More

    ಮೂರು ದಿನ ‘ಕೋಟೆ’ ನಗರಿ ಸ್ತಬ್ಧ !

    ಬಾಗಲಕೋಟೆ: ದೇಶದಲ್ಲಿಯೇ ಗಮನ ಸೆಳೆದಿರುವ ಬಾಗಲಕೋಟೆಯ ಬಣ್ಣದೋಕಳಿ ಸೋಮವಾರ (ಮಾ.29)ದಿಂದ ಮೂರು ದಿನ ನಡೆಯಲಿದೆ. ಕೋವಿಡ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಬಣ್ಣದಾಟಕ್ಕೆ ಬ್ರೇಕ್ ಹಾಕಲಾಗಿದ್ದು, ಸಡಗರ, ಸಂಭ್ರಮ ಕೊಂಚ ಮಟ್ಟಿಗೆ ಕ್ಷೀಣಿಸಲಿದೆ.

    ಹೋಳಿ ಹುಣ್ಣಿಮೆಯ ದಿನ ಭಾನುವಾರ ಬೆಳಗಿನ ಜಾವ ಹುಬ್ಬಾ ನಕ್ಷತ್ರ ಗೋಚರಿಸುತ್ತಿದ್ದಂತೆ ಬಹು ಕಾಲದಿಂದಲೂ ನಡೆದುಕೊಂಡು ಬಂದಿರುವ ಪರಂಪರೆಯಂತೆ ನಗರದ ಕಿಲ್ಲಾ ಓಣಿಯಲ್ಲಿ ದಲಿತ ಕುಟುಂಬದಿಂದ ತಂದ ಕಿಚ್ಚಿನಿಂದ ಮೊದಲು ಕಾಮದಹನ ಮಾಡಲಾಯಿತು. ತನ್ಮೂಲಕ ಹೋಳಿ ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.
    ತುರಾಯಿ ಹಲಗೆ, ಗಂಟೆನಾದ, ಮಹಿಳೆಯರ ಆರತಿ, ನಿಶಾನೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಮೊದಲು ಕಿಲ್ಲಾದಲ್ಲಿ ಕಾಮದಹನ ಮಾಡಲಾಯಿತು.

    ನಂತರ ಹಳಪೇಟೆ, ಜೈನ್‌ಪೇಟೆ, ಹೊಸಪೇಟೆ, ವೆಂಕಟಪೇಟೆಗಳಲ್ಲಿ ಕಾಮದಹನ ನಡೆಯಿತು. ಮಧ್ಯಾಹ್ನದಿಂದ ರಾತ್ರಿವರೆಗೂ ಬಾಗಲಕೋಟೆ, ವಿದ್ಯಾಗಿರಿ ಹಾಗೂ ನವನಗರದ ವಿವಿಧ ಕಡೆಗಳಲ್ಲಿ ಕಾಮದಹನ ಕಾರ್ಯ ಜರುಗಿತು. ಕಾಮದಹನ ವೇಳೆ ಯುವಪಡೆ ವಿಶಿಷ್ಟ ರೀತಿಯಲ್ಲಿ ಹಲಗೆ ಬಾರಿಸುತ್ತ ಬಾಯಿ ಬಡಿದುಕೊಳ್ಳುವ ಮೂಲಕ ಹೋಳಿ ಆಚರಣೆ ಮೆರುಗು ಹೆಚ್ಚಿಸಿದರು. ಬೆಳಗ್ಗೆಯಿಂದಲೇ ನಗರದ ಪ್ರಮುಖ ಗಲ್ಲಿ ಗಲ್ಲಿಗಳಲ್ಲಿ ಯುವಕರು, ಬಾಲಕರು ಸ್ಪರ್ಧೆಗೆ ಇಳಿದವರಂತೆ ಹಲಗೆ ಬಾರಿಸಿ ಗಮನ ಸೆಳೆದರು.

    ಇನ್ನು ಮಾ.29, 30, 31 ರಂದು ನಗರದಲ್ಲಿ ಬಣ್ಣದಾಟ ನಡೆಯಲಿದೆ. ಕೋವಿಡ್ ಕಾರಣಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಬಣ್ಣದ ಬಂಡಿಗಳ ಮೆರವಣಿಗೆ ನಿಷೇಧಿಸಲಾಗಿದೆ. ಸಾಂಪ್ರದಾಯಕವಾಗಿ ಮಾತ್ರ ಬಣ್ಣದಾಟ ಆಚರಣೆ ನಡೆಯಲಿದೆ. ಓಕುಳಿಯ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಣ್ಣಗಳ ಮಾರಾಟ ಭರಪೂರ ನಡೆದಿದೆ. ಪಾಲಕರು ಮಕ್ಕಳಿಗಾಗಿ ಪಿಚಕಾರಿ ಕೊಂಡುಕೊಳ್ಳುವ ದೃಶ್ಯವೂ ಸಾಮಾನ್ಯವಾಗಿತ್ತು. ಯುವಕರು ಹೆಚ್ಚಿನ ಪ್ರಮಾಣದಲ್ಲಿ ನಾನಾ ಬಣ್ಣಗಳನ್ನು ಖರೀದಿಗೆ ಮುಗಿಬಿದ್ದಿದ್ದರು.

    ದೇಶದಲ್ಲಿ ಕೋಲ್ಕತ ನಂತರದಲ್ಲಿ ಅತಿ ಹೆಚ್ಚು ಬಣ್ಣದೋಕಳಿಗೆ ಹೆಸರುವಾಸಿಯಾಗಿರುವ ಬಾಗಲಕೋಟೆಯಲ್ಲಿ ಸೋಮವಾರ ಬೆಳಗ್ಗೆಯಿಂದ ಅಧಿಕೃತವಾಗಿ ರಂಗಿನಾಟ ರಂಗೇರಲಿದೆ. ಸೋಗಿನ ಬಂಡಿಗಳ ಮೆರವಣಿಗೆ ಪ್ರತಿ ವರ್ಷದಂತೆ ಈ ವರ್ಷವು ನಡೆಯಲಿದೆ. ಕೋವಿಡ್ ಬಗ್ಗೆ ಆತಂಕ ಇರುವ ಕಾರಣಕ್ಕೆ ಹೊರ ಜಿಲ್ಲೆ, ರಾಜ್ಯದ ಜನರು ನಗರಕ್ಕೆ ಬಹುತೇಕ ಆಗಮಿಸುವುದಿಲ್ಲ. ನಗರ ಜನತೆಗೆಯೂ ಬೇರೆಡೆ ಪ್ರವಾಸ ಕೈಗೊಳ್ಳುವುದು ರದ್ದು ಮಾಡಿದ್ದಾರೆ. ಮನೆಯಲ್ಲಿ ಇದ್ದುಕೊಂಡು ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲಿದ್ದಾರೆ. ಕೇವಲ ಆಯಾ ಓಣಿಗಳಲ್ಲಿ ಬಣ್ಣದ ಸಂಭ್ರಮ ಮೇಳೈಸಲಿದೆ. ತುರಾಯಿ ಹಲಗೆ, ನಿಶಾನೆಗಳ ಸಂಚಾರ ಯಥಾ ಪ್ರಕಾರ ಮೂರು ದಿನ ಇರಲಿದೆ.

    ಮೂರು ದಿನ ಅಕ್ಷರಶಃ ಕೋಟೆನಗರಿ ಬಂದ್
    ಮೊದಲ ದಿನ ಕಿಲ್ಲಾ, 2ನೇ ದಿನ ಹಳಪೇಟೆ, ಜೈನ್‌ಪೇಟೆ ಮತ್ತು ವೆಂಕಟಪೇಟೆ ಹಾಗೂ 3ನೇ ದಿನ ಹೊಸಪೇಟೆದಲ್ಲಿ ಬಣ್ಣದಾಟ ನಡೆಯಲಿದೆ. ಮೂರು ದಿನ ಕೋಟೆ ನಗರಿ ಅಕ್ಷರಶಃ ಸ್ವಯಂ ಬಂದ್‌ನಂತೆ ಗೋಚರಿಸಲಿದೆ. ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧಗೊಳ್ಳಲಿವೆ. ಸರ್ಕಾರಿ ಕಚೇರಿಗಳಿಗೆ ಅಧಿಕೃತವಾಗಿ ರಜೆ ಇಲ್ಲದಿದ್ದರೂ ಎಲ್ಲೆಲ್ಲೂ ಓಕುಳಿಯ ರಂಗು ಆವರಿಸಿರುವುದರಿಂದ ಅಲ್ಲಿಯೂ ಸಹ ಜನದಟ್ಟಣೆ ಸಂಪೂರ್ಣ ಇಳಿಮುಖವಾಗುತ್ತದೆ. ಬಸ್ ನಿಲ್ದಾಣ, ವಲ್ಲಭಭಾಯಿ ಚೌಕ್, ಬಸವೇಶ್ವರ ವೃತ್ತ ಸೇರಿ ಪ್ರಮುಖ ಜನದಟ್ಟಣೆ ಪ್ರದೇಶಗಳು ಬಿಕೋ ಎನ್ನಲಿವೆ. ನಗರದಲ್ಲಿ ವಹಿವಾಟು ನಡೆಯದೆ ಇರುವುದರಿಂದ ಸುತ್ತಮುತ್ತಲೂ ಗ್ರಾಮಗಳಿಂದ ಜನರು ಸಹ ನಗರದ ಕಡೆ ಆಗಮಿಸುವುದು ಬಲು ಅಪರೂಪ. ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts