More

    ಬಿಜೆಪಿ ಸರ್ಕಾರದಿಂದ ತಾರತಮ್ಯ ನೀತಿ

    ಬಾಗಲಕೋಟೆ: ಚುನಾವಣೆ ದೃಷ್ಟಿಯಿಂದ ಹಾಗೂ ಜಾತಿಗಳ ನಡುವೆ ಕಲಹ ಸೃಷ್ಟಿಸುವ ಉದ್ದೇಶದಿಂದ ರಾಜ್ಯ ಬಿಜೆಪಿ ಸರ್ಕಾರ ನಿಗಮ,ಪ್ರಾಧಿಕಾರ ಸ್ಥಾಪಿಸುತ್ತಿದೆ. ಅಲ್ಲದೆ, ಹಿಂದುಳಿದ ವರ್ಗಗಳ ಸಮುದಾಯಗಳಲ್ಲಿ ಒಂದು ಕಣ್ಣಿಗೆ ಸುಣ್ಣು ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ, ವಿಪ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀ ನಾರಾಯಣ ಆರೋಪಿಸಿದರು.

    ಶಿರಾ ಉಪ ಚುನಾವಣೆ ಮುನ್ನ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ದೃಷ್ಟಿಯಿಂದ ಮರಾಠ, ಲಿಂಗಾಯತ ಅಭಿವೃದ್ಧಿ ನಿಗಮ, ಪ್ರಾಧಿಕಾರ ಸ್ಥಾಪಿಸಿದರು. ತನ್ಮೂಲಕ ಜಾತಿಗಳ ನಡುವೆ ಒಡಕು ಮೂಡಿಸುವ ಹುನ್ನಾರ ಮಾಡುತ್ತಿದೆ. ನಿಗಮ, ಪ್ರಾಧಿಕಾರ ಸ್ಥಾಪನೆಗೆ ಕಾಂಗ್ರೆಸ್ ವಿರೋಧವಿಲ್ಲ. ಆದರೆ, ಎಲ್ಲ ಸಮುದಾಯಗಳನ್ನು ಸಮಾನವಾಗಿ ನೋಡುತ್ತಿಲ್ಲ. ಅನುದಾನದಲ್ಲಿಯೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ಪ್ರವರ್ಗ 1 ರಲ್ಲಿ 95, 2 ಎ ರಲ್ಲಿ 102 ಸೇರಿ ಹಿಂದುಳಿದ ವರ್ಗಗಳಲ್ಲಿ 197 ಜಾತಿಗಳಿವೆ. ಇವುಗಳಲ್ಲಿ ಕೇವಲ 13 ಜಾತಿಗಳಿಗೆ ಮಾತ್ರ ನಿಗಮ, ಪ್ರಾಧಿಕಾರ ರಚಿಸಲಾಗಿದೆ. ಇದರಿಂದ ಇನ್ನುಳಿದ ಸಮುದಾಯಗಳಲ್ಲಿ ಅಸಮಾಧಾನ ಶುರುವಾಗಿದೆ. ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ., ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ 5 ಕೋಟಿ ರೂ. ನೀಡಲಾಗಿದೆ. ರಾಜ್ಯದಲ್ಲಿ ಶೇ.16 ರಷ್ಟು ಜನಸಂಖ್ಯೆ ಹೊಂದಿರುವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಸರ್ಕಾರ ಕೊಟ್ಟಿದೆ. ಒಕ್ಕಲಿಗ ಸಮುದಾಯ ಪ್ರಾಧಿಕಾರಕ್ಕೆ ಮನವಿ ಮಾಡಿ 2500 ಕೋಟಿ ರೂ. ಬೇಡಿಕೆ ಇಟ್ಟಿದೆ ಎಂದರು.

    ಇನ್ನು ಎಲ್ಲ ಹಿಂದುಳಿದ ವರ್ಗಗಳ ಜನಾಂಗಕ್ಕಾಗಿ ಬಹುವರ್ಷಗಳ ಹಿಂದೆ ದೇವರಾಜ ಅರಸು ನಿಗಮ ಸ್ಥಾಪಿಸಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಈ ನಿಗಮಕ್ಕೆ 400 ಕೋಟಿ ರೂ. ನೀಡಿದ್ದರು. ಬಿ.ಎಸ್.ಯಡಿಯೂರಪ್ಪ ಕೇವಲ 80 ಕೋಟಿ ರೂ. ನೀಡಿದ್ದಾರೆ. ಇದೆಲ್ಲ ಗಮನಿಸಿದರೆ ಸರ್ಕಾರ ಎಷ್ಟೊಂದು ಅನ್ಯಾಯ ಮಾಡುತ್ತಿದೆ ಎನ್ನುವುದು ಗೊತ್ತಾಗುತ್ತದೆ ಎಂದ ಅವರು, ಡಿ.15 ರೊಳಗೆ ರಾಜ್ಯದ ಎಲ್ಲ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ನಾಗರಾಜ ಹದ್ಲಿ, ಕಾಶಿನಾಥ ಹುಡೇದ, ಹಾಜಿಸಾಬ ದಂಡಿನ, ಚನ್ನವೀರ ಅಂಗಡಿ, ಸಿದ್ದು ದೇವಗೋಳ ಇತರರು ಇದ್ದರು.

    ನೇಕಾರರಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿ
    ರಾಜ್ಯದಲ್ಲಿ ಹಿಂದುಳಿದ ವರ್ಗಗಳ 102 ಜಾತಿಗಳಲ್ಲಿ ನೇಕಾರ ಸಮುದಾಯದಲ್ಲಿ 29 ಒಳ ಪಂಗಡಗಳು ಇವೆ. 60 ಲಕ್ಷ ಜನ ಅಂದರೆ ಶೇ.8.3 ಜನಸಂಖ್ಯೆ ಹೊಂದಿದೆ. ಶೇ.16 ರಷ್ಟು ಜನ ಸಂಖ್ಯೆ ಇರುವ ಲಿಂಗಾಯತರಿಗೆ 500 ಕೋಟಿ ರೂ.ನೀಡುವದಾದರೆ ನೇಕಾರರಿಗೆಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿ 250 ಕೋಟಿ ರೂ. ಸರ್ಕಾರ ಮೀಸಲಿಡಬೇಕು ಎಂದು ಲಕ್ಷ್ಮೀನಾರಾಯಣ ಒತ್ತಾಯಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts