More

    ವೈಯಕ್ತಿಕ ಪ್ರತಿಷ್ಠೆ ಬದಿಗಿರಿಸಿ ಪಕ್ಷದ ಬೆಂಬಲಿತರನ್ನು ಗೆಲ್ಲಿಸಿ

    ಬಾಗಲಕೋಟೆ: ಗ್ರಾಪಂ ಚುನಾವಣೆಯಲ್ಲಿ ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು ಪಕ್ಷ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಪಣತೊಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

    ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಗುರುವಾರ ಕಾಂಗ್ರೆಸ್ ಗ್ರಾಮೀಣ ಘಟಕ ಹಮ್ಮಿಕೊಂಡಿದ್ದ ಪಕ್ಷದ ಹಿರಿಯರು, ಮುಖಂಡರು, ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಒಮ್ಮತದಿಂದ ಚುನಾವಣೆ ಮಾಡಿದರೆ ಮಾತ್ರ ಗೆಲುವು ಸುಲಭವಾಗುತ್ತದೆ ಎಂದರು.

    ವಾರ್ಡ್ ಹಿರಿಯರು ನಿರ್ಧರಿಸಿದ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲುವಿಗೆ ಶ್ರಮಿಸಬೇಕು. ಪಕ್ಷದ ಶಿಸ್ತು ಕಾಪಾಡಬೇಕು. ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದಲ್ಲಿ ಬರುವ 24 ಗ್ರಾಪಂಗಳಲ್ಲಿ 22 ರಲ್ಲಿ ಕಾಂಗ್ರೆಸ್ ಬೆಂಬಲಿತರು ಆಡಳಿತ ಹಿಡಿಯಬೇಕು ಎಂದು ಹೇಳಿದರು.

    ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ಗ್ರಾಪಂ ಚುನಾವಣೆ ಎಲ್ಲ ಚುನಾವಣೆಗಳಿಗೂ ದಿಕ್ಸೂಚಿಯಾಗಿದ್ದು, ಇಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಪಕ್ಷಕ್ಕೆ ಗೆಲುವು ಸುಲಭವಾಗುತ್ತದೆ. ಒಗ್ಗಟ್ಟಿನಿಂದ ಚುನಾವಣೆ ಮಾಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.

    ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ ಮಾತನಾಡಿ, ಯಾವುದೇ ಸಂದರ್ಭದಲ್ಲೂ ಒಂದು ಸ್ಥಾನಕ್ಕೆ ಇಬ್ಬರು, ಮೂವರು ಸ್ಪರ್ಧಿಸಬಾರದು. ಇದರಿಂದ ಮೂರನೇಯವರಿಗೆ ಲಾಭವಾಗಿ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಇದನ್ನು ಗಮನಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅವರ ಗೆಲುವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

    ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ತಾಪಂ ಸದಸ್ಯರಾದ ಬಸವರಾಜ ಕೆಂಜೋಡಿ, ಮಾಜಿ ಸದಸ್ಯ ಭೀಮನಗೌಡ ಯಡಹಳ್ಳಿ, ಕಾಂಗ್ರೆಸ್ ಪಕ್ಷದ ಬಾಗಲಕೋಟೆ ಗ್ರಾಮೀಣ ಅಧ್ಯಕ್ಷ ಎಸ್.ಎನ್.ರಾಂಪುರ, ಜಿಲ್ಲಾ ವಕ್ತಾರ ನಾಗರಾಜ ಹದ್ಲಿ, ಲಕ್ಷ್ಮಣ ದಡ್ಡಿ, ಐಹೊಳೆಯ ಬಸವಂತಪ್ಪ ಅಂಟರತಾನಿ, ಶಶಿಕಾಂತ ಪೂಜಾರಿ, ಸಂತೋಷ ರಾಠೋಡ, ಅಭಿಷೇಕ ಧರ್ಮರ, ಭಗವತಿಯ ಕಲ್ಲು ಹಳ್ಳೂರ, ಶಿವನಗೌಡ ಪಾಟೀಲ, ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ ಮತ್ತಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ 24 ಗ್ರಾಪಂನ ವಿವಿಧ ಗ್ರಾಮಗಳ ಕಾಂಗ್ರೆಸ್ ಪಕ್ಷದ ಮುಖಂಡರು, ಯುವಕರು, ಟಿಕೆಟ್ ಆಕಾಂಕ್ಷಿಗಳು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts