತ್ತಿದ್ದಾರೆ. ಇಷ್ಟು ವರ್ಷ ಕಳೆದರೂ ಓರ್ವ ದಲಿತನಿಗೆ ಯಾವುದೇ ಪಕ್ಷ ತಾಲೂಕು ಘಟಕದ ಅಧ್ಯಕ್ಷ ಸ್ಥಾನ ನೀಡಿಲ್ಲ. ಅವಕಾಶಗಳು ಸಿಕ್ಕರೂ ಯಾವುದೇ ನಿಗಮ – ಮಂಡಳಿಗೆ ನಿರ್ದೇಶಕ ಸ್ಥಾನ ದೊರಕಿಸಿಕೊಟ್ಟಿಲ್ಲ. ತಾಲೂಕಿನ ಟಿಎಪಿಎಂಎಸ್, ಯೋಜನಾ ಪ್ರಾಧಿಕಾರ, ಎಂಪಿಸಿಎಸ್, ವಿಎಸ್‌ಎಸ್‌ಎನ್‌ಗಳಲ್ಲಿ ದಲಿತನೊಬ್ಬನನ್ನು ಅಧ್ಯಕ್ಷನಾಗಿ ಮಾಡಲು ಯಾವ ಪಕ್ಷಗಳೂ ಮುಂದಾಗದಿರುವುದೇ ನಮ್ಮ ಮೇಲಿರುವ ತಾತ್ಸಾರಕ್ಕೆ ಉದಾಹರಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸ್ಥಾನಮಾನ ನೀಡಿದರೆ ಒಕ್ಕೊರಲ ಬೆಂಬಲ: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ನಗರ ಯೋಜನಾ ಪ್ರಾಧಿಕಾರಕ್ಕೆ ದಲಿತರೊಬ್ಬರನ್ನು ನೇಮಕಾತಿ ಮಾಡುವ ಮೂಲಕ ದಲಿತರಿಗೆ ರಾಜಕೀಯ ಸ್ಥಾನ ಕಲ್ಪಿಸಬೇಕು. ಈ ಮೂಲಕ ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್ ರಾಜಕೀಯ ಮೇಲ್ಪಂಕ್ತಿ ಹಾಕಬೇಕು. ಮೂರು ಪಕ್ಷಗಳು ಇನ್ನಾದರೂ ತಮ್ಮ ಪಕ್ಷದ ದಲಿತ ಮುಖಂಡರಿಗೆ ರಾಜಕೀಯ ಸ್ಥಾನಮಾನ ನೀಡಲು ಮುಂದಾಗಬೇಕು. ಈ ಮೂರು ಪಕ್ಷದಲ್ಲಿ ಯಾರು ನಮಗೆ ಸೂಕ್ತ ಸ್ಥಾನಮಾನ ನೀಡುವರೋ ಅವರಿಗೆ ಒಕ್ಕೊರಲ ಬೆಂಬಲ ನೀಡಲಿದ್ದೇವೆ ಎಂದು ದಲಿತ ಮುಖಂಡರು ಘೋಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts