More

    ನದಿ ಪಾತ್ರಗಳ ಜನ-ಜೀವನ ಅಸ್ತವ್ಯಸ್ತ

    ಬಾಗಲಕೋಟೆ: ಜಿಲ್ಲೆಯಲ್ಲಿ ಮೂರು ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ನದಿಗಳಲ್ಲಿ ನೀರಿನ ಅಬ್ಬರ ಕ್ಷಿಣಿಸಿಲ್ಲ. ಇದರಿಂದ ಜನ-ಜಾನುವಾರುಗಳ ಪರದಾಟ ಮುಗಿಲು ಮುಟ್ಟಿದೆ. ಕೃಷ್ಣೆಯೂ ವಿರಾಟರೂಪ ತಾಳಿದೆ. ಕೋಟೆನಾಡಿನ ನದಿಗಳ ಪಾತ್ರಗಳ ಗ್ರಾಮಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

    ಬುಧವಾರ ವರದಿಯಂತೆ ಘಟಪ್ರಭಾ ನದಿಗೆ 44,043 ಕ್ಯೂಸೆಕ್, ಮಲಪ್ರಭಾ ನದಿಗೆ 7,594 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಕಾರಣ ಎರಡು ನದಿಗಳ ಪಾತ್ರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 4,10,000 ಕ್ಯೂಸೆಕ್ ಹರಿಬಿಡಲಾಗಿದ್ದು, ಮತ್ತೆ ಆತಂಕ ಮನೆ ಮಾಡಿದೆ.

    ಮುಧೋಳ ತಾಲೂಕಿನ 36, ರಬಕವಿ-ಬನಹಟ್ಟಿ ತಾಲೂಕಿನ 8, ಜಮಖಂಡಿ ತಾಲೂಕಿನ 11, ಬಾಗಲಕೋಟೆ ತಾಲೂಕಿನ 1, ಬಾದಾಮಿ ತಾಲೂಕಿನ 4 ಸೇರಿ ಒಟ್ಟು 60 ಗ್ರಾಮಗಳು ಜಿಲ್ಲೆಯಲ್ಲಿ ಪ್ರವಾಹಕ್ಕೆ ಬಾಧಿತವಾಗಿವೆ. ಪ್ರವಾಹದಿಂದ ಯಾವುದೇ ಜೀವ ಹಾನಿಯಾಗಿಲ್ಲ. ಇಲ್ಲಿಯವರೆಗೆ 84 ಮನೆಗಳು ಅತಿವೃಷ್ಟಿಯಿಂದ ಭಾಗಶಃ ಹಾನಿಯಾಗಿವೆ. ಪ್ರವಾಹದಿಂದ ಹಾನಿಯಾದ ಮನೆಗಳ ಬಗ್ಗೆ ವರದಿ ತಯಾರಿಸಲಾಗುತ್ತಿದೆ. ಮುಧೋಳ, ರಬಕವಿ-ಬನಹಟ್ಟಿ, ಜಮಖಂಡಿ ಸೇರಿ ವಿವಿಧ ತಾಲೂಕಿನಲ್ಲಿ ಗ್ರಾಮೀಣ, ನಗರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಸೇತುವೆಗಳು ಜಲಾವೃತವಾಗಿದ್ದರಿಂದ ಸಾರಿಗೆ ಬಸ್ ಹಾಗೂ ಇತರ ವಾಹನಗಳು ಅನ್ಯ ಮಾರ್ಗದ ಮೂಲಕ ಸಂಚರಿಸುತ್ತಿವೆ.

    ಕಾಳಜಿ ಕೇಂದ್ರಗಳಲ್ಲಿ ಆಶ್ರಯ
    ಸಂತ್ರರಿಗೆ ಹಾಗೂ ಜಾನುವಾರುಗಳಿಗೆ ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರ ಸ್ಥಾಪಿಸಿ ಆಶ್ರಯ ಕಲ್ಪಿಸಲಾಗುತ್ತಿದೆ. ರಬಕವಿ-ಬನಹಟ್ಟಿ ತಾಲೂಕಿನಲ್ಲಿ 1,294 ಕುಟುಂಬಗಳ 6,499 ಜನರನ್ನು ಸ್ಥಳಾಂತರ ಮಾಡಲಾಗಿದೆ. 15 ಕಾಳಜಿ ಕೇಂದ್ರಗಳಲ್ಲಿ 2,241 ಜನರು ಹಾಗೂ 2,579 ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಮುಧೋಳ ತಾಲೂಕಿನಲ್ಲಿ 8,36 ಕುಟುಂಬಗಳ 3,556 ಜನರ ಸ್ಥಳಾಂತರ ಮಾಡಲಾಗಿದೆ. 18 ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, 2,098 ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ಜಮಖಂಡಿ ತಾಲೂಕಿನಲ್ಲಿ 4,079 ಕುಟುಂಬಗಳ 15,883 ಜನರನ್ನು ಸ್ಥಳಾಂತರಿಸಲಾಗಿದೆ. 18 ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, 4,704 ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ಬಾಗಲಕೋಟೆ ತಾಲೂಕಿನಲ್ಲಿ 30 ಕುಟುಂಬಗಳ 138 ಜನರನ್ನು ಸ್ಥಳಾಂತರ ಮಾಡಲಾಗಿದೆ. 2 ಕಾಳಜಿ ಕೇಂದ್ರಗಳಲ್ಲಿ 130 ಜನ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು 6,239 ಕುಟುಂಬಗಳ 26,076 ಜನರನ್ನು ಸ್ಥಳಾಂತರ ಮಾಡಲಾಗಿದ್ದು, ಸ್ಥಾಪಿಸಲಾಗಿರುವ 53 ಕಾಳಜಿ ಕೇಂದ್ರಗಳಲ್ಲಿ 9,173 ಜನ ನಿರಾಶ್ರಿತರಿಗೆ ಆಶ್ರಯ ಒದಗಿಸಲಾಗಿದೆ. 10,356 ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದ್ದು, 100 ಟನ್ ಮೇವು ನೀಡಲಾಗಿದೆ. ಈ ವರೆಗೆ 8 ಸಣ್ಣ, 8 ದೊಡ್ಡ ಸೇರಿ ಒಟ್ಟು 16 ಜಾನುವಾರುಗಳು ಮೃತಪಟ್ಟಿವೆ.

    ನೀರು ಪಾಲಾಗಿದೆ ಬೆಳೆಗಳು..
    ಪ್ರಾಥಮಿಕ ವರದಿಯಂತೆ ಪ್ರವಾಹದಿಂದ ಜಿಲ್ಲೆಯಲ್ಲಿ 8,979 ಹೆಕ್ಟೇರ್ ಪ್ರದೇಶದ ಕೃಷಿ, 796 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ವಿದ್ಯುತ್ ಕಂಬ, ರಸ್ತೆ, ಸೇತುವೆ ಹಾಗೂ ಇತರ ಮೂಲ ಸೌಕರ್ಯ ಹಾನಿ ಬಗ್ಗೆ ನಿಖರವಾದ ಮಾಹಿತಿ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಜಿಲ್ಲೆಯಲ್ಲಿ ಪ್ರವಾಹ ಉಂಟಾದ ಪ್ರದೇಶಗಳ ಮೇಲೆ ನಿಗಾ ವಹಿಸಲಾಗಿದೆ. ಜನ, ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಜಾನುವಾರುಗಳಿಗೆ ಮೇವು ಒದಗಿಸಲಾಗುತ್ತಿದೆ. ಪ್ರವಾಹ ಇಳಿದ ಬಳಿಕ ಹಾನಿ ಬಗ್ಗೆ ನಿಖರವಾದ ಮಾಹಿತಿ ದೊರೆಯಲಿದೆ. ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಸಹಾಯ ಮಾಡುತ್ತಿದ್ದಾರೆ. ಇದುವರೆಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ.
    ಕೆ.ರಾಜೇಂದ್ರ, ಜಿಲ್ಲಾಧಿಕಾರಿ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts