More

    ಲಾಕ್‌ಡೌನ್ ಅರಿತು ಪಾಲಿಸಿ

    ಬಾಗಲಕೋಟೆ: ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಜತೆಗೆ ಜನರು ಕೈ ಜೋಡಿಸಬೇಕು. ಲಾಕ್‌ಡೌನ್ ನಿಯಮಗಳನ್ನು ಅರ್ಥಮಾಡಿಕೊಂಡು ಪಾಲನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.

    ಜಿಲ್ಲೆಯಲ್ಲಿ ಲಾಕ್‌ಡೌನ್ ಸರಿಯಾಗಿ ಆಗುತ್ತಿಲ್ಲ ಎನ್ನುವುದು ಸರಿಯಲ್ಲ. ಜನರು ಬುದ್ಧಿವಂತರಿದ್ದಾರೆ. ಪ್ಯಾಕೇಜ್ ಘೋಷಣೆಯಾದ ಮೇಲೆ ಲಾಕ್‌ಡೌನ್ ಕಡ್ಡಾಯವಾಗಿ ಘೋಷಣೆ ಆಗುತ್ತದೆ. ಬಾಗಲಕೋಟೆ ಸೇರಿ ಎಲ್ಲೆಡೆ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಯಾಗುತ್ತದೆ. ಸಾರ್ವಜನಿಕರು ಸಂಪೂರ್ಣ ಬೆಂಬಲ ನೀಡಿದಾಗ ಮಾತ್ರ ಕಠಿಣ ಸಂದರ್ಭದಿಂದ ಹೊರ ಬರಲು ಸಾಧ್ಯವಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಆರೋಗ್ಯ ಸಿಬ್ಬಂದಿ, ್ರಂಟ್‌ಲೈನ್ ವರ್ಕರ್ಸ್‌ ಹಾಗೂ 45 ವರ್ಷ ಮೇಲ್ಪಟ್ಟ ಹಾಗೂ ದೀರ್ಘಕಾಲ ಕಾಯಿಲೆ ಇರುವ 2.46 ಲಕ್ಷ ಜನರಿಗೆ ಮೊದಲ ಹಂತದ ಲಸಿಕೆ ನೀಡಲಾಗಿದೆ. 2ನೇ ಹಂತದಲ್ಲಿ 53,269 ಜನರಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಸೇರಿ ಒಟ್ಟು 2.99 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

    ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 6 ಸರ್ಕಾರಿ ಹಾಗೂ 33 ಖಾಸಗಿ ಆಸ್ಪತ್ರೆಗಳಲ್ಲಿನ ಲಭ್ಯವಿರುವ ಬೆಡ್‌ಗಳ ಮಾಹಿತಿಯನ್ನು ಎನ್‌ಐಸಿ ಪೋರ್ಟಲ್‌ನಲ್ಲಿ ಪ್ರತಿದಿನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1,859 ವಿವಿಧ ಬೆಡ್‌ಗಳ ಪೈಕಿ 1,442 ಬೆಡ್ ಬಳಕೆಯಾಗುತ್ತಿದ್ದು, ಇನ್ನು 417 ಬೆಡ್‌ಗಳು ಚಿಕಿತ್ಸೆಗೆ ಲಭ್ಯವಿರುತ್ತವೆ. ವಿವಿಧ ಬೆಡ್‌ಗಳ ಲಭ್ಯತೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿನ 24 ಗಂಟೆ ಕಾಲ ಕೋವಿಡ್ ವಾರ್‌ರೂಮ್ ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಸೇರಿ ಒಟ್ಟು 10 ಸಿಸಿಸಿ ಕೇಂದ್ರಗಳನ್ನು ತೆರೆಯಲಾಗಿದ್ದು, 866 ಬೆಡ್‌ಗಳ ಪೈಕಿ 664 ಬೆಡ್‌ಗಳು ಖಾಲಿ ಇರುತ್ತವೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರಿಗೆ ಪ್ರತಿದಿನ 18 ರಿಂದ 19 ಕೆಎಲ್ ಆಕ್ಸಿಜನ್ ಅವಶ್ಯವಿದ್ದು, 17 ರಿಂದ 18 ಕೆಎಲ್ ಆಕ್ಸಿಜನ್ ಸದ್ಯ ಪೂರೈಕೆ ಮಾಡಲಾಗುತ್ತಿದೆ. ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಲದೆ, ಪ್ರತಿದಿನ 150 ರಿಂದ 200 ವರೆಗೆ ರೆಮ್‌ಡೆಸಿವಿರ್ ಚುಚ್ಚುಮದ್ದು ಅವಶ್ಯಕತೆಯಿದ್ದು, ಇಲ್ಲಿವರೆಗೆ 7,128 ರೆಮ್‌ಡೆಸಿವಿರ್ ಚುಚುಮದ್ದು ಸ್ವೀಕೃತವಾಗಿದ್ದು, ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಮಾಸ್ಕ್ ಮತ್ತು ಪರಸ್ಪರ ಅಂತರ ಪಾಲಿಸದ 80,601 ಜನರಿಗೆ ಒಟ್ಟು 77.62 ಲಕ್ಷ ರೂ. ದಂಡ ವಿಧಿಸಿ 29 ಪ್ರಕರಣ ದಾಖಲಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ನಿಯಮ ಉಲ್ಲಂಘನೆಯಡಿ 7,390 ವಾಹನ ಜಪ್ತಿ ಮಾಡಲಾಗಿದೆ. ಮದುವೆಗಳಿಗೂ ಅನುಮತಿ ನಿಷೇಧಿಸಲಾಗಿರುತ್ತದೆ ಎಂದು ತಿಳಿಸಿದರು.

    ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಇತರರು ಇದ್ದರು.

    ಮರಣ ಪ್ರಮಾಣ ತಡೆಗೆ ಆದ್ಯತೆ
    ಕೋವಿಡ್ ಎರಡನೇ ಅಲೆ ಹಳ್ಳಿಗಳಿಗೂ ಹರಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

    ಬಿವಿವಿ ಸಂಘದಲ್ಲಿನ ವೈದ್ಯರನ್ನು ನೀಡಲಾಗಿದ್ದು, ಇಬ್ಬರು ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರನ್ನೊಳಗೊಂಡ ತಂಡವನ್ನು ರಚಿಸಿ ಗ್ರಾಮದ ಜನರ ತಪಾಸಣೆ ಕೈಗೊಳ್ಳಲಾಗುತ್ತಿದೆ. ಕೆಮ್ಮು, ನೆಗಡಿ, ಜ್ವರ ಇದ್ದವರಿಗೆ ಮೆಡಿಷಿನ್ ಕಿಟ್ ನೀಡಲಾಗುತ್ತಿದೆ. ಇದರಿಂದ ಪ್ರಾರಂಭಿಕ ಹಂತದಲ್ಲಿಯೇ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ. ಬರುವ ಜುಲೈ ಮತ್ತು ಅಕ್ಟೋಬರ್ ಒಳಗಾಗಿ ಎಲ್ಲರಿಗೂ ಲಸಿಕೆ ದೊರೆಯುವಂತೆ ಕೇಂದ್ರ ಸರ್ಕಾರ ಕ್ರಮವಹಿಸುತ್ತಿದೆ. ಮರಣ ಪ್ರಮಾಣ ಕಡಿಮೆಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts