More

    ಪ್ರಶ್ನೆ ಪತ್ರಿಕೆ ಸೋರಿಕೆ: ಎಫ್‌ಡಿಎ ಪರೀಕ್ಷಾರ್ಥಿಗಳ ಪರದಾಟ

    ಬಾಗಲಕೋಟೆ: ಎಫ್‌ಡಿಎ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಭಾನುವಾರ ನಡೆಯಬೇಕಿದ್ದ ಪರೀಕ್ಷೆಗಳು ರದ್ದು ಆಗಿದ್ದರಿಂದ ಪರೀಕ್ಷೆ ಬರೆಯಲು ಬಾಗಲಕೋಟೆಗೆ ಬಂದಿದ್ದ ವಿವಿಧ ಜಿಲ್ಲೆಗಳ ಪರೀಕ್ಷಾರ್ಥಿಗಳು ಪರದಾಡಿದರು.

    ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಪರೀಕ್ಷೆ ರದ್ದು ಮಾಡಲಾಗಿದೆ ಎಂದು ಶನಿವಾರ ರಾತ್ರಿಯೇ ಪ್ರಕಟಿಸಿತ್ತು. ಆದರೆ, ದೂರದ ಜಿಲ್ಲೆಗಳ ವಿದ್ಯಾರ್ಥಿಗಳು ರಾತ್ರಿಯೇ ಬಾಗಲೋಟೆಗೆ ಬಂದಿದ್ದರಿಂದ ಅನೇಕ ಪರೀಕ್ಷಾರ್ಥಿಗಳು ಬೆಳಗ್ಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ನಗರದ ಬಿವಿವಿ ಸಂಘದ ಕಾಲೇಜುಗಳಲ್ಲಿದ್ದ ಪರೀಕ್ಷಾ ಕೇಂದ್ರಗಳ ಕಡೆಗೆ ಹೆಜ್ಜೆಹಾಕಿದ್ದರು. ಆದರೆ, ಪ್ರವೇಶ ದ್ವಾರದಲ್ಲಿ ಪರೀಕ್ಷೆಗಳು ರದ್ದಾಗಿವೆ ಎನ್ನುವ ಮಾಹಿತಿ ತಿಳಿದು ನಿರಾಸೆಯಲ್ಲಿ ಲೋಕಸೇವಾ ಆಯೋಗಕ್ಕೆ ಹಿಡಿಶಾಪ ಹಾಕುತ್ತ ವಾಪಸ್ ತೆರಳಿದರು.

    ಪರೀಕ್ಷೆಗಾಗಿ ತಿಂಗಳುಗಟ್ಟಲೇ ತರಬೇತಿ, ಹಗಲು ರಾತ್ರಿ ಓದಿ ಪರೀಕ್ಷೆಗೆ ತಯಾರಿ ಮಾಡಿಕೊಂಡಿರುತ್ತೇವೆ. ಆದರೆ, ಯಾರೋ ದುಷ್ಟರು ಹೀಗೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮೊದಲ ಸಲವೇನು ಅಲ್ಲವಲ್ಲ. ಈ ಬಗ್ಗೆ ಕೆಪಿಎಸ್ಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿಲ್ಲ ಯಾಕೆ? ಇಂಥ ಘಟನೆ ಆದಾಗೊಮ್ಮೆ ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದಷ್ಟು ತಿಂಗಳು ಅಮಾನತು ಶಿಕ್ಷೆ ಆಗುತ್ತದೆ. ನಂತರ ಮರೆತು ಬಿಡುತ್ತಾರೆ. ಹೀಗಾಗಿ ಈ ಕರ್ಮಕಾಂಡ ನಿಲ್ಲುತ್ತಲೇ ಇಲ್ಲ ಎಂದು ಅನೇಕ ಪರೀಕ್ಷಾರ್ಥಿಗಳು ಕೆಪಿಎಸ್ಸಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಪರೀಕ್ಷೆ ಹಿನ್ನೆಲೆಯಲ್ಲಿ ಆಯೋಗ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಪದೇ ಪದೆ ಸೋರಿಕೆ ಆಗುತ್ತದೆ ಎಂದರೆ ಹೇಗೆ? ನಾವು ಈಗ ಯಾದಗಿರಿಯಿಂದ ಬಂದಿದ್ದೇವೆ. ಬಸ್ ಚಾರ್ಜ್, ಲಾಡ್ಜ್ ಬಾಡಿಗೆ ಸೇರಿ ಎರಡ್ಮೂರು ಸಾವಿರ ಖರ್ಚು ಮಾಡಿದ್ದೇವೆ. ದುಡ್ಡು ಹೋಗಲಿ, ಪರೀಕ್ಷೆಗೆ ಸಾಕಷ್ಟು ತಯಾರಿ ಮಾಡಿಕೊಂಡಿರುತ್ತೇವೆ. ಹೀಗೆ ಪ್ರಶ್ನೆ ಪತ್ರಿಕೆ ಲೀಕ್ ಆಗಿ ರದ್ದು ಮಾಡಿದ್ದೇವೆ ಎಂದರೆ ಪ್ರತಿಭಾವಂತರಿಗೆ ಅನ್ಯಾಯ ಆಗುತ್ತದೆ. ಇದಕ್ಕೆ ಕಡಿವಾಣ ಯಾವಾಗ ಎಂದು ಯಾದಗಿರಿ ಜಿಲ್ಲೆಯಿಂದ ಬಂದಿದ್ದ ಪರೀಕ್ಷಾರ್ಥಿ ರಾಘವೇಂದ್ರ ಕಲಾಲ ತೀವ್ರ ಬೇಸರ ಹೊರಹಾಕಿದರು.

    ಯಾರೋ ಕೆಲ ದುಷ್ಕರ್ಮಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದಾಗ ಕಠಿಣ ಶ್ರಮ ವಹಿಸಿದವರಿಗೆ ಮನೋಬಲ ಕುಸಿಯುತ್ತಿದೆ. ಮಾನಸಿಕ ಯಾತನೆ ಅನುಭವಿಸಬೇಕಾಗುತ್ತದೆ. ಇದಕ್ಕೆ ಅತ್ಯಂತ ಬಿಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಮುಧೋಳ ನಗರದ ಬಸವರಾಜ ಬಿ.ಕೆ. ಹೇಳಿದರು. ಪರೀಕ್ಷೆ ರದ್ದಾಗಿರುವ ಮಾಹಿತಿ ಇದ್ದರೂ ಅದಾಗಲೇ ಬಸ್‌ನಲ್ಲಿ ಇದ್ದವರು, ಶನಿವಾರ ಸಂಜೆಯೇ ಧಾರವಾಡ, ಯಾದಗಿರಿ, ಬೆಂಗಳೂರು ಜಿಲ್ಲೆಗಳಿಂದ ಅನೇಕ ವಿದ್ಯಾರ್ಥಿಗಳು ಬಾಗಲಕೋಟೆಗೆ ಆಗಮಿಸಿ ವಾಸ್ತವ್ಯ ಮಾಡಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts