More

    ಕಾರ್ಯಶೈಲಿ ಬದಲಾಯಿಸಿಕೊಳ್ಳಿ

    ಬಾಗಲಕೋಟೆ: ನಗರದ ಸ್ವಚ್ಛತೆ, ಸಾರ್ವಜನಿಕ ಸಮಸ್ಯೆ, ಕುಂದು-ಕೊರತೆಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸಬೇಕು. ಸದಸ್ಯರು ಹೇಳುವ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಬೇಕು. ಸದ್ಯಕ್ಕೆ ಇರುವ ಕಾರ್ಯಶೈಲಿ ಬದಲಾಯಿಸಿಕೊಳ್ಳದಿದ್ದರೆ ಕಠಿಣ ಕ್ರಮ ಅನಿವಾರ್ಯವಾಗಲಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ನಗರಸಭೆ ಸಭಾಭವನದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ತಮ್ಮ ವಾರ್ಡ್‌ನ ಸಮಸ್ಯೆ, ಕೆಲವು ಅಧಿಕಾರಿಗಳು, ಸಿಬ್ಬಂದಿ ವರ್ತನೆ, ನಿರ್ಲಕ್ಷೃ ಧೋರಣೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಾಗ ಕೆಂಡಾಮಂಡಲರಾದ ಶಾಸಕ ಚರಂತಿಮಠ, ಅಯೋಗ್ಯತನ ಬಿಟ್ಟು ಎಲ್ಲರೂ ಕೆಲಸ ಮಾಡುವುದನ್ನು ಕಲಿಯಬೇಕು. ಬೆರಳಣಿಕೆ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡುತ್ತಾರೆ. ಉಳಿದವರ ಬಗ್ಗೆ ಪ್ರತಿಯೊಂದು ಸಭೆಯಲ್ಲಿ ಸಾಕಷ್ಟು ದೂರುಗಳು ಬರುತ್ತಿವೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸದಸ್ಯರು ತಮ್ಮ ವಾರ್ಡ್‌ನ ಸಮಸ್ಯೆಗಳು ಹೇಳಿದಾಗ ಕಾಲಮಿತಿಯೊಳಗೆ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.

    ಸಮಸ್ಯೆಗಳನ್ನು ಹರಿವಿದ ಸದಸ್ಯರು ಕೆಲವು ಭಾಗದಲ್ಲಿ 247 ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಹಳೇ ನಗರದಲ್ಲಿ ಒತ್ತುವರಿ ತೆರವುಗೊಳಿಸಿದ ಬಳಿಕ ಚರಂಡಿಗಳಲ್ಲಿ ಗಲೀಜು ತುಂಬಿಕೊಂಡಿದೆ. ಅದನ್ನು ಸ್ವಚ್ಛಗೊಳಿಸುತ್ತಿಲ್ಲ. ಅಲ್ಲದೆ, ವಿಪರೀತ ಪ್ರಮಾಣದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಹಿನ್ನೀರು ಪ್ರದೇಶದಲ್ಲಿ ಹಾಕಿ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ತೆಗ್ಗಿ ಲೇಔಟ್, ನಂದಿಕೇಶ್ವರ ಕಾಲನಿ, ಜ್ಯೋತಿ ಕಾಲನಿ ಭಾಗದಲ್ಲಿ ಸರಿಯಾಗಿ ಕುಡಿಯುವ ನೀರು ಬರುತ್ತಿಲ್ಲ. ಸ್ಟೇಷನ್ ರಸ್ತೆ ಸೇರಿ ಕೆಲವೆಡೆ ಒಳಚರಂಡಿ ಮೇಲಿನ ಯುಜಿಡಿ ಓಪನ್ ಆಗಿದ್ದು, ಅಪಾಯದ ಗಂಟೆ ಬಾರಿಸುತ್ತಿವೆ. ಹಳೇ ಬಾಗಲಕೋಟೆ ನಗರದ ಕೆಲವು ಪ್ರದೇಶ ಗಬ್ಬೆದ್ದು ಹೋಗಿವೆ. ಈ ಬಗ್ಗೆ ಗಮನ ಹರಿಸಬೇಕು ಎಂದು ವೀರಪ್ಪ ಶಿರಗನ್ನವರ, ಸ್ಮೀತಾ ಪವಾರ, ರಾಜೇಂದ್ರ ಬಳಲೂಮಠ, ಲಕ್ಷ್ಮಣ ಮುಚಖಂಡಿ, ಚನ್ನಯ್ಯ ಹಿರೇಮಠ ಇತರರು ಸಮಸ್ಯೆಗಳ ಪಟ್ಟಿ ಸಭೆಯಲ್ಲಿ ತೆರೆದಿಟ್ಟರು.

    ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಸಭಾಪತಿ ರವಿ ಧಾಮಜಿ, ಬಿಟಿಡಿಎ ಪುನರ್ವಸತಿ ಅಧಿಕಾರಿ ಗಣಪತಿ ಪಾಟೀಲ, ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ ಇತರರು ಇದ್ದರು.

    ಗೈರಾದ ಅಧಿಕಾರಿಗಳಿಗೆ ನೋಟಿಸ್ ಕೊಡಿ
    ತಮ್ಮ ವಾರ್ಡ್‌ನಲ್ಲಿ ಹೊಸ ಶುದ್ಧ ಕುಡಿಯುವ ನೀರಿನ ಘಟಕ ಮಾಡಬೇಕು ಎಂದು ಹಲವು ಸದಸ್ಯರು ಬೇಡಿಕೆ ಸಲ್ಲಿಸಿದರು. ಶಾಸಕ ವೀರಣ್ಣ ಚರಂತಿಮಠ ಪ್ರತಿಕ್ರಿಯಿಸಿ, ಶುದ್ಧ ಕುಡಿಯುವ ನೀರಿನ ಘಟಕ ಹೊಸದಾಗಿ ಯಾವುದನ್ನು ಸ್ಥಾಪಿಸಬೇಡಿ. ಈ ಹಿಂದೆ ಮಾಡಿದ ಘಟಕಗಳಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸರ್ಕಾರ ನ್ಯಾಯಾಂಗ ತನಿಖೆ ನಡೆಸುತ್ತಿದೆ. ಅದು ಪೂರ್ಣಗೊಳ್ಳುವ ತನಕ ಹೊಸ ಆರ್‌ಒ ಪ್ಲಾಂಟ್‌ಗಳಿಗೆ ಅವಕಾಶ ಕೊಡಬೇಡಿ ಎಂದ ಅವರು, ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಂದು ತಿಳಿಸಿದರು. ಇನ್ನು ಕಡಿಮೆ ಮೊತ್ತಕ್ಕೆ ಬಿಡ್ ಕೂಗುವ ಗುತ್ತಿಗೆದಾರರರಿಗೆ ಅವಕಾಶ ಮಾಡಿಕೊಡಬಾರದು. ಇದರಿಂದ ಗುಣಮಟ್ಟದ ಕಾಮಗಾರಿ ಆಗುವುದಿಲ್ಲ. ಸರಿಯಾದ ಮೊತ್ತಕ್ಕೆ ಬಿಡ್ ಕೂಗುವ ಗುತ್ತಿಗೆದಾರರಿಗೆ ಅವಕಾಶ ನೀಡಬೇಕು ಎಂದರು.

    ಶಿವಾಜಿ ಮೂರ್ತಿ ಪ್ರತಿಷ್ಠಾಪನೆಗೆ ಒಪ್ಪಿಗೆ
    ನವನಗರದ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ವೃತ್ತದ ಉದ್ಯಾನದಲ್ಲಿ ಛತ್ರಿಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಒಪ್ಪಿಗೆ ಸೂಚಿಸಲಾಯಿತು. ಆಶ್ರಯ ಮನೆ ಯೋಜನೆಗೆ ನೀಡಿರುವ 15 ಎಕರೆ 5 ಗುಂಟೆಗೆ ಜಮೀನಿಗೆ ಅಭಿವೃದ್ಧಿ ಶುಲ್ಕ ಪಾವತಿಸಲು, ಹಳೇ ಬಾಗಲಕೋಟೆ ನಗರದ ತಾಪಂ ಆವರಣದಲ್ಲಿರುವ ನಗರಸಭೆ ಮಳಿಗೆಗಳಲ್ಲಿ ಹಳೇ ಬಾಡಿಗೆದಾರರನ್ನು ಮುಂದುವರಿಸುವುದು ಸೇರಿ ವಿವಿಧ ವಿಷಯಗಳಿಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts