More

    ಜ್ಞಾನ ದೇಗುಲಗಳಲ್ಲಿ ಸಂಭ್ರಮ

    ಬಾಗಲಕೋಟೆ: ಮಹಾಮಾರಿ ಕೋವಿಡ್ ಸೋಂಕಿನ ಆರ್ಭಟಕ್ಕೆ ಬಂದ್ ಆಗಿದ್ದ ಶಾಲೆ, ಕಾಲೇಜುಗಳು ಶುಕ್ರವಾರ ಆರಂಭಗೊಂಡವು. ಜಿಲ್ಲೆಯ ಬಹುತೇಕ ಜ್ಞಾನ ದೇಗುಲುಗಳಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿತು. ಬಾಗಲಕೋಟೆ, ಮುಧೋಳ, ಬೀಳಗಿ, ಜಮಖಂಡಿ, ಬಾದಾಮಿ, ಗುಳೇದಗುಡ್ಡ, ಇಳಕಲ್ಲ, ಹುನಗುಂದ, ರಬಕವಿ-ಬನಹಟ್ಟಿ, ತೇರದಾಳ, ಲೋಕಾಪುರ, ಕಲಾದಗಿ ಸೇರಿದಂತೆ ಎಲ್ಲ ಭಾಗದಲ್ಲಿ ಮಕ್ಕಳು ಶಾಲೆ, ಕಾಲೇಜುಗಳತ್ತ ಹೆಜ್ಜೆ ಹಾಕಿದರು. ಮೊದಲ ದಿನ ಪೂರ್ಣ ಪ್ರಮಾಣದಲ್ಲಿ ಹಾಜರಾತಿ ಕಂಡು ಬರಲಿಲ್ಲ.

    ಮಧುವನಗಿತ್ತಿಯಂತೆ ಶೃಂಗಾರ
    ಸರ್ಕಾರಿ, ಅನುದಾನಿತ, ಅನುದಾನ ರಹಿತ, ಸರ್ಕಾರಿ, ಖಾಸಗಿ ಕಾಲೇಜುಗಳನ್ನು ತಳಿರು, ತೋರಣ, ರಂಗೋಲಿ ಬಿಡಿಸಿ ಶೃಂಗರಿಸಲಾಗಿತ್ತು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಆರತಿ ಮಾಡಿ ಬರಮಾಡಿಕೊಂಡರೆ, ಹಲವು ಶಾಲೆಗಳಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಚಪ್ಪಾಳೆ ತಟ್ಟಿ ಶುಭ ಕೋರಲಾಯಿತು. ಶಿಕ್ಷಕರು, ಉಪನ್ಯಾಸಕರು ಕೂಡ ಉತ್ಸಾಹದಿಂದ ಆಗಮಿಸಿದ್ದರು. ಪ್ರಥಮ ತರಗತಿಯಲ್ಲಿ ಲಾಕ್‌ಡೌನ್ ಸಂದರ್ಭದ ದಿನಗಳು, ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಕಳೆದ ಕ್ಷಣಗಳ ಬಗ್ಗೆ ಮೇಲುಕು ಹಾಕಲಾಯಿತು.

    ಕೋವಿಡ್ ಜಾಗೃತಿ
    ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ 2020 ಮಾ.15 ರಿಂದ ಶಾಲೆ, ಕಾಲೇಜುಗಳನ್ನು ಬಂದ್ ಮಾಡಿತ್ತು. ಆನ್‌ಲೈನ್ ತರಗತಿ, ವಿದ್ಯಾಗಮನ ಮೂಲಕ ಶಿಕ್ಷಣಕ್ಕೆ ಒತ್ತು ನೀಡಲಾಗಿತ್ತು. ಇದೀಗ ಕೋವಿಡ್ ವೈರಸ್, ರೂಪಾಂತರ ಭಯದ ನಡುವೆ ಬರೋಬ್ಬರಿ 9 ತಿಂಗಳು 24 ದಿನಗಳ ಬಳಿಕ ಜ್ಞಾನಗಳು ಗುರು, ಶಿಷ್ಯರ ಸಮಾಗಮದ ಸಂಭ್ರಮ ಮೇಳೈಸಿತು. ಪ್ರತಿಯೊಂದು ಶಾಲಾ, ಕಾಲೇಜುಗಳಲ್ಲಿ ಕೋವಿಡ್ ಮುಂಜಾಗೃತಿ ತೆಗೆದುಕೊಳ್ಳಲಾಗಿತ್ತು.

    ಶಾಲಾ, ಕಾಲೇಜುಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತು. ಮಕ್ಕಳು ಕೂಡ ಅಷ್ಟೇ ಜ್ಞಾನ ದೇಗುಲಕ್ಕೆ ಆಗಮಿಸುತ್ತಲೆ ಗುರುಗಳಿಗೆ, ವಿದ್ಯಾ ದೇಗುಲಕ್ಕೆ ನಮಸ್ಕರಿಸಿ ತರಗತಿಗೆ ತೆರಳಿದ ದೃಶ್ಯ ಕಂಡು ಬಂದಿತು.

    ಸರ್ಕಾರದ ನಿರ್ದೇಶನದಂತೆ 1 ರಿಂದ 5 ತರಗತಿ ಹೊರತು ಪಡಿಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಕ್ಕೊಂದು ತರಗತಿ ನಡೆಯಲಿವೆ. ಅಂದರೆ 6 ತರಗತಿ ಒಂದು ದಿನ, 7 ನೇ ತರಗತಿ ಮರುದಿನ, ನಂತರ ದಿನ 8 ತರಗತಿ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ರತಿ ದಿನ ತರಗತಿಗಳು ನಡೆಯುತ್ತವೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 15 ಮಕ್ಕಳು ಒಳಗೊಂಡು ಒಂದು ತಂಡ ರಚಿಸಲಾಗಿದ್ದು, ಪ್ರತಿ ತಂಡಕ್ಕೆ ಪ್ರತ್ಯೇಕ ತರಗತಿಗಳು ನಡೆಸಲಾಗುತ್ತದೆ.

    ಜಿಲ್ಲೆಯಲ್ಲಿ ಕೋವಿಡ್ ಮುಂಜಾಗೃತೆ ತೆಗೆದುಕೊಂಡು 6 ರಿಂದ 10 ನೇ ತರಗತಿ ವರೆಗೆ ತರಗತಿಗಳನ್ನು ಆರಂಭಿಸಲಾಗಿದೆ. ಸರ್ಕಾರ ಎಲ್ಲ ಮಾರ್ಗ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಜಿಲ್ಲೆಯಲ್ಲಿ 35000 ಎಸ್ಸೆಸ್ಸೆಲ್ಸಿ ಮಕ್ಕಳು ಇದ್ದು, ಮೊದಲ ದಿನ ಶೇ.39.5 ರಷ್ಟು ಹಾಜರಾತಿ ಕಂಡು ಬಂದಿದೆ.
    ಶ್ರೀಶೈಲ ಬಿರಾದಾರ, ಡಿಡಿಪಿಐ ಬಾಗಲಕೋಟೆ

    ಸರ್ಕಾರದ ಆದೇಶದಂತೆ ಕೋವಿಡ್ ನಿಯಮದಂತೆ ಕಾಲೇಜುಗಳು ಆರಂಭಗೊಂಡಿವೆ. ಉತ್ಸಾಹದಿಂದ ಮಕ್ಕಳು, ಉಪನ್ಯಾಸಕರು ಆಗಮಿಸಿದ್ದರು. 21876 ದ್ವಿತೀಯ ಪಿಯು ವಿದ್ಯಾರ್ಥಿಗಳು ಇದ್ದಾರೆ. ಈ ಪೈಕಿ 7422 ವಿದ್ಯಾರ್ಥಿಗಳು ಮೊದಲ ದಿನ ಹಾಜರಾಗಿದ್ದರು. ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಎಲ್ಲೆಡೆ ಸಂಭ್ರಮದ ವಾತಾವರಣ ಕಂಡು ಬಂದಿತು.
    ಶಶಿಧರ ಪೂಜಾರಿ, ಪಿಯು ಡಿಡಿ ಬಾಗಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts