More

    ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಡಿಸಿ ಆದೇಶ

    ಬಾಗಲಕೋಟೆ: ಜಿಲ್ಲೆಯಲ್ಲಿ ಮಲಪ್ರಭಾ ಹಾಗೂ ಘಟಪ್ರಭಾ ನದಿ ತೀರಗಳಲ್ಲಿನ ಅತಿಕ್ರಮವನ್ನು ತೆರವು ಕಾರ್ಯಾಚರಣೆಗೆ ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

    ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ತೀರದಲ್ಲಿ ಆಗಿರುವ ಅತಿಕ್ರಮಣವನ್ನು ಗುರುತಿಸಿ ತೆರವುಗೊಳಿಸಲು ನೀರಾವರಿ ಮತ್ತು ಕಂದಾಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸುವ ಕುರಿತು ಬೆಳಗಾವಿ ವಿಭಾಗ ಮಟ್ಟದಲ್ಲಿ ಈಗಾಗಲೇ ನಡೆದ ಸಭೆಯಲ್ಲಿ ತಿಳಿಸಿರುವಂತೆ ತೆರವು ಕಾರ್ಯಾಚರಣೆಗೆ ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡಿದ್ದಾರೆ.

    ಜಿಲ್ಲಾಧಿಕಾರಿ ಸಮಿತಿ ಅಧ್ಯಕ್ಷರಾಗಿದ್ದು, ಮಲಪ್ರಭಾ, ಘಟಪ್ರಭಾ ಯೋಜನೆಯ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರು ಸಮಿತಿ ಸದಸ್ಯರಾಗಿರುತ್ತಾರೆ. ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ.

    ಪ್ರವಾಹದಿಂದ ಉಂಟಾಗುತ್ತಿರುವ ವಿಪತ್ತುಗಳನ್ನು ನಿವಾರಿಸಲು ಪರಿಣಾಮಕಾರಿ ಯೋಜನೆಯನ್ನು ರೂಪಿಸುವುದು ಸಮಿತಿಯ ಮುಖ್ಯ ಉದ್ದೇಶವಾಗಿದ್ದು, ನದಿ ಮತ್ತು ನದಿ ತೀರಗಳಲ್ಲಿ ಆಗಿರುವ ಅತಿಕ್ರಮಣಗಳನ್ನು ಗುರುತಿಸಲು ಆಧುನಿಕ ತಂತ್ರಜ್ಞಾನದಿಂದ ಶೀಘ್ರ ಸರ್ವೇ ಕೈಗೊಳ್ಳಬೇಕು. ಪ್ರವಾಹ, ಅತಿವೃವೃಷ್ಟಿ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿಯಲು ಅಡಚಣೆ ಉಂಟು ಮಾಡುತ್ತಿರುವ ಹಳೆಯ ಮತ್ತು ಶಿಥಿಲಗೊಂಡಿರುವ ಆಣೆಕಟ್ಟು, ಅಧಿಕೃತ ಸಾಗುವಳಿ ತೆರವುಗೊಳಿಸಲು ಕ್ರಮ ಕೈಗೊಳ್ಳುವುದು ಸಮಿತಿ ಮುಖ್ಯ ಕರ್ತವ್ಯವಾಗಿದೆ.

    ನೀರಾವರಿ, ಲೋಕೋಪಯೋಗಿ, ಕಂದಾಯ, ಭೂಮಾಪನ, ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಇಲಾಖೆಗಳು ಒಂದುಗೂಡಿ ಸಹಕಾರ ಮತ್ತು ಸಹಯೋಗದೊಂದಿಗೆ ಕಾರ್ಯನಿರ್ವಹಿಸಿ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಅತಿಕ್ರಮಣ ತೆರವುಗೊಳಿಸಿದ ನಂತರ ಭವಿಷ್ಯದಲ್ಲಿ ಪುನಃ ಅತಿಕ್ರಮಣವಾಗದಂತೆ ಮೇಲ್ವಿಚಾರಣೆ ಮಾಡಲಿದ್ದಾರೆ. ಕಲುಷಿತ, ಕೊಳಚೆ ನೀರನ್ನು ಶುದ್ಧೀಕರಣಗೊಳಿಸದೆ ನದಿಗಳಿಗೆ ಹರಿಬಿಡುವುದನ್ನು ತಡೆಗಟ್ಟುವುದು ಮತ್ತು ಹರಿಬಿಟ್ಟಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ನದಿ ತೀರದಲ್ಲಿನ ಗ್ರಾಮ ಮತ್ತು ನಗರ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts