More

    ಗ್ರಾಮ ಸ್ವರಾಜ್ಯ ಕನಸು ಸಾಕಾರಗೊಳಿಸಿ

    ಬಾಗಲಕೋಟೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತವರು ಧೃತಿಗೆಡಬಾರದು. ಗೆದ್ದವರ ಸದಸ್ಯರ ಮೇಲೆ ದೊಡ್ಡ ಜವಾಬ್ದಾರಿಯಿದ್ದು, ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮ ವಹಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ನಗರದ ಚರಂತಿಮಠದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಜನ ಸೇವಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಗಳ ಅಭಿವೃದ್ಧಿಗೆ ಆಡಳಿತ ವಿಕೇಂದ್ರಿಕರಣ ಆಗಬೇಕು ಎಂದು ಕನಸು ಕಟ್ಟಿಕೊಂಡವರು ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ. ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೊಳಿಸಿ ಮಾದರಿ ಕಾರ್ಯ ಮಾಡಿದರು. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗ್ರಾಮೀಣಾಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದ್ದಾರೆ ಎಂದರು.

    ಈ ಮೊದಲು ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಮಾತ್ರ ಇತ್ತು. ಇದನ್ನು ಕುಲಗೇಡಿಸಿದವರು ಕಾಂಗ್ರೆಸ್ ಪಕ್ಷದವರು. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ತಾಲೂಕು ಪಂಚಾಯಿತಿ ಅಸ್ತಿತ್ವಕ್ಕೆ ಬಂದಿತ್ತು. ಈ ಥ್ರಿ ಟಾಯರ್ ವ್ಯವಸ್ಥೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ರಾಜ್ಯದಲ್ಲಿ ಈ ವ್ಯವಸ್ಥೆ ಬದಲಾಯಿಸಬೇಕು. ಮೊದಲಿನಂತೆ ಗ್ರಾಪಂ, ಜಿಪಂ ಮಾತ್ರ ಇಡಬೇಕು ಎಂದು ಸರ್ಕಾರಕ್ಕೆ ವಿನಂತಿ ಮಾಡಿದ್ದೇನೆ ಎಂದು ತಿಳಿಸಿದರು.

    ನೂತನ ಸದಸ್ಯರು ಗ್ರಾಮಗಳಲ್ಲಿ ಕೆರೆ, ಬಾಂದಾರ, ಬಾವಿ ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ಎನ್‌ಆರ್‌ಜಿಯಲ್ಲಿ ಉತ್ತಮ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಲಪ್ರಭಾ ನದಿ ಒತ್ತುಯಾಗಿದ್ದರಿಂದಲೇ ಪ್ರವಾಹ ಸೃಷ್ಟಿಯಾಗುತ್ತಿದೆ. ಇದೇ ರೀತಿ ಗ್ರಾಮಗಳಲ್ಲಿ ಸರ್ಕಾರಿ ಭೂಮಿ, ಕೆರೆ ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸುವ ಕೆಲಸವಾಗಬೇಕು ಎಂದರು.

    60 ವರ್ಷದಲ್ಲಿ ಕಾಂಗ್ರೆಸ್ ಪಕ್ಷವು ಯಾವ ಅಭಿವೃದ್ಧಿ ಮಾಡಿಲ್ಲ. ನೆಹರು ಹಾಗೂ ಇಂದಿರಾ ಗಾಂಧಿ ಮನೆತನದ ದುರಾಡಳಿತದಿಂದ ಇಂದು ದೇಶದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ನೆಲೆಸಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ದೇಶಕ್ಕೆ 60 ವರ್ಷಗಳಿಂದ ಆಡಳಿತ, ಅಭಿವೃದ್ಧಿಗೆ ಗರ ಬಡಿದಿತ್ತು. ನರೇಂದ್ರ ಮೋದಿ ಕೇವಲ 6 ವರ್ಷದಲ್ಲಿ ದೇಶಕ್ಕೆ ಹೊಸ ದಿಕ್ಕು, ಕಾಯಕಲ್ಪ ನೀಡಿದ್ದಾರೆ. 14 ನೇ ಹಣಕಾಸು ಆಯೋಗದಲ್ಲಿ ಪ್ರತಿ ಗ್ರಾಪಂಗೆ 50 ಲಕ್ಷ ರೂ. ವರೆಗೆ ಅನುದಾನ ಬರುತ್ತಿತ್ತು. 15ನೇ ಹಣಕಾಸು ಆಯೋಗ ಜಾರಿಗೊಂಡ ಬಳಿಕ ಪ್ರತಿ ಗ್ರಾಪಂಗಳಿಗೆ 1 ಕೋಟಿ ರೂ. ಅನುದಾನ ಬರಲಿದೆ. ಇದು ಮೋದಿ ಅವರ ತಾಕತ್ತು. ಅಧಿಕಾರಿಗಳು ಭ್ರಷ್ಟಾಚಾರದ ಮೂಲಕ ದಾರಿ ತಪ್ಪಿಸುತ್ತಾರೆ. ಎಚ್ಚರದಿಂದ ಕಾರ್ಯನಿರ್ವಹಿಸಬೇಕು. ಪ್ರತಿ ಮನೆಗೂ ನಲ್ಲಿ ನೀರು ಕೊಡಬೇಕು, ಬಡವರಿಗೆ ಸೂರು ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಮೋದಿ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದು, ಪಂಚಾಯಿತಿಗಳಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

    ಶಾಸಕ ಸಿದ್ದು ಸವದಿ, ಸಂಚಾಲಕ ತುಳಸಿ ಮುನಿರಾಜುಗೌಡ, ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ಪಿ.ಎಚ್. ಪೂಜಾರ, ಶ್ರೀಕಾಂತ ಕುಲಕರ್ಣಿ, ರಾಜಶೇಖರ ಶೀಲವಂತ, ಮಲ್ಲಿಕಾರ್ಜುನ ಬನ್ನಿ, ನಾರಾಯಣಸಾ ಭಾಂಡಗೆ, ಮುಖಂಡರಾದ ರಾಜು ನಾಯ್ಕರ, ರಾಜಶೇಖರ ಮುದೆನೂರ, ಬಸವರಾಜ ಅವರಾದಿ ಇತರರು ಇದ್ದರು.

    ಭಾವುಕರಾದ ಚರಂತಿಮಠ
    ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 22 ಗ್ರಾಪಂಗಳಲ್ಲಿ 16 ರಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಈ ಸಾರಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಇದಕ್ಕೆ ದಿ.ಅನಂತಕುಮಾರ, ಸಿಎಂ ಯಡಿಯೂರಪ್ಪ ಅವರ ಶ್ರಮ ಕಾರಣ. ಸೈಕಲ್ ಮೇಲೆ ರಾಜ್ಯವನ್ನು ಸುತ್ತಾಡಿ ಪಕ್ಷ ಕಟ್ಟಿದರು. ನನ್ನಂತಹ ಅನೇಕರಿಗೆ ದಿ.ಅನಂತಕುಮಾರ ರಾಜಕೀಯ ಗುರುವಾಗಿದ್ದರು ಎಂದು ಹೇಳುತ್ತಲೆ ವೇದಿಕೆ ಮೇಲೆ ಶಾಸಕ ವೀರಣ್ಣ ಚರಂತಿಮಠ ಭಾವುಕರಾದರು.

    ಗ್ರಾಮ ಪಂಚಾಯಿತಿ ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಭದ್ರ ಬುನಾದಿ. ಅಮೆರಿಕದಂತಹ ಮುಂದುವರಿದ ರಾಷ್ಟ್ರದಲ್ಲಿ ಇಂತಹ ಮಾದರಿ ವ್ಯವಸ್ಥೆ ಇಲ್ಲ. ಇನ್ನು ಪ್ಲಾಸ್ಟಿಕ್ ಕೆರೆ, ಸಮುದ್ರ ಸೇರುತ್ತಿರುವ ಕಾರಣ ಜಲಚರಗಳು ಅಷ್ಟೆ ಅಲ್ಲದೆ, ಮನುಷ್ಯರ ದೇಹದೊಳಗೆ ವಿವಿಧ ಪದಾರ್ಥಗಳ ಮೂಲಕ ವಿಷಕಾರಿ ಪ್ಲಾಸ್ಟಿಕ್ ಸೇರುತ್ತಿದೆ. ಹೀಗಾಗಿ ನೂತನ ಸದಸ್ಯರು ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಗ್ರಾಮ ಮಾಡಲು ಪಣತೊಡಬೇಕು. ಜಲ ಜಾಗೃತಿ, ಪರಿಸರ ಜಾಗೃತಿ ಮೂಡಿಸಬೇಕು.
    ತೇಜಸ್ವಿನಿ ಅನಂತಕುಮಾರ ಬಿಜೆಪಿ ಉಪಾಧ್ಯಕ್ಷೆ

    ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಉತ್ತಮ ಸಾಧನೆ ಮಾಡಿದೆ. ಪಕ್ಷದ ಕಾರ್ಯಕರ್ತರು ಜನ ಸೇವಕರಾಗಿ ಆಯ್ಕೆಯಾಗಿದ್ದು, ಗ್ರಾಮೀಣ ಅಭಿವೃದ್ಧಿ ಒತ್ತು ನೀಡಬೇಕು. ಜಿಲ್ಲೆಯ 191 ಗ್ರಾ.ಪಂಗಳಲ್ಲಿ 130 ಕ್ಕೂ ಹೆಚ್ಚು ಗ್ರಾ.ಪಂಗಳಲ್ಲಿ ಅಧಿಕಾರಕ್ಕೆ ಬರಲಿದೆ.
    – ಶಾಂತಗೌಡ ಪಾಟೀಲ ಬಿಜೆಪಿ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts