More

    ಗುಣಮಟ್ಟ ಪರಿಶೀಲಿಸಿ ಖರೀದಿಸಿ

    ಬಾಗಲಕೋಟೆ: ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ ಇಲಾಖೆ, ಶಿಕ್ಷಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಗ್ರಾಹಕರಿಲ್ಲದೆ ವರ್ತಕರಿಗೆ ವ್ಯವಹಾರ ಮಾಡಲು ಸಾಧ್ಯವಿಲ್ಲ. ಆದರೆ, ವರ್ತಕರು ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಿಗೆ ಅನ್ಯಾಯ ಮಾಡುತ್ತಿದ್ದು, ಗ್ರಾಹಕರು ವ್ಯವಹರಿಸುವಾಗ ಎಚ್ಚರಿಕೆಯಿಂದ ಇರಬೇಕು. ಲಾಕ್‌ಡೌನ್ ಸಮಯದಲ್ಲಿ ವ್ಯಾಪಾರ ವಹಿವಾಟು ಸ್ಥಗಿತದ ಹಿನ್ನೆಲೆಯಲ್ಲಿ ವಸ್ತುಗಳನ್ನು ಖರೀದಿಸುವಾಗ ಎಕ್ಸಪೈರ್ ಡೇಟ್ ಪರಿಶೀಲಿಸಿದ ನಂತರವೇ ಖರೀದಿಸಬೇಕು. ಉತ್ತಮ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

    ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ರಂಗನಗೌಡ ದಂಡಣ್ಣವರ ಮಾತನಾಡಿ, ವಸ್ತುಗಳ ಖರೀದಿಯಲ್ಲಿ ಗ್ರಾಹಕರು ಎಚ್ಚೆತ್ತುಕೊಳ್ಳದಿದ್ದರೆ ಕಷ್ಟವಾಗುತ್ತದೆ. ಆದ್ದರಿಂದ ಈ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

    ನ್ಯಾಯವಾದಿ ಎಸ್.ಎನ್.ಕರ್ಜಗಿ ಉಪನ್ಯಾಸ ನೀಡಿ, 1986 ಡಿ.24 ರಂದು ಆರಂಭವಾದ ಈ ಕಾಯ್ದೆ ಪ್ರತಿ ಜಿಲ್ಲೆಯಲ್ಲಿಯೂ ಒಂದೊಂದು ಶಾಖೆಯನ್ನು ತೆರೆಯುವ ಮೂಲಕ ಗ್ರಾಹಕನಿಗೆ ಆಗುತ್ತಿರುವ ಮೋಸಕ್ಕೆ ನ್ಯಾಯ ಒದಗಿಸಲಾಗುತ್ತಿದೆ. ಇಂದಿನ ವ್ಯವಸ್ಥೆಯಲ್ಲಿ ಒಬ್ಬರನ್ನು ಒಬ್ಬರು ನೋಡದೆ ವ್ಯವಹರಿಸುತ್ತಿದ್ದಾರೆ. ಅವರು ಮಾಡುವ ಮೋಸ, ವಂಚನೆ ಗೊತ್ತಾಗುವುದಿಲ್ಲ. ಇದರಿಂದ ಅನೇಕ ಪೇಕ್ ಕಂಪನಿಗಳು ಗ್ರಾಹಕರಿಗೆ ಮೋಸ ಮಾಡುತ್ತಿವೆ. ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಕಡಿಮೆ ಇದೆ. ಗ್ರಾಹಕರು ಎಚ್ಚರಿಕೆಯಿಂದ ವಸ್ತುಗಳನ್ನು ಖರೀದಿಸಬೇಕು. ಮೋಸ ಹೋದಲ್ಲಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬಹುದಾಗಿದೆ ಎಂದ ಅವರು, ಗ್ರಾಹಕರ ಸಂರಕ್ಷಣಾ ಕಾಯ್ದೆ-2019ರ ಹೊಸ ವೈಶಿಷ್ಟೃಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಸರ್ಕಾರಿ ಆದರ್ಶ ಶಾಲೆ ವಿದ್ಯಾರ್ಥಿಗಳಿಂದ ಗ್ರಾಹಕ ಕಾನೂನು ಅರಿವು ಕುರಿತು ಕಿರು ನಾಟಕ ಪ್ರದರ್ಶನ ನಡೆಯಿತು. ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಸುಮಂಗಲಾ ಹದ್ಲಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಶಶಿಧರ ಪೂಜಾರಿ ಉಪಸ್ಥಿತರಿದ್ದರು.

    ಗ್ರಾಹಕರು ಇಂದು ತಂತ್ರಜ್ಞಾನದ ಯುಗದಲ್ಲಿ ಸಿಲುಕಿದ್ದು, ಒಂದಿಲ್ಲೊಂದು ರೀತಿಯಲ್ಲಿ ಮೋಸಕ್ಕೆ ಒಳಗಾಗುತ್ತಿದ್ದಾರೆ. ಗ್ರಾಹಕರ ಸಂರಕ್ಷಣೆಗಾಗಿ ಕಾಯ್ದೆಗಳಿದ್ದು, ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಇಂದು ಜಾಹೀರಾತುಗಳು ಗ್ರಾಹಕರನ್ನು ವಿವಿಧ ದೃಷ್ಟಿಯಿಂದ ಸೆಳೆಯುತ್ತವೆ. ಸಾರ್ವಜನಿಕರು ಗ್ರಾಹಕರ ಹಕ್ಕುಗಳ ಸಂರಕ್ಷಣೆಗಾಗಿ 1986 ರಲ್ಲಿ ಜಾರಿಯಾದ ಗ್ರಾಹಕರ ಹಿತರಕ್ಷಣಾ ಕಾಯ್ದೆಯ ಸದುಪಯೋಗ ಪಡೆದುಕೊಳ್ಳಬೇಕು.
    ಶಾರದಾ ಕೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts